ಕಂಪ್ಲಿ: ಪಟ್ಟಣದ ಸಕ್ಕರೆ ಕಾರ್ಖಾನೆ ಪ್ರದೇಶ ಬಳಿ ಎಲ್‌ಎಲ್‌ಸಿ ಕಾಲುವೆ ದಡದಲ್ಲಿ ಬೆಳೆದ ವೃಕ್ಷಗಳಲ್ಲಿ ನಾನಾ ಜಾತಿಯ ಪಕ್ಷಿಗಳು ಬಿಡು ಬಿಟ್ಟಿದ್ದು, ಸುಂದರ ಲೋಕ ಸೃಷ್ಟಿಯಾಗಿದೆ. ಸಂಜೆ ಆರು ಗಂಟೆಯೊಳಗೆ ಸಹಸ್ರಾರು ಪಕ್ಷಿಗಳು ಉತ್ತರ ಕಡೆಯಿಂದ ಗುಂಪುಗುಂಪಾಗಿ ಹಾರಿ ಬರುವುದರಿಂದ ನೋಡುಗರು ಮನಸೋತಿದ್ದಾರೆ.
ಮಿಂಚು ಕೆಂಬರಲು(ಗ್ಲಾಸಿ ಐಬೀಸ್), ದಾಸ ಕೊಕ್ಕರೆ (ಪೇಂಟೆಡ್ ಸ್ಪಾರ್ಕ್), ಬಾಯ್‌ಕಳಕ(ಓಪನ್ ಬಿಲ್)ಕೊಕ್ಕರೆ, ಬಿಳಿ ಕೆಂಬರಲು,(ವೈಟ್ ಐಬೀಸ್), ಬೆಳ್ಳಕ್ಕಿ, ಕಾಗೆ, ಬಕಪಕ್ಷಿ, ನೀರಹಕ್ಕಿ ವೃಕ್ಷದತ್ತ ಹಾರಿ ಬಂದು ಕುಳಿತುಕೊಳ್ಳುವ ಪರಿ ನೋಡುವುದೇ ಒಂದು ತರಹದ ಸೊಬಗಾಗಿದೆ. ನೀರ ಹಕ್ಕಿಗಳು ಹಾರಿ ಬಂದು ವೃಕ್ಷದಲ್ಲಿ ಸೇರುವುದನ್ನು ನೋಡಲು ಪಕ್ಷಿ ಪ್ರಿಯರು ಇಲ್ಲಿಗೆ ಆಗಮಿಸುತ್ತಾರೆ. ಆಕಾಶದಲ್ಲಿ ಅರ್ಧ ಕಿಮೀ.ನಷ್ಟು ಅಗಲದ ಅಡ್ಡ ಗೆರೆಯಂತೆ ಸಾಗಿ ಬರುತ್ತವೆ.
ಗದ್ದೆಗಳಲ್ಲಿ ಪೆಡ್ಲರ್ ಹೊಡೆಯುವುದರಿಂದ ಹೊರಗೆ ಬರುವ ಹುಳು ಹುಪ್ಪಟೆಯನ್ನು ಆರಿಸಿ ತಿನ್ನುವ ಹಕ್ಕಿಗಳಾಗಿವೆ. ಕರೆಯದಿದ್ದರೂ ಬರುವ, ಕೂಲಿ ಕೇಳದ ಕಾರ್ಮಿಕರಂತೆ ಹಾನಿಕಾರಕ ಹುಳು ಹುಪ್ಪಟೆ ತಿಂದು ರೈತರ ಮಿತ್ರರಂತಿವೆ. ಕೀಟನಾಶಕ ಉಳಿಸುವ ಮೂಲಕ ಪರಿಸರ ಸ್ನೇಹಿ ಹಕ್ಕಿಗಳಾಗಿವೆ. ಆಹಾರ ಹುಡುಕಿಕೊಂಡು ಹೋಗುವ ಸ್ಥಳೀಯ ಹಕ್ಕಿಗಳಾಗಿದ್ದು, ವರ್ಷವೀಡಿ ಸಂಚರಿಸುತ್ತವೆ. ಇವುಗಳ ರಕ್ಷಣೆಗಾಗಿ ಅರಣ್ಯ ಇಲಾಖೆ, ರೈತರು ಹೊಲ ಗದ್ದೆ ದಡಗಳಲ್ಲಿ ಕರಿಜಾಲಿ, ಅರಳಿ, ಬಾರೆ, ಬಸಳೆ, ಆಲ, ಹತ್ತಿ ಮರ ಬೆಳೆಸಬೇಕು ಎಂದು ಹೊಸಪೇಟೆ ವನ್ಯಜೀವಿ ಸಂಶೋಧಕ ಡಾ.ಸಮದ್ ಕೊಟ್ಟೂರು ಒತ್ತಾಸೆಯಾಗಿದೆ.
ಚಳಿಗಾಲ, ಬೇಸಿಗೆಗೆ ಆಫ್ರಿಕಾ, ಯುರೋಪ್‌ಖಂಡದಿಂದ ಮಿಂಚು ಕೆಂಬರಲು ಹಕ್ಕಿಗಳು ಗುಂಪು ಗುಂಪಾಗಿ ವಲಸೆ ಬರುತ್ತವೆ. ಯಥೇಚ್ಛ ಆಹಾರ ಸಿಗುವಲ್ಲಿ ಕೆಲ ದಿನ ಇದ್ದು ಸಾಗುತ್ತವೆ. ಹೆಚ್ಚಾಗಿ ಭಾರತದ ಪಶ್ಚಿಮ ಭಾಗಗಳತ್ತ ಸಂಚರಿಸುತ್ತವೆ ಎಂದು ಹಿರೇಹಡಗಲಿಯ ಹವ್ಯಾಸಿ ಪಕ್ಷಿ ಛಾಯಾಚಿತ್ರಗಾರ ಚೆನ್ನೂರು ಸೋಮೇಶಪ್ಪ ತಿಳಿಸಿದರು.
ಸಹಸ್ರಾರು ಹಕ್ಕಿಗಳು ವೃಕ್ಷದಲ್ಲಿ ನೆಲೆಯೂರುವ ಕಾರಣ ಅರಣ್ಯ ಇಲಾಖೆ ಸೂಕ್ತ ವಾತಾವರಣ ಕಲ್ಪಿಸಬೇಕು ಎಂದು ವರ್ತಕ ಬಳ್ಳಾರಿ ಬಸಪ್ಪ, ರೈತ ಸಂಘದ ಜಿಲ್ಲಾಧ್ಯಕ್ಷ ಬಿ.ವಿ.ಗೌಡ ಒತ್ತಾಯಿಸಿದ್ದಾರೆ.