ಎನ್.ಆರ್.ಪುರ: ಕಳ್ಳಿಕೊಪ್ಪ ಸೊಸೈಟಿಯಲ್ಲಿ ಇಂಟರ್‌ನೆಟ್ ಸಮಸ್ಯೆಯಿಂದಾಗಿ ಪಡಿತರದಾರರು ಪರದಾಡುವಂತಾಗಿದೆ. ಸಾಲುಗಟ್ಟಿ ಗಂಟೆಗಟ್ಟಲೇ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯ ಇಂದಿರಾನಗರ ರಘು ಹೇಳಿದರು.
ತಾಪಂನಲ್ಲಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷೆ ಚಂದ್ರಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ಕಳ್ಳಿಕೊಪ್ಪ ಸೊಸೈಟಿಗೆ ಕೂಲಿಕಾರ್ಮಿಕರೇ ಹೆಚ್ಚಾಗಿ ಪಡಿತರ ತೆಗೆದುಕೊಳ್ಳಲು ಬರುತ್ತಾರೆ. ಆದರೆ ಸೊಸೈಟಿಯಲ್ಲಿ ಇಂಟರ್‌ನೆಟ್ ಸಮಸ್ಯೆಯಿಂದಾಗಿ ದಿನವಿಡೀ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಲಿಕಾರ್ಮಿಕರು ಒಂದು ದಿನದ ಕೆಲಸ ಬಿಟ್ಟು ಬರಬೇಕು. ಕೂಡಲೇ ಸಮಸ್ಯೆ ಬಗೆಹರಿಸಬೇಕೆಂದು ಆಹಾರ ಇಲಾಖೆ ಅಧಿಕಾರಿ ಗಣಪತಿ ಅವರಿಗೆ ತಿಳಿಸಿದರು.
ಆಹಾರ ಇಲಾಖೆ ಅಧಿಕಾರಿ ಗಣಪತಿ ಮಾತನಾಡಿ, ಸೊಸೈಟಿ ಕಾರ್ಯದರ್ಶಿ, ಅಧ್ಯಕ್ಷರೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಲಾಗುವುದು. ಇದು ಸರ್ವರ್ ಸಮಸ್ಯೆಯಲ್ಲ, ಸೊಸೈಟಿಯ ಇಂಟರ್‌ನೆಟ್ ಸಂಪರ್ಕದ ಸಮಸ್ಯೆಯಾಗಿದೆ ಎಂದು ಸಭೆಗೆ ತಿಳಿಸಿದರು.
ಇಂದಿರಾನಗರ ರಘು ಮಾತನಾಡಿ, ಸೊಸೈಟಿಯಲ್ಲಿ ಇಂಟರ್‌ನೆಟ್ ಸರಿಯಾಗಿ ಇರಿಸಿಕೊಳ್ಳದಿದ್ದರೆ ಹೇಗೆ, ಪಡಿತರದಾರರ ಸಮಸ್ಯೆ ಅರ್ಥವಾಗುವುದಿಲ್ಲವೇ? ಕೂಡಲೇ ಸಮಸ್ಯೆ ಬಗೆಹರಿಸದಿದ್ದರೆ ಸಮಿತಿ ಸದಸ್ಯರೆಲ್ಲ ಸೊಸೈಟಿ ಮುಂದೆ ನಿಲ್ಲಬೇಕಾಗುತ್ತದೆ ಎಂದರು. ಗಣಪತಿ ಮಾತನಾಡಿ, ಡಿಸೆಂಬರ್‌ವರೆಗೆ ಅಕ್ಕಿಯ ಹಣ ಜನರ ಖಾತೆಗೆ ಜಮೆ ಆಗಿದೆ. ಜನವರಿಯ ಹಣ ಬಾಕಿ ಇದೆ. ಫೆಬ್ರವರಿಯಿಂದ ಹಣದ ಬದಲು ಅಕ್ಕಿ ವಿತರಿಸಲಾಗುತ್ತಿದೆ. ಕನಿಷ್ಠ ಮೂರು ತಿಂಗಳು ಪಡಿತರ ಪಡೆಯದೆ ಇರುವ ಕುಟುಂಬದವರ ಪಡಿತರ ಚೀಟಿ ರದ್ದಾಗುತ್ತದೆ. ಹೊಸ ಕಾರ್ಡ್‌ಗೆ ಅರ್ಜಿ ಹಾಕಲು ಇನ್ನೂ ಅವಕಾಶ ನೀಡಿಲ್ಲ ಎಂದು ತಿಳಿಸಿದರು.
ಸಮಿತಿ ಸದಸ್ಯರಾದ ಜಿ.ನಾಗರಾಜ್, ನಿತ್ಯಾನಂದ, ಹೂವಮ್ಮ, ಅಪೂರ್ವಾ, ಕ್ಷೇತ್ರಕುಮಾರ್, ಇಸ್ಮಾಯಿಲ್, ದೇವರಾಜ್, ಜಯರಾಂ, ಬೇಸಿಲ್, ಸೈಯದ್‌ಶಫೀರ್ ಅಹಮ್ಮದ್ , ತಾಪಂ ಇಒ ಎಚ್.ಡಿ.ನವೀನ್‌ಕುಮಾರ್, ಗ್ಯಾರಂಟಿ ಯೋಜನೆ ಅನುಷ್ಠಾನ ಇಲಾಖಾಧಿಕಾರಿಗಳು ಇದ್ದರು.