ಮೈಸೂರು: ಕವಿಗಳು ವರ್ತಮಾನದ ಸಮಸ್ಯೆಗಳಿಗೆ, ವೈರುಧ್ಯಗಳಿಗೆ, ಅಸಮಾನತೆಗೆ, ಜಾತೀಯತೆ ನಿವಾರಣೆಗೆ ಕನ್ನಡಿಯಾಗುವ ಮೂಲಕ ಜನಮಾನಸ ತಲುಪಬೇಕು ಎಂದು ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಹೇಳಿದರು.
ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಹಗರಿಬೊಮ್ಮನಹಳ್ಳಿ ತಾಲೂಕಿನ ಕಡಲಬಾಳಿನ ಸುಜ್ಞಾನ ವಿದ್ಯಾಪೀಠ ಮತ್ತು ಸಾಂಸ್ಕೃತಿಕ ರಂಗ ಕಲಾವಿದರ ಸಾಧಕರ ಶ್ರೀ ಮಾತಾ ಪ್ರಕಾಶನ ವತಿಯಿಂದ ವಿಜಯನಗರದ ಸಾಹಿತ್ಯ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ರಾಜ್ಯ ಮಟ್ಟದ ಕವಿಗೋಷ್ಠಿ, ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಸ್ತುತ ವರ್ತಮಾನಕ್ಕೆ ಸ್ಪಂದಿಸುವ ಕವಿತೆಗಳ ಕೊರತೆ ಕಾಣುತ್ತಿದೆ. ಕಥೆ, ಕಾದಂಬರಿ… ಹೀಗೆ ಬೇರೆ ಬೇರೆ ಸಾಹಿತ್ಯದ ಪ್ರಕಾರಗಳಿದ್ದರೂ ಕಾವ್ಯ ವಿಶಿಷ್ಟ ಪ್ರಕಾರ. ಆನಂದ ಕೊಡುವುದರ ಜತೆಗೆ ಸಂದೇಶ ಕೊಡುವಂತೆಯೂ ಇರಬೇಕು. ಮನೋರಂಜನೆಯ ಜತೆಗೆ ಮನೋವಿಕಾಸಕ್ಕೂ ಕಾರಣವಾಗಬೇಕು ಎಂದು ಅವರು ಹೇಳಿದರು.
ಕವಿತೆ ರಚನೆ ಸುಲಭ ಎನಿಸಬಹುದು. ಆದರೆ ಉತ್ತಮ ಕವಿತೆಗಳ ರಚನೆ ಬಹಳ ಕಷ್ಟ. 200-300 ಸಾಲುಗಳಲ್ಲಿ ಹೇಳಬೇಕಾದ್ದನ್ನು ಮೂರು ಸಾಲುಗಳಲ್ಲಿ, ಮೂವತ್ತು ಪದಗಳಲ್ಲಿ ಅರ್ಥ ಕೆಡದಂತೆ ಹೇಳಬೇಕಾಗುತ್ತದೆ. ಕವಿತೆ ಎಂದರೆ ಕೇವಲ ಪ್ರಾಸವಲ್ಲ, ಅದರಾಚೆಗೂ ಇರುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಬಾರಿಸು ಕನ್ನಡ ಡಿಂಡಿಮವ… ಪದ್ಯವನ್ನು ಕುವೆಂಪು ಅವರು ಬರೆದು 70 ವರ್ಷಗಳೇ ಕಳೆದಿವೆ. ಆದರೂ ಇವತ್ತಿಗೂ ಕನ್ನಡಿಗರನ್ನು ಜಾಗೃತಗೊಳಿಸಲು ಈ ಕವಿತೆಯನ್ನು ಬಳಸಲಾಗುತ್ತಿದೆ. ಈ ರೀತಿ ಕವಿತೆಗಳು ಜನಮಾನಸದಲ್ಲಿ ಉಳಿಯಬೇಕು ಎಂದರು.
ಸೋಮನಾಥ ಮತ್ತು ರಕ್ಷಿತಾ ಹೊಳಗುಂದಿ ಸಂಗಡಿಗರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಹರಿಪ್ರಿಯಾ ಬಳ್ಳಾರಿ ಭರತನಾಟ್ಯ ಪ್ರದರ್ಶಿಸಿದರು. ಗದಗದ ಗವಿಸಿದ್ದಯ್ಯ ಜೆ.ಹಳ್ಳಿಕೇರಿಮಠ ಜಾನಪದ ಗೀತೆಗಳನ್ನು ಪ್ರಸ್ತುತಪಡಿಸಿದರು.
ಮೈಸೂರಿನ ಟಿ.ತ್ಯಾಗರಾಜು, ಬೆಂಗಳೂರಿನ ಗೀತಾ, ವೀರಾಪುರದ ರಾಕೇಶ್, ಬೈರಗೊಂಡ ಮುತ್ತು, ಲತಾ ಕೆ.ಆರ್.ಹೆಗಡೆ, ಮತ್ತಿಕೆರೆ ಅನಿತಾ, ಶ್ರೀನಿವಾಸ, ಹಗರಿಬೊಮ್ಮನಹಳ್ಳಿ ಎ.ಸೋಮನಾಥ, ಆರ್.ಎನ್.ಕಾಂತಲಕ್ಷ್ಮೀ ರಂಗನಪಾಳ್ಯ, ದಾವಣಗೆರೆಯ ಫ್ರಾನ್ಸಿಸ್ ಕ್ಸೇವಿಯರ್, ಚನ್ನಪಟ್ಟಣದ ಎಂ.ಎಸ್.ಆಶಾಲತಾ ಕವಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.
ಮೈಸೂರಿನ ಎನ್.ಕೆ.ಗಣೇಶ್ ನಿಲುವಾಗಿಲು, ಬಸಪ್ಪ ಸಾಲುಂಡಿ ಸೇರಿದಂತೆ ರಾಜ್ಯದ 88 ಸಾಧಕರಿಗೆ ವಿವಿಧ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಸರ್ಕಾರಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಬೋಧಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಡಿ.ಗಗನಲಕ್ಷ್ಮೀ, ತಿ. ನರಸೀಪುರ ತಾಲೂಕು ಕಸಾಪ ಅಧ್ಯಕ್ಷ ಕನ್ನಡ ಪುಟ್ಟಸ್ವಾಮಿ, ಮೈಸೂರು ನಗರ ಕಸಾಪ ಅಧ್ಯಕ್ಷ ಕೆ.ಎಸ್. ಶಿವರಾಮು, ವಿನಾಯಕನಗರ ಗ್ರಾಮಾಭ್ಯುದಯ ಟ್ರಸ್ಟ್ ಅಧ್ಯಕ್ಷ ಮೆಲ್ಲಹಳ್ಳಿ ಮಹದೇವಸ್ವಾಮಿ, ಜಿಲ್ಲಾ ಸರ್ಕಾರಿ ನೌಕರರ ಸಂಘದ ನಿರ್ದೇಶಕಿ ಎಚ್.ಕೆ. ಸುಶೀಲಾ, ಮೈಸೂರು ವಿವಿ ಕನಕ ನೌಕರರ ಸಂಘದ ಅಧ್ಯಕ್ಷ ಡಾ.ಸಿ.ಬಸವರಾಜು ಜೆಟ್ಟಿಹುಂಡಿ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ನೌಕರರ ಸಂಘದ ಹಿರಿಯ ಸಹಾಯಕ ಅಧ್ಯಕ್ಷ ಎಚ್.ವಿ.ಸಂದೀಪ್, ಸುಜ್ಞಾನ ವಿದ್ಯಾಪೀಠದ ಕಾರ್ಯದರ್ಶಿ ನಾಗರಾಜ ತಂಬ್ರಹಳ್ಳಿ, ದಾವಣಗೆರೆ ಮಕ್ಕಳ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಫ್ರಾನ್ಸಿಸ್ ಕ್ಸೇವಿಯರ್ ಪಾಲ್ಗೊಂಡಿದ್ದರು.