ಆನೇಕಲ್: ರೈತರಿಗೆ ನೆರವಾಗುವ ನಿಟ್ಟಿನಲ್ಲಿ ತರಕಾರಿಗಳನ್ನು ಖರೀದಿ ಮಾಡಿ ಬಡವರಿಗೆ ಉಚಿತವಾಗಿ ನೀಡಲಾಗುತ್ತಿದೆ ಎಂದು ಸಂಸದ ಡಿ.ಕೆ. ಸುರೇಶ್ ಹೇಳಿದರು. ಸೂರ್ಯ ನಗರದಲ್ಲಿ ತರಕಾರಿ ವಿತರಣೆ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿ, ಕರೊನಾ ಹಿನ್ನೆಲೆಯಲ್ಲಿ ರೈತರು ಸಂಕಷ್ಟಕೀಡಾಗಿದ್ದು ಮಾರುಕಟ್ಟೆ , ಸಾರಿಗೆ ವ್ಯವಸ್ಥೆ ಇಲ್ಲದೆ ಬೆಳೆಯನ್ನು ಜಮೀನುಗಳಲ್ಲಿ ಬಿಡುತ್ತಿದ್ದಾರೆ. ಇದರಿಂದ ನಷ್ಟ ತಪ್ಪಿಸಲು ರೈತರಿಂದ ತರಕಾರಿ ಖರೀದಿಸಿ ಬಡವರಿಗೆ ಹಂಚುವ ಕೆಲಸ ಮಾಡಲಾಗುತ್ತಿದೆ. ಬೇರೆ ರಾಜ್ಯಗಳಿಂದ ಬಂದು ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿರುವವರನ್ನು ಗುರುತಿಸಿ ಅವರಿಗೆ ಬೇಕಾದ ಸಹಾಯ ಮಾಡಿದ್ದೇವೆ. ತರಕಾರಿ ಹಂಚುವ ಕಾರ್ಯಕ್ರಮಕ್ಕೆ ಬಮುಲ್ ಮಾಜಿ ಅಧ್ಯಕ್ಷ ರಮೇಶ್ ಚಾಲನೆ ನೀಡಿದ್ದಾರೆ. ಕ್ಯಾರೆಟ್, ಟೊಮ್ಯಾಟೊ ಕಲ್ಲಂಗಡಿ, ಹೂ ಕೋಸುಗಳನ್ನು ರೈತರಿಂದ ಖರೀದಿಸಿ ಬಡವರಿಗೆ ನೀಡಲಾಗುತ್ತಿದೆ. ಕಷ್ಟದಲ್ಲಿರುವವರಿಗೆ ಸ್ಪಂದಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದರು. ಎಪಿಎಂಸಿ ಮಾರುಕಟ್ಟೆಯನ್ನು ಅಗ್ರಹಾರಕ್ಕೆ ಶ್‌ಟಿ ಮಾಡಿರುವುದರಿಂದ ವ್ಯಾಪಾರಸ್ಥರಿಗೆ ಅನನುಕೂಲವಾಗಿದೆ. ರಸ್ತೆ ಚಿಕ್ಕದಾಗಿರುವುದರಿಂದ ಮಾರುಕಟ್ಟೆಗೆ ಹೋಗಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಮಾರುಕಟ್ಟೆಯನ್ನು ಅತ್ತಿಬೆಲೆಗೆ ಶ್‌ಟಿ ಮಾಡಿದರೆ ಅನುಕೂಲವಾಗುತ್ತದೆ. ಈ ಬಗ್ಗೆ ಕೃಷಿ ಮಾರುಕಟ್ಟೆ ಹಾಗೂ ತೋಟಗಾರಿಕೆ ಸಚಿವರ ಬಳಿ ಮನವಿ ಮಾಡುತ್ತೇನೆ ಎಂದು ತಿಳಿಸಿದರು. ಬಮುಲ್ ಮಾಜಿ ಅಧ್ಯಕ್ಷ ಹಾಗೂ ಕಾರ್ಯಕ್ರಮದ ಆಯೋಜಕ ಆರ್.ಕೆ. ರಮೇಶ್ ಮಾತನಾಡಿ, ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 50 ಸಾವಿರ ಕುಟುಂಬಗಳಿಗೆ 10 ಕೆಜಿ ತರಕಾರಿ ನೀಡುವ ಕೆಲಸಕ್ಕೆ ಮುಂದಾಗಿದ್ದೇವೆ ಎಂದು ಹೇಳಿದರು. ಹೆನ್ನಾಗರ ಗ್ರಾಪಂ ಅಧ್ಯಕ್ಷ ಆರ್.ಕೆ. ಕೇಶವರೆಡ್ಡಿ , ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಉಪಾಧ್ಯಕ್ಷ ಆರ್.ಪುನೀತ್, ಎಪಿಎಂಸಿ ಅಧ್ಯಕ್ಷ ನರೇಂದ್ರಬಾಬು ಮತ್ತಿತರರಿದ್ದರು.
ಅತ್ತಿಬೆಲೆ, ಬೊಮ್ಮಸಂದ್ರ ಕೈಗಾರಿಕಾ ಪ್ರದೇಶಗಳಲ್ಲಿ ವಾಸಿಸುವವರಿಗೆ ಸರ್ಕಾರದಿಂದ ಆಹಾರದ ಕಿಟ್ ಕಡಿಮೆಯಾಗಿದ್ದು ಇನ್ನಷ್ಟು ಕಿಟ್‌ಗಳನ್ನು ನೀಡಬೇಕು. ಬಿ.ಶಿವಣ್ಣ, ಶಾಸಕ