ಮುಳಬಾಗಿಲು: ಮಕರ ಸಂಕ್ರಾಂತಿಯಂದು ಬೆಂಗಳೂರಿನ ಗವಿಗಂಗಾಧರೇಶ್ವರ ದೇವರ ಮೇಲೆ ಸೂರ್ಯ ಕಿರಣ ಬೀಳುವಂತೆ ಮುಳಬಾಗಿಲಿನ ವಿರೂಪಾಕ್ಷಿ ಗ್ರಾಮದ ವಿರೂಪಾಕ್ಷೇಶ್ವರ ಆತ್ಮಲಿಂಗ ಮತ್ತು ಶಿವಲಿಂಗದ ಮೇಲೆ ಶಿವರಾತ್ರಿಯಂದು ಸೂರ್ಯಕಿರಣ ಬೀಳುವುದನ್ನು ಕಾಣಬಹುದು.
ದೇಗುಲದ ಇತಿಹಾಸ: ಅತ್ರಿ ಮಹಾಮುನಿಯಿಂದ ಶ್ರೀ ವಿರೂಪಾಕ್ಷೇಶ್ವರ ಶಿವಲಿಂಗ ಪ್ರತಿಷ್ಠಾಪನೆಯಾಗಿದೆ ಎನ್ನಲಾಗಿದೆ. ವಿಜಯನಗರ ಅರಸರ ಆಳ್ವಿಕೆಯಲ್ಲಿ ಮುಳಬಾಗಿಲು ಉಪರಾಜಧಾನಿಯಾಗಿತ್ತು, ಆಗ ಮುಳವಾಯಿ ಎಂಬ ಹೆಸರಿನಿಂದ ನಗರದವನ್ನು ಕರೆಯಲಾಗುತ್ತಿತ್ತು. ಕ್ರಿ.ಶ 1410-1470ರ ಅವಧಿಯಲ್ಲಿ ವಿಜಯನಗರ ಸಾಮ್ರಾಜ್ಯದ ಪ್ರಧಾನಮಂತ್ರಿಗಳಲ್ಲಿ ಒಬ್ಬನಾಗಿದ್ದ ಲಕ್ಕಣದಂಡೇಶ ಈ ಭಾಗಕ್ಕೆ ಆಗಮಿಸಿದಾಗ ಹುತ್ತದಲ್ಲಿ ಇರುವ ಆತ್ಮಲಿಂಗ ಮತ್ತು ಶಿವಲಿಂಗಗಳ ಮರು ಪ್ರತಿಷ್ಠಾಪನೆ ಬಗ್ಗೆ ಕನಸಿನಲ್ಲಿ ಬಂದಿದ್ದು, ಈ ಸ್ಥಳದಲ್ಲೇ ವಿಜಯನಗರದ ವಿರೂಪಾಕ್ಷೇಶ್ವರ ದೇವಾಲಯದ ಮಾದರಿಯಲ್ಲಿ ದೇವಾಲಯವನ್ನು ನಿರ್ಮಿಸಿದ್ದಾರೆಂಬ ಮಾತು ಜನ ಜನಿತವಾಗಿದೆ.
ದೇವಾಲಯವನ್ನು ಲಕ್ಕಣ ದಂಡೇಶನ ಮಕ್ಕಳಾದ ಅಕ್ಕಣ್ಣ, ಮಾದಣ್ಣರ ಕಾಲದಲ್ಲಿ ಕಟ್ಟಿಸಲಾಗಿದ್ದು, ದೇವಾಲಯದ ಮುಂಭಾಗದ ಮಹಾದ್ವಾರ ಪೂರ್ಣಗೊಳ್ಳದೆ ಹಾಗೆಯೇ ಉಳಿದಿದೆ. ವಿರೂಪಾಕ್ಷಿ ದೇವಾಲಯಕ್ಕೆ 2 ಸುತ್ತಿನ ಕೋಟೆಯಿದ್ದು, ಸುತ್ತಲೂ 7ಸುತ್ತಿನ ಕೋಟೆ ಇತ್ತೆಂದು ಹೇಳಲಾಗಿದೆ. ದೇವಾಲಯದ 3ನೇ ಮಹಾದ್ವಾರ ಪೂರ್ಣಗೊಳ್ಳುವ ಮೊದಲೇ ಬಹುಮನಿ ಸುಲ್ತಾನರ ದಾಳಿಯಿಂದ ನಿಂತಿದೆ ಎಂಬುದು ಐತಿಹ್ಯ.
ದೇವಾಲಯದ ಆವರಣದ ನೈಋತ್ಯ ಭಾಗದಲ್ಲಿ ಗಣಪತಿ ದೇವಾಲಯವಿದ್ದು, ವಾಯುವ್ಯ ಭಾಗದಲ್ಲಿ ಪಾರ್ವತಿ ಅಮ್ಮನವರ ದೇವಾಲಯವಿದೆ. ಆವರಣದ ಉತ್ತರ ಭಾಗದಲ್ಲಿ ದುರ್ಗಾದೇವಿ (ಭಗುಳಾಂಬಿಕೆ), ಗ್ರಾಮದಲ್ಲಿರುವ ಮಾರೆಮ್ಮ ದೇವರು ಸೇರಿ ವಿರೂಪಾಕ್ಷೇಶ್ವರ ದೇವರ ಶಕ್ತಿ ಬಿಂದುವಾದ ದೇವಾಲಯದ ನಂದಿ ಮುಂಭಾಗದಲ್ಲಿ ನಿಂತು ಪ್ರಾರ್ಥನೆ ಸಲ್ಲಿಸಿದರೆ ಇಷ್ಟಾರ್ಥಗಳು, ಕಷ್ಟ ಕಾರ್ಪಣ್ಯಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆ ಭಕ್ತರದ್ದಾಗಿದೆ.
ಆತ್ಮಲಿಂಗದ ವಿಶೇಷ: ಆತ್ಮಲಿಂಗ ಪ್ರತಿದಿನ ಮೂರು ಬಣ್ಣ ಹೊಂದುತ್ತದೆ, ಬೆಳಗ್ಗೆ ಕೆಂಪುವರ್ಣ, ಮಧ್ಯಾಹ್ನ ಸ್ಪಟಿಕ ವರ್ಣ, ಸಂಜೆ ಮಧು ವರ್ಣ (ಜೇನು) ಬಣ್ಣದಲ್ಲಿ ಕಾಣುವುದು ಈ ದೇವಾಲಯದ ಆತ್ಮಲಿಂಗದ ವಿಶೇಷವಾಗಿದೆ. ಅತ್ರಿ ಮಹಾಮುನಿಗಳ ತಪೋಭೂಮಿಯಾದ ಕ್ಷೇತ್ರದ ಶಿವಲಿಂಗದ ಮುಂದೆ ನಿಂತು ಪ್ರಾರ್ಥನೆ ಮಾಡಿದರೆ ಎಲ್ಲ ಪಾಪಗಳು ಕಳೆದು ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ಪ್ರತಿತಿ ಇದೆ.
ದೇವಾಲಯದಲ್ಲಿ ಒಂದೇ ಶಿವಲಿಂಗವಿರುವುದು ಸಾಮಾನ್ಯವಾದರೆ ವಿರೂಪಾಕ್ಷಿಯ ವಿರೂಪಾಕ್ಷೇಶ್ವರ ದೇವಾಲಯದಲ್ಲಿ ಎರಡು ಶಿವಲಿಂಗಗಳಿರುವುದು ವಿಶೇಷವಾಗಿದೆ.
ವಿಶೇಷ ಪೂಜೆಗಳು: ಪ್ರತಿನಿತ್ಯ ಎರಡು ಲಿಂಗಗಳಿಗೂ ವಿಶೇಷ ಪೂಜೆಗಳು ನಡೆಯುತ್ತದೆ. ಪ್ರತಿ ಸೋಮವಾರ, ಕಾರ್ತಿಕಮಾಸ, ರಥಸಪ್ತಮಿಯಂದು ಶ್ರೀ ಪ್ರಸನ್ನ ಮಹಾಗಣಪತಿ, ಶ್ರೀ ಕಾಮಾಕ್ಷಿದೇವಿ ಸಮೇತ, ಶ್ರೀ ಪ್ರಸನ್ನ ವಿರೂಪಾಕ್ಷೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ನೆರವೇರುತ್ತದೆ. ರಥೋತ್ಸವ ಅಂಗವಾಗಿ 13ದಿನಗಳ ಕಾಲ ದೇವಾಲಯದಲ್ಲಿ ವಿಶೇಷ ಪೂಜೆ, ಮಹಾಶಿವರಾತ್ರಿ, ಆರಿದ್ರ ನಕ್ಷತ್ರ, ಪ್ರದೋಷ, ಮಾಸ ಶಿವರಾತ್ರಿ, ಭಾನುವಾರ, ಸೋಮವಾರ, ಶುಕ್ರವಾರ ನಿತ್ಯ ಪೂಜೆ ಇರುತ್ತದೆ.
ಗಣಪತಿ ಪೂಜೆ: ಮುಳಬಾಗಿಲಿನಿಂದ 3 ಕಿಮೀ ದೂರದಲ್ಲಿರುವ ದೇಗುಲದಲ್ಲಿ ಗಣಪತಿಗೆ ಪೂಜೆ ಸಲ್ಲಿಸಿದರೆ ವಿದ್ಯಾಭ್ಯಾಸ, ಓದು ಬರಹದಲ್ಲಿ ಅಭಿವೃದ್ಧಿ ಹೊಂದಿ, ಮರೆವು, ಬುದ್ಧಿಮಾಂದ್ಯತೆ, ಅಂಗವಿಕಲತೆ ಮುಂತಾದ ತೊಂದರೆಗಳಿಗೆ ಪರಿಹಾರ ದೊರೆಯುತ್ತದೆ ಎಂಬ ನಂಬಿಕೆಯಿದೆ. ಪಾರ್ವತಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರೆ, ಪಾರ್ವತಿ ಸ್ವಯಂವರ ಪೂಜೆ, ಗಿರಿಜಾ ಕಲ್ಯಾಣೋತ್ಸವ ಮಾಡಿಸಿದರೆ ಮದುವೆ ತೊಂದರೆ ನಿವಾರಣೆ, ಯುವಕ ಯುವತಿಯರಿಗೆ ವಿವಾಹ ಯೋಗ ಲಭಿಸುತ್ತದೆ, ದುರ್ಗಾದೇವಿ (ಭಗುಳಾಂಬಿಕೆ) ದೇವರಿಗೆ ಪೂಜೆ ಸಲ್ಲಿಸುವುದರಿಂದ ದುಷ್ಟ ಶಕ್ತಿಗಳ ನಿವಾರಣೆ, ವಾಮಾಚಾರ ನಿಯಂತ್ರಣ, ಕುಜದೋಷ, ಗ್ರಹದೋಷ ನಿವಾರಣೆಯಾಗುತ್ತದೆ ಎಂಬ ನಂಬಿಕಯೂ ಇದೆ.
ದೇವಾಲಯ ಪುರಾತತ್ವ ಇಲಾಖೆಯ ವ್ಯಾಪ್ತಿಯಲ್ಲಿದ್ದು, ಯಾವುದೇ ಅಭಿವೃದ್ಧಿ ಕಾರ್ಯಗಳಿಗೂ ಅನುಮತಿ ಅಗತ್ಯ. ಮುಜರಾಯಿ ಇಲಾಖೆಯ ಸಿ ಗ್ರೇಡ್ ದೇಗುಲದಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕೆಲಸಗಳಾಗಿಲ್ಲ. ಇಷ್ಟು ದೊಡ್ಡ ದೇವಾಲಯ ಸ್ವಚ್ಛತೆಗೆ ಸಿಬ್ಬಂದಿಯೂ ಇಲ್ಲ, ಅರ್ಚಕರಿಗೆ ತಸ್ತೀಕ್ ಜತೆಗೆ ಪ್ರತಿ ತಿಂಗಳು ಮುಜರಾಯಿ ಇಲಾಖೆ ನೀಡುವ 300 ರೂ. ವೇತನದಿಂದ ಪೂಜಾ ಕಾರ್ಯಗಳು ನಡೆಸಿಕೊಂಡು ಹೋಗಲಾಗುತ್ತಿದೆ. ವಿ.ಎಸ್.ಕುಮಾರಸ್ವಾಮಿ ದೀಕ್ಷಿತ್, ದೇವಾಲಯದ ಅರ್ಚಕ ಪುರಾತನ ದೇವಾಲಯವನ್ನು ಸರ್ಕಾರ ಇನ್ನಾದರೂ ಅಭಿವೃದ್ಧಿಪಡಿಸಿ, ಪ್ರವಾಸಿ ಕ್ಷೇತ್ರವನ್ನಾಗಿ ರೂಪಿಸಿದರೆ, ಸ್ಥಳಿಯ ಉದ್ಯೋಗವೂ ಸೃಷ್ಟಿಯಾಗುತ್ತದೆ. ಇದರಿಂದ ಸರ್ಕಾರಕ್ಕೂ ತೆರಿಗೆ ಸಂಗ್ರಹ ಜತೆಗೆ ದೇವಾಲಯಕ್ಕೂ ವರಮಾನ ಬರುತ್ತದೆ. ಜಿ.ವಿ.ವರದಪ್ಪ, ತಾ.ಪಿ.ಡಬ್ಲು.ಡಿ. ಗುತ್ತಿಗೆದಾರರ ಅಧ್ಯಕ್ಷ.