ಚಿಂತಾಮಣಿ: ತಾಲೂಕಿನ ಮೈಲಾಪುರ ಗ್ರಾಮದ ಕೃಷಿ ಹೊಂಡಕ್ಕೆ ಯುವಕನೊಬ್ಬ ಬಿದ್ದು ಮೃತಪಟ್ಟಿದ್ದಾನೆ.
ತಾಲೂಕಿನ ನಾರಾಯಣಹಳ್ಳಿ ವಿನಾಯಕ (24) ಮೃತ. ಭಾನುವಾರ ರಾತ್ರಿ ಶೌಚಕ್ಕೆ ತೆರಳುವುದಾಗಿ ಹೇಳಿ ಹೋಗಿದ್ದ ವಿನಾಯಕ, ತಡರಾತ್ರಿಯಾದರೂ ಮನೆಗೆ ಬಂದಿರಲಿಲ್ಲ. ಇದರಿಂದ ಗಾಬರಿಯಾದ ಕುಟುಂಬದವರು ಹುಡುಕಾಟ ನಡೆಸಿದ್ದು, ಸೋಮವಾರ ಬೆಳಗ್ಗೆ ತಾಲೂಕಿನ ಕೈವಾರ ಹೋಬಳಿಯ ಮೈಲಾಪುರದ ಕೃಷಿ ಹೊಂಡದ ಸಮೀಪ ವಿನಾಯಕನ ದ್ವಿಚಕ್ರವಾಹನ, ಚಪ್ಪಲಿ ಮತ್ತು ಮೊಬೈಲ್ ಸಿಕ್ಕಿದ್ದವು. ಕೃಷಿ ಹೊಂಡ ಪರಿಶೀಲಿಸಿದಾಗ ಮೃತದೇಹ ಪತ್ತೆಯಾಗಿದೆ. ಶೌಚದ ಬಳಿಕ ಕಾಲು ತೊಳೆಯಲೆಂದು ಹೊಂಡಕ್ಕೆ ತೆರಳಿದ್ದು, ಈ ವೇಳೆ ಕಾಲುಜಾರಿ ಬಿದ್ದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಶವ ಮೇಲೆತ್ತಿದ್ದು, ಚಿಂತಾಮಣಿ ಹೊರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಎಸ್‌ಐ ಪ್ರಕಾಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಚಿಕ್ಕಬಳ್ಳಾಪುರ: ನಗರದ ಲಾಡ್ಜ್‌ನಲ್ಲಿ ಅನುವಾನಾಸ್ಪದ ರೀತಿಯಲ್ಲಿ ಸುಮಾರು 35 ವರ್ಷದ ಮಹಿಳೆ ಮೃತದೇಹ ಪತ್ತೆಯಾಗಿದೆ.
ಇಲ್ಲಿನ ಖಾಸಗಿ ಲಾಡ್ಜ್‌ಗೆ ಪುರುಷನೊಂದಿಗೆ ಭಾನುವಾರ ರಾತ್ರಿ ಬಂದಿದ್ದಳು ಎನ್ನಲಾಗಿದ್ದು, ಸೋಮವಾರ ಮಧ್ಯಾಹ್ನ 12 ಆದರೂ ಕೊಠಡಿ ಬಾಗಿಲು ತೆಗೆಯದ ಹಿನ್ನೆಲೆಯಲ್ಲಿ ಸಿಬ್ಬಂದಿ ಸ್ಥಳೀಯ ಪೊಲೀಸರಿಗೆ ವಾಹಿತಿ ನೀಡಿದ್ದಾರೆ. ಬಳಿಕ ಬದಲಿ ಕೀಲಿ ಬಳಸಿ ಬಾಗಿಲು ತೆಗೆದಾಗ ಹಾಸಿಗೆಯ ಮೇಲೆ ಮಹಿಳೆ ದೇಹ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಜಿಲ್ಲಾಸ್ಪತ್ರೆಗೆ ರವಾನಿಸಿದ್ದು, ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಸಿಸಿ ಕ್ಯಾಮರಾ ಪರಿಶೀಲಿಸಿದ್ದು, ಮಹಿಳೆಯರನ್ನು ಕರೆದುಕೊಂಡು ಬಂದಿದ್ದ ಚಿಕ್ಕಬಳ್ಳಾಪುರ ತಾಲೂಕಿನ ಚಿಕ್ಕಕಿರುಗಂಬಿಯ ನರಸಿಂಹ ಎಂಬಾತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಗೌರಿಬಿದನೂರು: ನಗರದ ಹೊರವಲಯದ ಬೈಪಾಸ್ ರಸ್ತೆಯ ಸೇತುವೆಯ ಬಳಿಯ ಕ್ರಿಮಿನಾಶಕ ಸೇವಿಸಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಗರದ ಸುಮಂಗಲಿ ಬಡಾವಣೆಯ ಜಿ.ಶೇಖರ್(47) ಮೃತ. ಪೊಲೀಸರು ಸ್ಥಳ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.