StartFragment
ಧಾರವಾಡ: ನಿರಂತರ ಮಳೆಯಿಂದಾಗಿ ತಾಲೂಕಿನ ಪ್ರಮುಖ ಗ್ರಾಮಗಳನ್ನು ಸಂರ್ಪಸುವ ರಸ್ತೆಗಳು ಗುಂಡಿಮಯವಾಗಿವೆ.
ತಾಲೂಕಿನ ಕವಲಗೇರಿ, ಚಂದನಮಟ್ಟಿ, ಕನಕೂರ ಗ್ರಾಮಗಳ ಮುಖ್ಯರಸ್ತೆ ಸಂಪೂರ್ಣ ಹಾಳಾಗಿದೆ. ಈ ರಸ್ತೆ 4-5 ಗ್ರಾಮಗಳನ್ನು ಸಂರ್ಪಸುತ್ತಿದ್ದು, ಗುಂಡಿ ಬಿದ್ದ ರಸ್ತೆಯಲ್ಲಿ ವಾಹನಗಳು ಸಂಚರಿಸಬೇಕಾಗಿದೆ.
ಇನ್ನು ಧಾರವಾಡ- ನವಲಗುಂದ ರಸ್ತೆಯ ಸ್ಥಿತಿ ದೇವರಿಗೇ ಪ್ರೀತಿ ಎನ್ನುವಂತಾಗಿದೆ. ಧಾರವಾಡದಿಂದ ನವಲಗುಂದ ಮೂಲಕ ಹಲವು ಜಿಲ್ಲೆಗಳನ್ನು ಸಂರ್ಪಸುವ ಈ ರಸ್ತೆಯಲ್ಲಿ ಅಲ್ಲಲ್ಲಿ ಡಾಂಬರ್ ಕಿತ್ತು ಹೋಗಿದ್ದು, ನೀರು ನಿಲ್ಲುತ್ತಿದೆ.
ಮತ್ತೊಂದೆಡೆ ಸಣ್ಣ ಮಳೆಯಾದರೂ ಹಾರೋಬೆಳವಡಿ ಬಳಿ ಕಿತ್ತು ಹೋಗಿರುವ ಸೇತುವೆ ಪಕ್ಕದ ತಾತ್ಕಾಲಿಕ ರಸ್ತೆ ಜಲಾವೃತವಾಗುತ್ತದೆ. ಧಾರವಾಡ- ಸವದತ್ತಿ ಮಾರ್ಗದ ಸಂಚಾರ ಸ್ಥಗಿತಗೊಳ್ಳುತ್ತದೆ. ಇದಕ್ಕೆ ಬದಲಿ ಮಾರ್ಗವಾಗಿ ಕಮಲಾಪುರ ಮಾರ್ಗವಾಗಿ ಯಾದವಾಡ- ಬೆಟಗೇರಿ ರಸ್ತೆಯನ್ನು ಅವಲಂಬಿಸಬೇಕಾಗುತ್ತದೆ. ಮಳೆಗಾಲ ಆರಂಭವಾದಾಗಿನಿಂದ ಇದೇ ಮಾರ್ಗದಲ್ಲಿ ಹೆಚ್ಚಿನ ವಾಹನಗಳ ಓಡಾಟದಿಂದ ಉತ್ತಮವಾಗಿದ್ದ ರಸ್ತೆ ಅಲ್ಲಲ್ಲಿ ಗುಂಡಿಮಯವಾಗಿದೆ.
ಮಳೆಗಾಲ ಮುಗಿದ ನಂತರ ತುರ್ತಾಗಿ ಗುಂಡಿ ಮುಚ್ಚುವ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್ ವಿ.ಎನ್. ಪಾಟೀಲ ಪ್ರತಿಕ್ರಿಯಿಸಿದ್ದಾರೆ.
EndFragment