ಹೊಳಲ್ಕೆರೆ: ಯಾರ ಮಾತಿಗೂ ಮರುಳಾಗದೆ, ಕಷ್ಟ-ಸುಖಕ್ಕೆ ಸ್ಪಂದಿಸುವವರಿಗೆ ಮತ ಚಲಾಯಿಸಿ ಎಂದು ಶಾಸಕ ಡಾ.ಎಂ.ಚಂದ್ರಪ್ಪ ಮನವಿ ಮಾಡಿದರು.
ತಾಲೂಕಿನ ಲೋಕದೊಳಲು ಗ್ರಾಮದಲ್ಲಿ 1 ಕೋಟಿ ರೂ.ವೆಚ್ಚದ ಕೆರೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಕ್ಷೇತ್ರದಲ್ಲಿ ಕೆರೆ-ಕಟ್ಟೆ, ಚೆಕ್ ಡ್ಯಾಂ, ಆಸ್ಪತ್ರೆ, ಬಸ್ ನಿಲ್ದಾಣ ಇನ್ನಿತರೆ ಅಭಿವೃದ್ಧಿ ಕಾರ್ಯಗಳನ್ನು ನಿರ್ಮಿಸಿದ್ದೇನೆ. ಬಡ ವಿದ್ಯಾರ್ಥಿಗಳ ಅನುಕೂಲಕ್ಕೆ 200ಕ್ಕೂ ಹೆಚ್ಚು ಶಾಲೆ, ಪಿಯುಸಿ, ಪದವಿ ಕಾಲೇಜುಗಳು, ಪ್ರತ್ಯೇಕ ವಸತಿ ನಿಲಯಗಳನ್ನು ತೆರೆಯಲಾಗಿದೆ. ಆದ್ದರಿಂದ ಶಿಕ್ಷಣ ಕೊಡಿಸಿ, ಮಕ್ಕಳ ಭವಿಷ್ಯ ರೂಪಿಸಿ. ಅದಕ್ಕಿಂತ ದೊಡ್ಡ ಆಸ್ತಿ ಮತ್ತೊಂದಿಲ್ಲ ಎಂದು ಪಾಲಕರಿಗೆ ಸಲಹೆ ನೀಡಿದರು.
ರಾಜಕಾರಣಿಗೆ ಮತ್ಸರವಿರಬಾರದು. ಪರೋಪಕಾರದ ಗುಣವಿದ್ದರೆ ಭಗವಂತ ಒಳ್ಳೆಯದನ್ನೇ ಮಾಡುತ್ತಾನೆ. ನುಡಿದಂತೆ ನಡೆಯುವುದು ಮಾನವ ಧರ್ಮ. ಮುಂದಿನ ದಿನಗಳಲ್ಲಿ ಕೆರೆ ತುಂಬಿಸಿ ದೇಗುಲವನ್ನು ಸುಂದರವಾಗಿ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.
ಗ್ರಾಪಂ ಸದಸ್ಯರಾದ ತಿಮ್ಮೇಶ್, ಮೀನಮ್ಮ, ಚಂದ್ರಶೇಖರ್, ಗವಿರಂಗಪ್ಪ, ಪುಟ್ಟರಂಗಯ್ಯ, ವಕೀಲರ ಸಂಘದ ಅಧ್ಯಕ್ಷ ಶಿವಕುಮಾರ್, ರಂಗಸ್ವಾಮಿ ಹಾಗೂ ಗ್ರಾಮದ ಮುಖಂಡರು ಇದ್ದರು.