ಮೈಸೂರು: ಕಾವ್ಯ ರಚನೆಯಲ್ಲಿ ಆತ್ಮಸಂತೋಷ ಮತ್ತು ಮನೋವಿಕಾಸ ಅಡಗಿದೆ ಎಂದು ಬರಹಗಾರ ಗುಬ್ಬಿಗೂಡು ರಮೇಶ್ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ವಿಜಯನಗರದ ಕಸಾಪ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ದಸರಾ ಕವಿಗೋಷ್ಠಿಯಲ್ಲಿ ಮಾತನಾಡಿದರು.
ಕವಿತೆಗಳು ಸ್ಫೂರ್ತಿಯ ಸೆಲೆ. ಕರ್ನಾಟಕ ಏಕೀಕರಣ ಸಂದರ್ಭದಲ್ಲೂ ಕವಿಗಳು ಹೋರಾಟಗಾರರಿಗೆ ಸದಾ ಉತ್ಸಾಹವನ್ನು ತುಂಬುತ್ತಿದ್ದರು. ಹೋರಾಟ, ಪ್ರತಿಭಟನೆ, ಚಳವಳಿಯಲ್ಲೂ ಕಾವ್ಯದ ಕಾವು ಇತ್ತು. ಆದರೆ, ಪ್ರಸ್ತುತ ಸಂದರ್ಭದಲ್ಲಿ ಕವಿಗಳು ಲೇಖನಿ ಹಿಡಿಯುತ್ತಿದ್ದಂತೆ, ತಾನು ಒಬ್ಬನ್ನೇ ಬುದ್ಧಿವಂತನೆಂದು ಭಾವಿಸಿ, ಸಮಾಜಕ್ಕೆ ಬುದ್ಧಿ ಹೇಳಲು ಶುರು ಮಾಡುತ್ತಾರೆ. ಈ ರೀತಿಯ ಪ್ರಕೃತಿ ಸರಿಯಲ್ಲ. ಕವಿತೆ ಬರೆಯುವುದು ಕೇವಲ ಕವಿಯ ನಮ್ಮ ಆತ್ಮ ಸುಖಕ್ಕೆ ಹಾಗೂ ಮನೋವಿಕಾಸಕ್ಕೆ ಆಗಿರಬೇಕು ಎಂದರು.
ಸರ್ಕಾರಗಳು ಮನುಷ್ಯನಿಗೆ ಅನುಕೂಲ ಕಲ್ಪಿಸಿಕೊಡಬಹುದು. ಆದರೆ, ಮಾನಸಿಕ ನೆಮ್ಮದಿಯನ್ನು ಕವಿಗಳಿಂದ ಮಾತ್ರವೇ ಕೊಡಲು ಸಾಧ್ಯ. ತಂತ್ರಜ್ಞಾನ ಬಹಳಷ್ಟು ಬದಲಾದರೂ, ಬರವಣಿಗೆಗೆ ಆದ್ಯತೆ ಇದೆ. ಜಾಲತಾಣಗಳಲ್ಲಿ ಬರಹಗಾರರು, ಕವಿಗಳ ಗುಂಪು ರಾರಾಜಿಸುತ್ತಿರುವುದು ಇದಕ್ಕೆ ಸಾಕ್ಷಿ. ಬರಹಕ್ಕೆ ಎಂದಿಗೂ ಸಾವಿಲ್ಲ. ಆದ್ದರಿಂದ ಸರ್ಕಾರಗಳು ಕವಿತೆಗಳನ್ನು ಕಿವಿಬಿಚ್ಚಿ ಕೇಳಿಸಿಕೊಂಡರೆ ವ್ಯವಸ್ಥಿತ ಹಾಗೂ ಸಕಾರಾತ್ಮಕ ಸಮಾಜ ನಿರ್ಮಾಣ ಸಾಧ್ಯವಿದೆ ಎಂದರು.
ಕವಿಗಳಾದ ಎಡೆಯೂರು ಸಮೀವುಲ್ಲಾ, ವೈ.ಎಸ್.ಅಭಿಷೇಕ್, ಅಶ್ವಿನಿ ಜಿ.ಮಂಡ್ಯ, ಪ್ರಸನ್ನ ಹೆಗಡೆ, ರಮ್ಯಶ್ರೀ ಅಡಗೂರು, ಸುಶ್ಮಿತಾ ಸುಖೀಭವ, ಅರ್ಜುನ್, ಎ.ಎಸ್.ಗೋವಿಂದೇಗೌಡ, ಪಿ.ಮಹೇಶ್‌ಕುಮಾರ್, ಶಶಿಧರ್ ಸಬ್ಬನಹಳ್ಳಿ, ಎಸ್.ಶಶಿರಂಜನ್, ಡಾ. ಕೃಷ್ಣಮೂರ್ತಿ ಚಮರಂ, ಅನ್ನಪೂರ್ಣ ನಂಜನಗೂಡು, ಮೈ.ನಾ.ಲೋಕೇಶ್, ಭಾರತಿ ಪ್ರಸಾದ್, ಎಚ್.ಎನ್.ವಿಜಯ್, ಸೌಗಂಧಿಕಾ ಜೋಯಿಸ್, ಟಿ.ಲೋಕೇಶ್ ಹುಣಸೂರು, ಎಂ.ಯು. ಶ್ವೇತ ಮಂಡ್ಯ, ಬೆಮೆಲ್ ರಮೇಶ್ ಶೆಟ್ಟಿ, ಕೆ.ಎಸ್.ಪ್ರದೀಪ್‌ಕುಮಾರ್, ಎಂ.ಬಿ.ವಿನಯ್‌ಕುಮಾರ್ ಸ್ವರಚಿತ ಕವಿತೆಗಳನ್ನು ವಾಚಿಸಿದರು.