ಜಿಲ್ಲೆ

ಕಷ್ಟ ಎಂದವರನ್ನು ಕಾಪಾಡುವ ಶ್ರೀದೊಡ್ಡಮ್ಮ ಚಿಕ್ಕಮ್ಮ

ಬೇಲೂರು: ಕಷ್ಟ ಎಂದು ಬೇಡಿ ಬಂದ ಭಕ್ತರನ್ನು ಕಾಪಾಡುತ್ತಿರುವ ಬೇಲೂರು ಪಟ್ಟಣದ ಅಂಬೇಡ್ಕರ್ ನಗರದಲ್ಲಿರುವ ಶ್ರೀ ದೊಡ್ಡಮ್ಮ ಚಿಕ್ಕಮ್ಮ ಭಕ್ತರ ಆರಾಧ್ಯ ದೈವವಾಗಿ ಇಷ್ಟಾರ್ಥ ನೆರವೇರಿಸುತ್ತ ಗ್ರಾಮ ದೇವತೆಯಾಗಿದ್ದಾರೆ.


ಭಕ್ತರು ಹಾಗೂ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿರುವ ಬೇಲೂರಿನ ಶ್ರೀ ಚನ್ನಕೇಶವಸ್ವಾಮಿ ದೇಗುಲದಿಂದ ಕೆಲವೇ ಮೀಟರ್‌ಗಳ ಅಂತರದಲ್ಲಿ ಗೆಂಡೇಹಳ್ಳಿಗೆ ತೆರಳುವ ರಸ್ತೆಯ ಅಂಬೇಡ್ಕರ್‌ನಗರದಲ್ಲಿ ನೆಲೆ ನಿಂತಿರುವ ಶ್ರೀ ದೊಡ್ಡಮ್ಮ ಚಿಕ್ಕಮ್ಮ ದೇವರು ತನ್ನದೇ ಆದ ಮಹಿಮೆ ಹೊಂದಿದೆ.


ಪಟ್ಟಣದಲ್ಲಿ ನೆಲೆಸಿರುವ ಶ್ರೀ ದೊಡ್ಡಮ್ಮ ಚಿಕ್ಕಮ್ಮ ದೇವಸ್ಥಾನವು ಶತಮಾನಗಳ ಹಿಂದೆಯೇ ನಿರ್ಮಿಸಲಾಗಿತ್ತು ಎಂಬ ಐತಿಹಾಸವಿದೆ. ಈ ದೇಗುಲದಲ್ಲಿ ಮಂಗಳವಾರ ಹಾಗೂ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ದೇವರ ಗರ್ಭಗುಡಿಯಲ್ಲಿ ಶ್ರೀ ದೊಡ್ಡಮ್ಮ ಚಿಕ್ಕಮ್ಮ ಕಲ್ಲಿನ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ.


ದೊಡ್ಡಮ್ಮ ಚಿಕ್ಕಮ್ಮಳ ಭಕ್ತರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಇಂದಿಗೂ ದೇವರಲ್ಲಿ ಅಪ್ಪಣೆ ಕೇಳುವ ಪದ್ಧತಿ ನಡೆದುಕೊಂಡು ಬಂದಿದೆ. ಜತೆಗೆ ಭಕ್ತರ ಕೆಲಸ ಆಗುತ್ತದೆ ಅಥವಾ ಇಲ್ಲ ಎನ್ನುವುದಕ್ಕೆ ದೇವರಿಗೆ ಮುಡಿಸಿದ ಹೂವಿನ ಪ್ರಸಾದದ ರೂಪದಲ್ಲಿ ಎಡ ಅಥವಾ ಬಲ ಭಾಗದಲ್ಲಿ ಬಿದ್ದು ಸೂಚನೆ ನೀಡುತ್ತದೆ. ಪ್ರತಿ ವರ್ಷ ಏಪ್ರಿಲ್‌ನಲ್ಲಿ ದೇಗುಲದ ಆವರಣದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಕೊಂಡೋತ್ಸವ ಹಾಗೂ ಜಾತ್ರಾ ಮಹೋತ್ಸವ ನಡೆಯುತ್ತದೆ.


ಹಿಂದೆ ಸಾಂಕ್ರಾಮಿಕ ರೋಗ ಹರಡಿದ ಸಂದರ್ಭದಲ್ಲಿ ಭಕ್ತರು ಶ್ರೀ ದೊಡ್ಡಮ್ಮ ಚಿಕ್ಕಮ್ಮ ದೇವರಿಗೆ ಪೂಜೆ ಸಲ್ಲಿಸಿ ಎಲ್ಲರನ್ನೂ ಕಾಯಿಲೆಯಿಂದ ರಕ್ಷಿಸುವಂತೆ ಬೇಡಿಕೊಂಡಿದ್ದರಿಂದ ಈ ಗ್ರಾಮಕ್ಕೆ ರೋಗ ಬಂದಿರಲಿಲ್ಲ ಎನ್ನುತ್ತಾರೆ ಹಿರಿಯರು. ವರ್ಷಕ್ಕೊಮ್ಮೆ ದೇವರ ಹಬ್ಬವನ್ನು ಅದ್ದೂರಿಯಾಗಿ ಗ್ರಾಮಸ್ಥರ ನೇತೃತ್ವದಲ್ಲಿ ಆಚರಿಸಲಾಗುತ್ತದೆ. ಭಕ್ತರಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಗ್ರಾಮದ ಯಾರ ಮನೆಯಲ್ಲದರೂ ಮಕ್ಕಳಿಗೆ, ದೊಡ್ಡವರಿಗೆ ಮುಖ ಕೈ ಕಾಲುಗಳಲ್ಲಿ ಚುಕ್ಕಿ ಚುಕ್ಕಿಯಾಗಿ ಜ್ವರ(ಅಮ್ಮ) ಬಂದರೆ ದೇವರಿಗೆ ಪೂಜೆ ಸಲ್ಲಿಸುತ್ತೇನೆಂದು ಹರಕೆ ಕಟ್ಟಿಕೊಂಡರೆ ಕೆಲ ದಿನಗಳಲ್ಲೇ ವಾಸಿಯಾದ ನಿದರ್ಶನಗಳಿವೆ.