ವಿಜಯವಾಣಿ ಸುದ್ದಿಜಾಲ ಧಾರವಾಡ
ಕರ್ನಾಟಕ ವಿಶ್ವ ವಿದ್ಯಾಲಯದ ಹಳೇ ವಿದ್ಯಾರ್ಥಿ ಸಂಘಕ್ಕೆ ತಂತ್ರಜ್ಞಾನದ ಸ್ಪರ್ಷ ನೀಡಲಾಗುತ್ತದೆ. ಕವಿವಿಯಲ್ಲಿ ಕಲಿತ ಹಳೇ ವಿದ್ಯಾರ್ಥಿಗಳ ಸಂಘವು ವಿಶ್ವವಿದ್ಯಾಲಯದ ಶಕ್ತಿಯಾಗಿದೆ ಎಂದು ಕವಿವಿ ಕುಲಪತಿ ಪ್ರೊ. ಕೆ.ಬಿ.ಗುಡಸಿ ಹೇಳಿದರು.
ನಗರದ ಕರ್ನಾಟಕ ವಿಶ್ವ ವಿದ್ಯಾಲಯ ಆವರಣದಲ್ಲಿ ಶನಿವಾರ ಹಳೇ ವಿದ್ಯಾರ್ಥಿ ಸಂಘದ ನೂತನ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, 2007ರಲ್ಲಿ ಕವಿವಿಯಲ್ಲಿ ಹಳೇ ವಿದ್ಯಾರ್ಥಿಗಳ ಸಂಘ ಸ್ಥಾಪಿಸಲಾಯಿತು. ಬಹು ದಿನಗಳ ನಂತರ ಸಂಘದ ವಿಶೇಷ ಕಚೇರಿ ಅವಶ್ಯಕತೆ ಇತ್ತು. ಈಗ ಅವಶ್ಯಕತೆ ಈಡೇರಿದಂತಾಗಿದೆ ಎಂದರು.
ಜಾಗತಿಕ ಮಟ್ಟದಲ್ಲಿ ಕವಿವಿಯಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳ ದತ್ತಾಂಶ ಸಂಗ್ರಹಿಸಲು ತಂತ್ರಜ್ಞಾನ ಸಹಾಯದಿಂದ ವಿಶೇಷ ತಂತ್ರಾಂಶ ಮೂಲಕ ಹಳೇ ವಿದ್ಯಾರ್ಥಿಗಳ ಸಂಘದ ಕಾರ್ಯ ಚಟುವಟಿಕೆ ಸುಗಮವಾಗಿ ನಡೆಸಲು ಸಹಾಯಕವಾಗಲಿದೆ. ಸಲಹೆ ಮತ್ತು ನಿರ್ದೇಶನ ಮೂಲಕ ಕವಿವಿ ಹಳೇ ವಿದ್ಯಾರ್ಥಿ ಸಂಘದ ಪ್ರಕ್ರಿಯೆ ನಡೆಸಲಾಗುತ್ತದೆ. ಸಂಘದ ಸದಸ್ಯರನ್ನು ಶೈಕ್ಷಣಿಕವಾಗಿ ಸಮರ್ಪಕವಾಗಿ ಬಳಸಿಕೊಳ್ಳಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಹಳೇ ವಿದ್ಯಾರ್ಥಿಗಳ ಸಂಘದ ಸಾಮಾನ್ಯ ಮಂಡಳಿ ಸಭೆ ನಡೆಸಲಾಯಿತು. ಕವಿವಿ ಕುಲಸಚಿವ ಪ್ರೊ. ಸಿ.ಕೃಷ್ಣಮೂರ್ತಿ, ವಿವಿಧ ನಿಕಾಯದ ಡೀನ್, ವಿವಿಧ ವಿಭಾಗದ ಪ್ರಾಧ್ಯಾಪಕರು, ಹಳೇ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಇತರರು ಇದ್ದರು.