ಚಿತ್ರದುರ್ಗ: ಕವಾಡಿಗರಹಟ್ಟಿ ಪ್ರಕರಣ ಸಿಬಿಐ ಅಥವಾ ಸಿಒಡಿ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿ ಕರುನಾಡ ವಿಜಯಸೇನೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿದರು.
ಮೃತ ಕುಟುಂಬಕ್ಕೆ ತಲಾ 1 ಕೋಟಿ ರೂ. ಪರಿಹಾರ, 20 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಿಸಿಕೊಡುವುದು ಸೇರಿ ನ್ಯಾಯಯುತ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಸಿಎಂ, ಸಮಾಜ ಕಲ್ಯಾಣ ಸಚಿವರಿಗೆ ಮನವಿ ರವಾನಿಸಿದರು.
6 ಜನ ಮೃತಪಟ್ಟು, 200ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿ ಚಿಕಿತ್ಸೆ ಪಡೆದಿದ್ದಾರೆ. ಕೂಡಲೇ ಸಿಎಂ ಅಥವಾ ಸಮಾಜ ಕಲ್ಯಾಣ ಸಚಿವರು ಭೇಟಿ ಕೊಟ್ಟು, ವಾಸ್ತವ ಸ್ಥಿತಿ ಅರಿತು ಪ್ರಕರಣ ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು.
ಮೃತ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ನೌಕರಿ ನೀಡಬೇಕು. ದಲಿತ ಕಾಲನಿಯ ಮಹಿಳೆಯರು ಸಂಘ-ಸಂಸ್ಥೆಗಳಿಂದ ಪಡೆದಿರುವ ಸಾಲ ಮನ್ನಾ ಮಾಡಬೇಕು. ಮೂರು ಕೊಳವೆ ಬಾವಿ ಕೊರೆಸಬೇಕು. ಶುದ್ಧ ಕುಡಿಯುವ ನೀರಿನ ಘಟಕ ತೆರೆಯಬೇಕು. ಕವಾಡಿಗರಹಟ್ಟಿಯಲ್ಲಿ ನಗರ ಆರೋಗ್ಯ ಕೇಂದ್ರ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ಮೃತ ಮಂಜುಳಾ ಪುತ್ರಿಗೆ ಪದವಿವರೆಗೂ ಉಚಿತ ಶಿಕ್ಷಣ ಕೊಡಿಸಬೇಕು. ಅಸ್ವಸ್ಥರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ನೀಡಬೇಕು. ಹಟ್ಟಿಗೆ ಎಲ್ಲ ರೀತಿಯ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು. ಪೊಲೀಸ್ ಇಲಾಖೆ ಸ್ವಯಂ ಪ್ರೇರಿತವಾಗಿ ಸುಮೋಟೋ ಪ್ರಕರಣ ದಾಖಲಿಸಿಕೊಳ್ಳಬೇಕು. ಈ ದುರಂತ ಸಂಭವಿಸಲು ನಿರ್ಲಕ್ಷೃ ವಹಿಸಿದ ಎಲ್ಲ ಅಧಿಕಾರಿಗಳನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಸೇನೆಯ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವೀಣಾ ಗೌರಣ್ಣ, ಪದಾಧಿಕಾರಿಗಳಾದ ಮೇಹ್ತಾ ಫರ್ಜಾನಾ, ಮಹಮ್ಮದ್ ರಫೀ, ಜಗದೀಶ್, ಟಿ.ಬಂಗಾರಪ್ಪ, ರತ್ನಮ್ಮ, ಅಖಿಲೇಶ್, ಅವಿನಾಶ್, ಮಣಿಕಂಠ, ಪ್ರದೀಪ್, ಡಿಎಸ್‌ಎಸ್ ಮುಖಂಡ ವಿಶ್ವನಾರಾಯಣಮೂರ್ತಿ ಇತರರಿದ್ದರು.