ಜಿಲ್ಲೆ

ಕವಾಡಿಗರಹಟ್ಟಿಯಲ್ಲಿ ಮನೆಮಾಡಿದ ಆತಂಕ

ಚಿತ್ರದುರ್ಗ: ವಾಂತಿ-ಭೇದಿ, ಹೊಟ್ಟೆ ನೋವಿನಿಂದ ಅಸ್ವಸ್ಥರಾದ 40 ಕ್ಕೂ ಹೆಚ್ಚು ಜನ, ತೀವ್ರತರ ನೋವು ಅನುಭವಿಸಿದರು. ಅದರಲ್ಲಿ ಒಬ್ಬರು ರಾತ್ರಿ 11.30 ರಿಂದ 12 ರೊಳಗೆ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಾದರು.

ಮಂಗಳವಾರ ಮುಂಜಾನೆ ವೇಳೆಗೆ ಎಂಟು ಮಂದಿ, ಸೂರ್ಯೋದಯದ ಹೊತ್ತಿಗೆ 20, ಮಧ್ಯಾಹ್ನಕ್ಕೆ ಸಂಖ್ಯೆ 35 ಮೀರಿತ್ತು…
ಕಲುಷಿತ ನೀರು ಸೇವನೆ ಘಟನೆ ನಗರದ ಕವಾಡಿಗರಹಟ್ಟಿಯ ಜನರಲ್ಲಿ ತೀವ್ರತರ ಆತಂಕ ಉಂಟುಮಾಡಿದೆ.

ಕಾಲನಿಯ ಒಬ್ಬ ಮಹಿಳೆ ಮೃತಪಟ್ಟ ನಂತರ ಇಡೀ ಕಾಲನಿಯ ಜನ ರೊಚ್ಚಿಗೆದ್ದರು. ಪರಿಸ್ಥಿತಿ ಬಿಗುವಿನ ವಾತಾವರಣಕ್ಕೆ ತಿರುಗುವ ಮುನ್ನವೇ ಪೊಲೀಸರು ಧಾವಿಸಿದರು. 5 ರಿಂದ 18 ವರ್ಷದೊಳಗಿನ 10 ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾಗಿದ್ದರಿಂದ ಆರೋಗ್ಯ ಇಲಾಖೆ ಕೂಡ ಬೀಡುಬಿಟ್ಟಿತು. ಸರ್ಕಾರಿ ಶಾಲೆಯಲ್ಲಿ 3 ಶಾಲೆಗಳ ಮಕ್ಕಳನ್ನು ತಪಾಸಣೆಗೆ ಒಳಪಡಿಸಲಾಯಿತು. ನಿರ್ಜಲೀಕರಣ ಇರುವವರಿಗೆ ಚುಚ್ಚುಮದ್ದು, ಗ್ಲೂಕೋಸ್ ಹಾಕಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು.

ಜಿಲ್ಲಾಸ್ಪತ್ರೆಗೆ ದಾಖಲಾದವರ ಪೈಕಿ ಹೆಚ್ಚುವರಿ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲು 108 ವಾಹನಕ್ಕೆ ಶಿಫಾರಸು ಮಾಡಿದಾಗಲೆಲ್ಲಾ ಸಂಬಂಧಿಕರು, ಸ್ನೇಹಿತರಲ್ಲಿ ದುಗುಡ ಕಾಣುತ್ತಿತ್ತು. ವಾಹನದೊಳಗೆ ಹತ್ತಿಸುವಾಗ, ಕೆಳಗಿಳಿಸುವಾಗ ಜನ ಒಗ್ಗಟ್ಟಿನಿಂದ ಸಹಕರಿಸಿದರು.
108 ವಾಹನಗಳು ಅಸ್ವಸ್ಥರನ್ನು ಕರೆದೊಯ್ಯಲು ಹಲವು ಬಾರಿ ಸಂಚರಿಸಿದವು. ಆಟೋ ಮೂಲಕವೂ ಕೆಲವರು ಆಸ್ಪತ್ರೆಗೆ ತೆರಳಿದರು.
ಕಲುಷಿತ ನೀರು ಪೂರೈಸಿರುವುದೇ ಇದಕ್ಕೆ ಕಾರಣವೆಂದು ಆಸ್ಪತ್ರೆಯ ಹೊರಭಾಗದಲ್ಲಿ ಹಾಗೂ ಕವಾಡಿಗರಹಟ್ಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಂಭಾಗ ಕಾಲನಿಯ ಜನ ದೂರಿದರು.

ಕೋಟ್
ಕಲುಷಿತ ನೀರಿನಿಂದಲೇ ಈ ದುಸ್ಥಿತಿ ಬಂದೊದಗಿದೆ. ನಗರಸಭೆ ಸದಸ್ಯರಿಗೆ ದೂರಿತ್ತರೂ ಕ್ರಮ ಕೈಗೊಂಡಿಲ್ಲ. ಅನಿವಾರ್ಯವಾಗಿ ನೀರು ಬಳಸಿ ಜನ ಅಸ್ವಸ್ಥರಾಗಿದ್ದಾರೆ. ಪ್ರಾಣ ಹೋದರೆ ಯಾರು ಹೊಣೆ?
ಯಲ್ಲಪ್ಪ, ಕವಾಡಿಗರಹಟ್ಟಿ
ಕೋಟ್
ಆರ್‌ಒ ಘಟಕದಿಂದ ಉಚಿತವಾಗಿ ಪೂರೈಕೆಯಾಗುತ್ತಿರುವ ನೀರು ಕುಡಿಯಲು ಯೋಗ್ಯವಾಗಿಲ್ಲ. 2 ರೂ. ಕಾಯಿನ್ ಹಾಕಿ ಪಡೆಯುತ್ತಿದ್ದಾಗ ಒಂದಿಷ್ಟು ನಿರ್ವಹಣೆ ಮಾಡುತ್ತಿದ್ದರು. ಈಗ ಅದೂ ಇಲ್ಲವಾಗಿದೆ. ಜನರ ಪ್ರಾಣಕ್ಕೆ ಕುತ್ತು ತರುತ್ತದೆಂದು ನಿರೀಕ್ಷಿಸಿರಲಿಲ್ಲ.
ಲಿಂಗಪ್ಪ, ಕವಾಡಿಗರಹಟ್ಟಿ

ಕೋಟ್
ಓವರ್ ಹೆಡ್ ಟ್ಯಾಂಕ್‌ನೊಳಗೆ ನೀರು ಪಾಚಿಯಾಗಿ ಹಸಿರು ಬಣ್ಣಕ್ಕೆ ತಿರುಗಿದೆ. ಏಣಿ ತುಕ್ಕು ಹಿಡಿದು ಅದರ ಪುಡಿಯೂ ಅದರೊಳಗೆ ಬೀಳುತ್ತಲೇ ಇದೆ. ಕೊಳೆತ ವಾಸನೆ ಬರುತ್ತಿದೆ. ಅದನ್ನು ಸ್ವಚ್ಛಗೊಳಿಸುವ ಕೆಲಸವಾಗಿಲ್ಲ.
ನಾಗರಾಜ್, ಕಾಲನಿ ನಿವಾಸಿ

ಕೋಟ್
ನೀರಿನ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ನಂತರವೇ ನಿರ್ದಿಷ್ಟ ಕಾರಣ ತಿಳಿಯಲಿದೆ. 32 ಜನ ಅಸ್ವಸ್ಥರಿಗೆ ಸರ್ಕಾರಿ, ಮೂವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಡಾ.ಆರ್.ರಂಗನಾಥ್, ಡಿಎಚ್‌ಒ

ಚಿಕಿತ್ಸೆಗೆ ಹಣ ಹೊಂದಿಸುವಷ್ಟು ಶಕ್ತರಲ್ಲ
ಜಿಲ್ಲಾಧಿಕಾರಿ ಜಿ.ಆರ್.ಜೆ.ದಿವ್ಯಾಪ್ರಭು ಅವರನ್ನು ಕಾಲನಿಯ ಜನರು ಸುತ್ತುವರಿದರು. ಮೇಡಂ, ನೆನ್ನೆಯಿಂದ ಅಡುಗೆ ಮಾಡಲಿಕ್ಕೂ, ಕುಡಿಯಲಿಕ್ಕೂ ನೀರಿಲ್ಲ. ಸಣ್ಣ ಮಕ್ಕಳಿದ್ದು, ಉಪವಾಸದಿಂದ ನರಳುತ್ತಿದ್ದಾರೆ. ಮುಖವನ್ನೂ ತೊಳೆದಿಲ್ಲ. ಬಳಸಲು ಹಾಗೂ ಕುಡಿಯಲು ಶುದ್ಧ ನೀರು ಪೂರೈಸಿ. ಕಲುಷಿತ ನೀರು ಪೂರೈಸಿದವರ ವಿರುದ್ಧ ಕ್ರಮ ಕೈಗೊಳ್ಳಿ. ನಾವೆಲ್ಲ ಬಡವರಾಗಿದ್ದು, ಚಿಕಿತ್ಸೆಗೆ ಹಣ ಹೊಂದಿಸುವಷ್ಟು ಶಕ್ತರಲ್ಲ. ಜಿಲ್ಲಾಡಳಿತವೇ ಸೂಕ್ತ ಚಿಕಿತ್ಸೆ ಕೊಡಿಸಬೇಕು. ಪ್ರತಿ 3 ಅಥವಾ 6 ತಿಂಗಳಿಗೊಮ್ಮೆ ಟ್ಯಾಂಕ್ ಸ್ವಚ್ಛತೆಗೆ ಸೂಚನೆ ನೀಡಿ ಎಂದು ಒತ್ತಾಯಿಸಿದರು.

*ಬಾವಿ, ಆರ್‌ಒ ಘಟಕ ವೀಕ್ಷಣೆ
ಕವಾಡಿಗರಹಟ್ಟಿಯಲ್ಲಿನ ಬಾವಿ, ಆರ್‌ಒ ಘಟಕ, ಓವರ್ ಹೆಡ್ ಟ್ಯಾಂಕ್ ಸ್ಥಳಕ್ಕೆ ಡಿಸಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜನರ ಸಮಸ್ಯೆ ಆಲಿಸಿದರು. ಕಲುಷಿತ ನೀರಿನ ಸಮಸ್ಯೆ, ಕಾಲನಿಯ ಸ್ವಚ್ಛತೆಗೆ ಪರಿಹಾರ ಒದಗಿಸುವ ಭರವಸೆ ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ಇದ್ದರು.

ಸಚಿವರ ವಿರುದ್ಧ ಧಿಕ್ಕಾರ
ಚಿತ್ರದುರ್ಗ: ಅಸ್ವಸ್ಥರ ಭೇಟಿಗೆಂದು ಜಿಲ್ಲಾಸ್ಪತ್ರೆಗೆ ತೆರಳಿದ ಸಚಿವ ಡಿ.ಸುಧಾಕರ್ ವಿರುದ್ಧ ಕವಾಡಿಗರಹಟ್ಟಿ ಜನ ಧಿಕ್ಕಾರ ಕೂಗಿದರು. ನ್ಯಾಯ ಬೇಕು ಎಂಬ ಘೋಷಣೆ ಕೂಗಿದರು.


ನಂತರ ಅಸ್ವಸ್ಥರ ಆರೋಗ್ಯ ವಿಚಾರಿಸಿದ ಸುಧಾಕರ್, ಘಟನೆ ಸಂಬಂಧ ಮುಖ್ಯಮಂತ್ರಿ ಅವರೊಂದಿಗೆ ಈಗಾಗಲೇ ಚರ್ಚಿಸಿದ್ದೇನೆ. ಮೃತರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ, ಗುಣ ಆಗುವವರೆಗೂ ಸೂಕ್ತ ಚಿಕಿತ್ಸೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಘಟನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ಪೂರ್ಣಗೊಂಡ ನಂತರ ಸತ್ಯಾಸತ್ಯತೆ ತಿಳಿಯಲಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಹರಳಯ್ಯ ಗುರುಪೀಠದ ಬಸವ ಹರಳಯ್ಯ ಸ್ವಾಮೀಜಿ, ಡಿಸಿ ದಿವ್ಯಾಪ್ರಭು, ಎಸ್‌ಪಿ ಕೆ.ಪರಶುರಾಮ್, ಡಿಎಚ್‌ಒ ಡಾ.ಆರ್.ರಂಗನಾಥ್ ಇತರರಿದ್ದರು.