ಜಿಲ್ಲೆ

ಕಷ್ಟ ಕಾಲದಲ್ಲಿ ಜೀವ ಉಳಿಸುವ ರಕ್ತದಾನಿ ಬದುಕು ಧನ್ಯ

ಹುಬ್ಬಳ್ಳಿ: ಕಷ್ಟ ಕಾಲದಲ್ಲಿ ಜೀವ ಉಳಿಸುವ ರಕ್ತದಾನಿಗಳ ಬದುಕು ಧನ್ಯ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ಉತ್ತರ ಪ್ರಾಂತ ಸಹ ಕಾರ್ಯವಾಹ ಶ್ರೀಧರ ನಾಡಿಗೇರ ಅಭಿಪ್ರಾಯಪಟ್ಟರು.

ಶಾ ದಾಮಜಿ ಜಾದವಜಿ ಛೇಡಾ ಮೆಮೋರಿಯಲ್ ರಾಷ್ಟ್ರೋತ್ಥಾನ ರಕ್ತನಿಧಿ ಕೇಂದ್ರದಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರ ಹಾಗೂ ರಕ್ತದಾನಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದಾನ ಮಾಡಿದ 5 ದಿನದೊಳಗೆ ರಕ್ತವನ್ನು ಮರು ಉತ್ಪತ್ತಿ ಮಾಡಿಕೊಳ್ಳುವ ಶಕ್ತಿ ನಮ್ಮ ದೇಹಕ್ಕಿದೆ. ಹೊಸ ರಕ್ತ ಬರುತ್ತದೆ. ಅದರಿಂದ ಹೃದಯಕ್ಕೂ ಒಳ್ಳೆಯದು. ಹಾಗಾಗಿ, ಆರೋಗ್ಯವಂತರೆಲ್ಲರೂ ಪ್ರತಿ 3 ತಿಂಗಳಿಗೊಮ್ಮೆ ರಕ್ತದಾನ ಮಾಡಬೇಕು ಎಂದರು.

ರಕ್ತನಿಧಿಯ ಆಡಳಿತಾಧಿಕಾರಿ ದತ್ತಮೂರ್ತಿ ಕುಲಕರ್ಣಿ ಮಾತನಾಡಿ, ಲಾಕ್​ಡೌನ್ ಸಂಕಷ್ಟದ ಸಂದರ್ಭದಲ್ಲಿ ರಕ್ತದ ಭಾರಿ ಅಭಾವ ಸೃಷ್ಟಿಯಾಗಿತ್ತು. ಆ ಸಂದರ್ಭದಲ್ಲಿ 1800 ಯೂನಿಟ್ ರಕ್ತ ಸಂಗ್ರಹಿಸಿ, ಅಂದಾಜು 4000 ರೋಗಿಗಳಿಗೆ ನೀಡಲಾಗಿದೆ. ರಾಷ್ಟ್ರೋತ್ಥಾನ ರಕ್ತನಿಧಿ ಹಿತೈಷಿಗಳ ಸಂಘ ಭಾನುವಾರದಿಂದ ಪ್ರಾರಂಭವಾಗಿದ್ದು, ಆ ಮೂಲಕ ಹೆಚ್ಚು ಹೆಚ್ಚು ರಕ್ತ ಸಂಗ್ರಹಿಸಲಾಗುವುದು ಎಂದರು.

20ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದ ಹಾಗೂ ಶಿಬಿರಗಳನ್ನು ಆಯೋಜಿಸಿದ್ದ ರಕ್ತದಾನಿಗಳನ್ನು ಸನ್ಮಾನಿಸಲಾಯಿತು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗೇಶ ಕಲಬುರ್ಗಿ, ವೀರೇಂದ್ರ ಛೇಡಾ, ವೈದ್ಯಾಧಿಕಾರಿ ಎಸ್.ಎಸ್. ಗಂಗೊಳ್ಳಿ, ಭೀರಪ್ಪ ಕುರಿ, ಡಾ. ಶ್ರೇಯಾ, ಕಿರಣ ಗುಡ್ಡದಕೇರಿ, ಶಿವಾನಂದ ಸತ್ತಿಗೇರಿ, ಮಂಜುನಾಥ ಹೆಬಸೂರ, ಸುಧೀರ ಶೆಟ್ಟಿ ಇತರರು ಉಪಸ್ಥಿತರಿದ್ದರು.

73 ಬಾರಿ ರಕ್ತದಾನ!: ಶ್ರೀ ಬಸವಾನಂದ ಸ್ವಾಮೀಜಿ 73ನೇ ಬಾರಿ ರಕ್ತದಾನ ಮಾಡುವ ಮೂಲಕ ಯುವಕರಿಗೆ ಪ್ರೇರಣೆ ನೀಡಿದರು. ತಾವು 15 ವರ್ಷಗಳಿಂದ ರಕ್ತದಾನ ಶಿಬಿರ ಹಾಗೂ ರಕ್ತದಾನ ಮಾಡುತ್ತಿರುವುದಾಗಿ ತಿಳಿಸಿದರು.