ಜಿಲ್ಲೆ

ಕಷ್ಟವಾದರೂ ಮೇ 3ರ ವರೆಗೆ ಸಹಕರಿಸಿ

ಕುಮಟಾ: ಹೊರ ಜಿಲ್ಲೆ, ರಾಜ್ಯದಲ್ಲಿ ಸಿಲುಕಿಕೊಂಡಿರುವ ಜಿಲ್ಲೆಯವರನ್ನು ಮೇ 3ರ ಒಳಗೆ ಲಾಕ್​ಡೌನ್ ಅವಧಿಯಲ್ಲಿ ಮನೆಗೆ ಕರೆಸುವುದು ಅಸಾಧ್ಯ. ಈ ವಿಷಯದಲ್ಲಿ ಎಲ್ಲರ ಕ್ಷೇಮದ ದೃಷ್ಟಿಯಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಟ್ಟುನಿಟ್ಟಿನ ಆದೇಶವನ್ನು ಎಲ್ಲರೂ ಪಾಲಿಸಲೇಬೇಕು. ಎಷ್ಟೇ ಕಷ್ಟವಾದರೂ ಜನ ಸಹಕರಿಸಬೇಕು ಎಂದು ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ತಿಳಿಸಿದರು.

ಪಟ್ಟಣದ ಹವ್ಯಕ ಸಭಾಭವನದಲ್ಲಿ ಬುಧವಾರ ಪ್ರಗತಿ ಪರಿಶೀಲನೆ ಸಭೆ ಅವರು ನಡೆಸಿದರು.

ನೆರೆಯ ಜಿಲ್ಲೆಗಳಲ್ಲಿ ಹಾಗೂ ಅನ್ಯ ರಾಜ್ಯಗಳಲ್ಲಿ ಸಿಲುಕಿಕೊಂಡಿರುವವರ ಕುಟುಂಬದವರು ಮನೆಬಾಗಿಲಲ್ಲಿ ಬಂದು ರೋಧಿಸುತ್ತಿದ್ದಾರೆ ಎಂದು ಶಾಸಕ ದಿನಕರ ಶೆಟ್ಟಿ ಪ್ರಸ್ತಾಪಿಸಿದ ವಿಷಯಕ್ಕೆ ಸಚಿವ ಹೆಬ್ಬಾರ ಪ್ರತಿಕ್ರಿಯಿಸಿದರು.

ಇಂದಿನಿಂದಲೇ ಕೃಷಿ ಹಾಗೂ ಮೀನುಗಾರಿಕೆ ನಿರಾಳವಾಗಿ ನಡೆಯಬೇಕು. ಕರೊನಾ ಜೊತೆ ಜಿಲ್ಲೆಯಲ್ಲಿ ಮಂಗನ ಕಾಯಿಲೆ ಹಾಗೂ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ವಿಶೇಷ ಮುತುವರ್ಜಿ ವಹಿಸಬೇಕಿದೆ. ಮಳೆಗಾಲ ಆರಂಭದೊಳಗೆ ಆಗಬೇಕಾದ ಕೆಲಸ ಬಹಳ ಇದೆ. ಮಳೆಯಿಂದ ಹಾನಿಯಾದವರಿಗೆ ಕೂಡಲೇ ಪರಿಹಾರ ವಿತರಿಸಬೇಕು. ಅಭಿವೃದ್ಧಿ ಕಾಮಗಾರಿ, ನೀರಾವರಿ, ಅಡಕೆ, ಅಕ್ಕಿ ಹಾಗೂ ಹಿಟ್ಟಿನ ಗಿರಣಿಗಳು, ಚಿಕ್ಕ ಕೈಗಾರಿಕೆಗಳು ಮುಂತಾದವು ಕಾರ್ಯಾರಂಭಿಸಬಹುದು. ಕಾಮಗಾರಿಗಳಿಗೆ ಬೇಕಾದ ಕಚ್ಚಾ ವಸ್ತುಗಳಿಗೆ ಅನುಮತಿ ಕೊಡಬೇಕು.

ಶಾಸಕ ದಿನಕರ ಶೆಟ್ಟಿ ಮಾತನಾಡಿ, ಪಟ್ಟಣ ಪ್ರದೇಶದಲ್ಲಿದ್ದು ಹಳ್ಳಿಗಾಡಿನಲ್ಲಿ ಕೃಷಿ ಜಮೀನು ಹೊಂದಿದವರೆಗೆ ಹಸಿರು ಪಾಸ್ ನೀಡುವುದಾಗಿ ಸಚಿವರು ಹೇಳಿದ್ದು ಕಾರ್ಯರೂಪಕ್ಕೆ ಬರಬೇಕು. ಮಳೆಯಿಂದ ಮನೆ ಹಾನಿಯಾದವರಿಗೆ ಸರ್ಕಾರ ಕೊಡುವ 95 ಸಾವಿರ ಸಾಕಾಗದು ಕನಿಷ್ಟ 7 ಲಕ್ಷರೂ ಕೊಡಬೇಕು. ತೊರ್ಕೆಯಲ್ಲಿ ಖಾರ್ಲೆಂಡ್ ಒಡೆದು ಇಡೀ ಪ್ರದೇಶ ಕ್ಷಾರಮಯವಾಗಿದೆ. ಅಂತರ್ಜಲ ಸವುಳಾಗಿದೆ. ತುರ್ತು ದುರಸ್ತಿ ಕಾಮಗಾರಿ ಆಗಬೇಕಿದೆ ಎಂದರು.

ಜಿಲ್ಲಾಧಿಕಾರಿ ಡಾ. ಹರೀಶಕುಮಾರ ಮಾತನಾಡಿ, ಗ್ರಾಮಾಂತರ ಪ್ರದೇಶಗಳಲ್ಲಿ ರೈತರಿಗೆ ಓಡಾಡುವುದಕ್ಕೆ ಪಾಸ್​ಅಗತ್ಯವಿಲ್ಲ. ಪಾಸ್ ಅಗತ್ಯವಿರುವವರಿಗೆ ಪಾಸ್ ಮಾಡಿಕೊಡುತ್ತೇವೆ. ಹೊರಜಿಲ್ಲೆ-ರಾಜ್ಯದವರನ್ನು ನಿಯಮ ಮೀರಿ ಕರೆಸಲಾಗದು. ಮೇ 4ರ ಬಳಿಕ ಉತ್ತರ ಕನ್ನಡ ಜಿಲ್ಲೆಯವರನ್ನು ಕರೆಸಿ ತಪಾಸಣೆ ನಡೆಸಲಾಗುವುದು. ಒಬ್ಬರಿಂದ ಬೇರೆಯವರು ಸಮಸ್ಯೆ ಎದುರಿಸಬಾರದು ಎಂಬ ಕಾರಣಕ್ಕೆ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗುತ್ತಿದೆ ಎಂದರು.

ಡಿಎಚ್​ಒ ಡಾ. ಅಶೋಕಕುಮಾರ, ಡಿವೈಎಸ್​ಪಿ ಗೌತಮ್ ಉಪವಿಭಾಗಾಧಿಕಾರಿ ಅಜಿತ್ ಎಂ.ರೈ, ತಹಸೀಲ್ದಾರ್ ಮೇಘರಾಜ ನಾಯ್ಕ, ತಾಪಂ ಇಒ ಸಿ.ಟಿ.ನಾಯ್ಕ, ಜಿಪಂ ಸದಸ್ಯ ಗಜಾನನ ಪೈ, ಪ್ರದೀಪ ನಾಯಕ ದೇವರಬಾವಿ, ಗಾಯತ್ರಿ ಗೌಡ, ತಾಲೂಕು ಆರೋಗ್ಯಾಧಿಕಾರಿ ಡಾ. ಆಜ್ಞಾ ನಾಯಕ ಇನ್ನಿತರರು ಇದ್ದರು. ಸಭೆಗೂ ಮುನ್ನ ಸಚಿವ ಹೆಬ್ಬಾರ ಅವರು ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು.

ಕಾನೂನು , ಅಭಿವೃದ್ಧಿ ಸಮತೂಗಿಸಿ ಕೆಲಸ ಮಾಡಿ: ಹೊನ್ನಾವರ: ಜಿಲ್ಲೆಯ ಹಿತದೃಷ್ಟಿಯಿಂದ ಒಂದು ಕಡೆ ಕಾನೂನು ಒಂದು ಕಡೆ ಅಭಿವೃದ್ಧಿ ಹೀಗೆ ಎರಡನ್ನೂ ಸಮತೂಗಿಸಿ ಅಧಿಕಾರಿಗಳು ಕೆಲಸವನ್ನು ಮಾಡಬೇಕು ಎಂದು ಸಚಿವ ಶಿವರಾಮ ಹೆಬ್ಬಾರ ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದ ಹವ್ಯಕ ಸಭಾಭವನದಲ್ಲಿ ಕೊವಿಡ್ 19 ಹಾಗೂ ಕುಡಿಯುವ ನೀರಿಗೆ ಸಂಬಂಧಿಸಿದಂತೆ ಗುರುವಾರ ಆಯೋಜಿಸಿದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶಾಸಕ ಸುನೀಲ ನಾಯ್ಕ ಮಾತನಾಡಿ, ತಾಲೂಕಿನಲ್ಲಿ ಕುಡಿಯುವ ನೀರಿನ ಪೂರೈಕೆಗೆ ಇರುವ ತೊಡಕುಗಳನ್ನು ಬಗೆಹರಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು. ಮರಳು ಸಿಗುತ್ತಿಲ್ಲ. ಸರ್ಕಾರಿ ಕಾಮಗಾರಿಗಳಿಗೂ ತಡೆಯುಂಟಾಗುತ್ತಿದೆ. ಅಧಿಕೃತ ಮರಳುಗಣಿಗಾರಿಕೆಗೆ ಅವಕಾಶ ನೀಡಬೇಕು ಎಂದರು.

ಜಿಲ್ಲಾಧಿಕಾರಿ ಹರೀಶಕುಮಾರ ಮಾತನಾಡಿ, ಜನಹಿತವನ್ನು ದೃಷ್ಟಿಯಲ್ಲಿಟ್ಟುಕೊಂಡು ಕೆಲಸವನ್ನು ಮಾಡಲಾಗುವುದು. ಮೇ 4ರೊಳಗೆ ಮರಳು ಸಮಸ್ಯೆ ಪರಿಹರಿಸಲು ಕ್ರಮಕೈಗೊಳ್ಳಲಾಗುವುದು. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಯೋಜನೆಯನ್ನು ಸಿದ್ದಪಡಿಸಲಾಗಿದ್ದು ಕಾಮಗಾರಿ ನಡೆಯಲಿದೆ. ಕೋವಿಡ್ 19 ಸಮಸ್ಯೆ ಬಗೆಹರಿಸಲು ಎಲ್ಲರೂ ಸಹಕಾರ ನಡಬೇಕು ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ರೋಷನ್, ಉಪವಿಭಾಗಾಧಿಕಾರಿ ಭರತ್ ಎಸ್. ಡಿವೈಎಸ್​ಪಿ ಗೌತಮ್ ತಹಸೀಲ್ದಾರ್ ವಿವೇಕ ಶೇಣ್ವಿ, ಸಿಪಿಐ ವಸಂತ ಆಚಾರಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಉಸ್ತುವಾರಿ ಸಚಿವರಿಗೆ ಮನವಿ: ಹೊನ್ನಾವರ ತಾಲೂಕಿನಲ್ಲಿ ಇತ್ತೀಚೆಗೆ ಅಕಾಲಿಕವಾಗಿ ಸುರಿದ ಗಾಳಿ ಮಳೆಗೆ ವಿವಿಧ ಭಾಗಗಳಲ್ಲಿ ಮನೆಗಳಿಗೆ ಹಾನಿಯಾಗಿದೆ. ಮನೆಗಳ ಮೇಲ್ಛಾವಣಿ ಕುಸಿದಿದೆ. ತೋಟಗಳಲ್ಲಿ ಅಡಕೆ ತೆಂಗಿನ ಮರಗಳು ನೆಲಕ್ಕೆ ಉರುಳಿವೆ. ಹಾನಿಗೆ ಒಳಗಾದವರಿಗೆ ಪರಿಹಾರಧನ ಒದಗಿಸಬೇಕು ಎಂದು ಬಿಜೆಪಿ ಹೊನ್ನಾವರ ಮಂಡಲ ಅಧ್ಯಕ್ಷ ರಾಜೇಶ ಭಂಡಾರಿ ಅವರು ಗುರುವಾರ ಹೊನ್ನಾವರಕ್ಕೆ ಆಗಮಿಸಿದ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಅವರಿಗೆ ಮನವಿ ಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ಸಚಿವರು, ಹಾನಿಗೊಳಗಾದವರಿಗೆ ಪರಿಹಾರ ಒದಗಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಬೇಕಾಬಿಟ್ಟಿ ಓಡಾಡಲು ಬಿಡಬೇಡಿ: ಲಾಕ್​ಡೌನ್ ನಿಯಮ ಸಡಿಲವಾಗಿದೆ ಎಂದು ಜನರಿಗೆ ಬೇಕಾಬಿಟ್ಟಿ ಓಡಾಡಲು ಅವಕಾಶ ನೀಡಬೇಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಅಧಿಕಾರಿಗಳಿಗೆ ಸೂಚಿಸಿದರು.

ತಾಲೂಕು ಆಸ್ಪತ್ರೆ ಪರಿಶೀಲನೆ ನಡೆಸಿದ ನಂತರ ಅಂಕೋಲಾ ಸತ್ಯಾಗ್ರಹ ಸ್ಮರಕ ಭವನದಲ್ಲಿ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು. ಕೃಷಿಕರಿಗೆ ಅನುಕೂಲವಾದ ಸೌಲಭ್ಯಗಳ ಅನುಮತಿಯ ಪಾಸ್ ನೀಡಿ, ಮೀನುಗಾರರಿಗೆ ಯಾವುದೇ ತೊಂದರೆಯಾಗದಂತೆ ಅಧಿಕಾರಿಗಳು ಕಾರ್ಯನಿರ್ವಹಿಸಿ ಎಂದು ಸೂಚಿಸಿದರು.

ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, ತರಕಾರಿಗಳನ್ನು ಮನೆಗೆ ಕೊಂಡೊಯ್ದು ಮಾರುವಂತೆ ಮೀನನ್ನು ಮನೆ ಮನೆಗೆ ಕೊಂಡೊಯ್ದು ಮಾರಾಟ ಮಾಡುವ ವ್ಯವಸ್ಥೆ ಮಾಡಬೇಕು ಎಂದರು.

ಜಿಲ್ಲಾಧಿಕಾರಿ ಡಾ. ಹರೀಶಕುಮಾರ, ಎಸ್​ಪಿ ಶಿವಪ್ರಕಾಶ ದೇವರಾಜು, ಉಪವಿಭಾಗಾಧಿಕಾರಿ ಅಜಿತ್, ತಾಪಂ ಇಒ ಪಿ.ವೈ.ಸಾವಂತ, ಕುಮಾರ್, ತಹಸೀಲ್ದಾರ್ ಉದಯ ಕುಂಬಾರ, ಪುರಸಭೆ ಮಖ್ಯಾಧಿಕಾರಿ ಬಿ.ಪ್ರಹ್ಲಾದ್ ಇದ್ದರು.