ಹುಬ್ಬಳ್ಳಿ: ಮನೆಗೆ ಕೀಲಿ ಹಾಕಿಕೊಂಡು ಬೇರೆಡೆ ಹೋಗಿ ಬರುವಷ್ಟರಲ್ಲಿ ಮನೆಗಳ್ಳತನ.. ಬೈಕ್ ನಿಲ್ಲಿಸಿ ಅಂಗಡಿಗೆ ಹೋಗಿ ಬರುವಷ್ಟರಲ್ಲಿ ಬೈಕ್ ಮಾಯ.. ರಾತ್ರಿ ಅಂಗಡಿ ಬಂದ್ ಮಾಡಿ ಬೆಳಗ್ಗೆ ಬಾಗಿಲು ತೆರೆಯುವಷ್ಟರಲ್ಲಿ ಕಳ್ಳರ ಕೈಚಳಕ.. ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತುಕೊಂಡು ಪರಾರಿ.. ಕಾರಿನ ಗಾಜು ಒಡೆದು ಮ್ಯೂಸಿಕ್ ಸಿಸ್ಟ್ಂ ಕಳವು..
ಹೀಗೆ ವಾಣಿಜ್ಯ ನಗರಿ ಹುಬ್ಬಳ್ಳಿ ಹಾಗೂ ವಿದ್ಯಾನಗರಿ ಧಾರವಾಡದ ಜನತೆ ಕಳ್ಳರ ಹಾವಳಿಗೆ ಬೇಸತ್ತು ಹೋಗಿದ್ದಾರೆ. 2019ರ ಅಂತ್ಯದಲ್ಲಿ ಕೊಂಚ ತಣ್ಣ ಗಾಗಿದ್ದ ಕಳ್ಳರ ಹಾವಳಿ 2020ರ ಆರಂಭದಲ್ಲೇ ಮತ್ತೆ ಶುರುವಾಗಿರುವುದು ಅವಳಿ ನಗರದ ಜನತೆಯ ನಿದ್ದೆಗೆಡಿಸಿದೆ. 2020ರ ಜನವರಿಯಲ್ಲಿ 21 ಹಾಗೂ ಫೆಬ್ರವರಿ (ಈವರೆಗೆ) 6 ಸೇರಿ ಒಟ್ಟು 27 ಕಳ್ಳತನ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ 24 ಮನೆ ಕಳ್ಳತನ ಸೇರಿವೆ.
ಕೀಲಿ ಹಾಕಿರುವ ಮನೆಗಳನ್ನೇ ಟಾರ್ಗೆಟ್ ಮಾಡುವ ಕಳ್ಳರು ಕೀಲಿ ಹಾಕಿದ್ದ ಮನೆ ಗುರುತಿಸಿಕೊಂಡು ಹೊಂಚು ಹಾಕಿ ರಾತ್ರಿ ಕಾರ್ಯಾಚರಣೆಗೆ ಇಳಿಯುತ್ತಾರೆ. ಕಬ್ಬಿಣದ ಗ್ರಿಲ್, ಗಟ್ಟಿಯಾದ ಬಾಗಿಲು, ಇಂಟರ್ ಲಾಕ್ ಏನೇ ಇದ್ದರೂ ಕ್ಷಣಾರ್ಧದಲ್ಲಿ ಒಡೆದು ಒಳ ನುಗ್ಗುತ್ತಾರೆ. ಅಲ್ಮೇರಾ ಕೀಲಿ ಒಡೆದು ಚಿನ್ನದ ಬಳೆ, ಮಾಂಗಲ್ಯ ಸರ, ಉಂಗುರ ಮತ್ತಿತರ ಬೆಲೆ ಬಾಳುವ ವಸ್ತುಗಳನ್ನು ಕದ್ದು ಪರಾರಿಯಾಗುತ್ತಾರೆ. ಹುಬ್ಬಳ್ಳಿ ವಿದ್ಯಾನಗರ, ಶಿರೂರ ಪಾರ್ಕ್, ಅಕ್ಷಯ ಕಾಲನಿ, ರವಿನಗರ ಮುಂತಾದೆಡೆ ಕಳೆದೊಂದು ವಾರದಲ್ಲಿ 6-7 ಮನೆಗಳ ಕಳ್ಳತನವಾಗಿದೆ.
ಜನವರಿಯಲ್ಲಿ ಹಳೇ ಹುಬ್ಬಳ್ಳಿಯ ಬಾರ್ವೊಂದರ ಕೀಲಿ ಮುರಿದು ದುಬಾರಿ ಬೆಲೆಯ ಮದ್ಯ, ನಗದು ಕದ್ದಿದ್ದರು. ಕಾರವಾರ ರಸ್ತೆಯ ಪಾನ್ ಶಾಪ್ವೊಂದನ್ನೂ ಬಿಡದ ಕಳ್ಳರು ಕೈಗೆ ಸಿಕ್ಕ ವಸ್ತು ಎತ್ತಿಕೊಂಡು ಹೋಗಿದ್ದರು. ಇದೀಗ ಕಾರು, ಲಾರಿಗಳ ಟೈರ್, ಮ್ಯೂಸಿಕ್ ಸಿಸ್ಟ್್ಟ ಮೇಲೂ ಕಳ್ಳರ ವಕ್ರದೃಷ್ಟಿ ಬಿದ್ದಿರುವುದು ವಿಪರ್ಯಾಸ.
ಹೀಗೆ ಸಾಲು ಸಾಲು ಕಳ್ಳತನ ಪ್ರಕರಣಗಳು ದಾಖಲಾಗುತ್ತಿದ್ದರೂ ಹು-ಧಾ ಕಮಿಷನರೇಟ್ ಪೊಲೀಸರು ಗಾಢ ನಿದ್ರೆಯಲ್ಲಿದ್ದಾರೆ. ಸರ್ಕಾರದ ಒತ್ತಡಕ್ಕೆ ಸಿಲುಕಿ ಪ್ರತಿಭಟನೆ, ರ್ಯಾಲಿ, ವಿಐಪಿ ಭದ್ರತೆಗೆ ಸೀಮಿತವಾಗಿದ್ದಾರೆ. ಅಲ್ಲೊಂದು ಇಲ್ಲೊಂದು ಕಳ್ಳತನ ಪ್ರಕರಣ ಭೇದಿಸಿ ಸುಮ್ಮನಾಗುತ್ತಿದ್ದಾರೆ. ಇನ್ನಾದರೂ ರಾತ್ರಿ ಗಸ್ತು ಹೆಚ್ಚಿಸುವುದು, ಕಳ್ಳರ ಮೇಲೆ ನಿಗಾ ಇಡುವ ಮೂಲಕ ಕಳ್ಳತನ ಪ್ರಕರಣಗಳನ್ನು ತಡೆಗಟ್ಟಬೇಕು ಎಂಬುದು ಅವಳಿ ನಗರದ ಜನತೆಯ ಆಗ್ರಹವಾಗಿದೆ.
ಮನೆಗೆ ನುಗ್ಗಿದ್ದ ಕಿರಾತಕರು!: ಕಪ್ಪು ಬಟ್ಟೆ ಮುಖಕ್ಕೆ ಸುತ್ತಿಕೊಂಡಿದ್ದ ನಾಲ್ವರು ದರೋಡೆಕೋರರು ಜ.15ರಂದು ನಸುಕಿನ ಜಾವ ಧಾರವಾಡದ ತೇಜಸ್ವಿ ನಗರದಲ್ಲಿ ಬಿಲ್ಡಿಂಗ್ವೊಂದರ ಮನೆಯ ಮುಂಬಾಗಿಲು ಮುರಿದು ಒಳ ನುಗ್ಗಿದ್ದರು. ಮನೆಯ ಮಾಲೀಕ ‘ಯಾರು’ ಎಂದು ಅರಚಿದಾಗ ಆತನ ತಲೆಗೆ ಕಬ್ಬಿಣದ ರಾಡ್ನಿಂದ ಹೊಡೆದು ಗಾಯಪಡಿಸಿದ್ದರು. ಪತ್ನಿ, ಅತ್ತೆಯ ಮೈಮೇಲಿದ್ದ ಹಾಗೂ ಮನೆಯಲ್ಲಿದ್ದ 5.2 ಲಕ್ಷ ರೂ. ಮೌಲ್ಯದ 158 ಗ್ರಾಂ ಚಿನ್ನಾಭರಣ, ಮೊಬೈಲ್ಗಳನ್ನು ದೋಚಿ, ಬೆಡ್ರೂಂನ ಚಿಲಕ ಹಾಕಿಕೊಂಡು ಪರಾರಿಯಾಗಿದ್ದರು. ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈವರೆಗೆ ಆರೋಪಿಗಳ ಪತ್ತೆಯಾಗಿಲ್ಲ.
ಕಿಮ್್ಸ ರೋಗಿಗಳಿಗೂ ಕಳ್ಳರ ಭೀತಿ: ಉತ್ತರ ಕರ್ನಾಟಕದ ಸಂಜೀವಿನಿ ಕಿಮ್ಸ್ನಲ್ಲೂ ಕಳ್ಳರ ತಂಡ ಕೈಚಳಕ ತೋರುತ್ತಿದೆ. ಇತ್ತೀಚೆಗೆ 4 ಬೈಕ್ ಕಳ್ಳತನವಾಗಿದ್ದು, ಹೆರಿಗೆ ವಾರ್ಡ್ನಲ್ಲಿ 1 ಮೊಬೈಲ್, ಮತ್ತೊಂದು ವಾರ್ಡ್ನಲ್ಲಿ 4 ಸಾವಿರ ರೂ. ನಗದು ಕಳ್ಳತನವಾಗಿದೆ. ಇದರಿಂದ ರೋಗಿಗಳು ಹಾಗೂ ಅವರ ಕುಟುಂಬದವರು ಆತಂಕವದಲ್ಲಿ ಕಾಲ ಕಳೆಯುವಂತಾಗಿದೆ. ಈ ಕುರಿತು ವಿಚಾರಿಸಿದಾಗ ‘ಭದ್ರತಾ ಸಿಬ್ಬಂದಿ ಕೊರತೆಯಿದ್ದು, ಸಿಸಿಟಿವಿ ಕ್ಯಾಮರಾ ಮೂಲಕವೂ ಹೆಚ್ಚಿನ ನಿಗಾ ವಹಿಸಲಾಗಿದೆ ಎಂದು ಕಿಮ್್ಸ ನಿರ್ದೇಶಕ ರಾಮಲಿಂಗಪ್ಪ ಅಂಟರತಾನಿ ‘ವಿಜಯವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.
ಹೋಟೆಲ್ನಲ್ಲಿ ನಿವೃತ್ತ ಡಿಸಿಪಿ ಬ್ಯಾಗ್ ಕಳವು: ಹುಬ್ಬಳ್ಳಿಯ ವಿದ್ಯಾನಗರದ ಹನ್ಸ್ ಹೋಟೆಲ್ನ ರೂಮ್ ಕಿಟಕಿಯ ಮೂಲಕ ಒಳ ನುಗ್ಗಿದ ಕಳ್ಳರು 180 ಗ್ರಾಂ ಚಿನ್ನಾಭರಣ ಹಾಗೂ 37,000 ರೂ. ನಗದು ಇದ್ದ ಬ್ಯಾಗ್ ಕದ್ದು ಪರಾರಿಯಾಗಿರುವ ಘಟನೆ ಗುರುವಾರ ನಸುಕಿನ ಜಾವ ನಡೆದಿದೆ. ಬೆಂಗಳೂರು ಮೂಲದ ನಿವೃತ್ತ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಎನ್.ಬಿ. ಮುಲ್ಲಾ ಕೆಲಸದ ನಿಮಿತ್ತ ಪತ್ನಿಯೊಂದಿಗೆ ಹುಬ್ಬಳ್ಳಿಗೆ ಆಗಮಿಸಿ, ಹನ್ಸ್ ಹೋಟೆಲ್ನ ರೂಮ್ಲ್ಲಿ ತಂಗಿದ್ದರು. ನಸುಕಿನ ಜಾವ 3 ಗಂಟೆ ಸುಮಾರು ಗಾಜಿನ ಕಿಟಕಿ ಮೂಲಕ ಒಳಗೆ ಬಂದು, ಯಾರಿಗೂ ಗೊತ್ತಾಗದಂತೆ ಬ್ಯಾಗ್ ಹೊತ್ತೊಯ್ದಿದ್ದಾರೆ. ಬ್ಯಾಗ್ನಲ್ಲಿ ಚಿನ್ನದ ಮಾಂಗಲ್ಯಸರ, ನೆಕ್ಲೆಸ್ ಹಾಗೂ 37 ಸಾವಿರ ರೂ. ಇತ್ತು. ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೋಟೆಲ್ನಲ್ಲಿ 60 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ಪೊಲೀಸರು ಪರಿಶೀಲಿಸುತ್ತಿದ್ದಾರೆ.
3 ಲಕ್ಷ ರೂ. ಹಣದ ಬ್ಯಾಗ್ ನಾಪತ್ತೆ: ಹುಬ್ಬಳ್ಳಿ: ಬೈಕ್ ನಿಲ್ಲಿಸಿ ಅಂಗಡಿಗೆ ತೆರಳಿದ್ದ ವೇಳೆ ಬೈಕ್ ಮೇಲೆ ಇಟ್ಟಿದ್ದ 3 ಲಕ್ಷ ರೂ. ಇದ್ದ ಬ್ಯಾಗ್ ಕಳ್ಳತನವಾಗಿರುವ ಘಟನೆ ಇಲ್ಲಿನ ಕೇಶ್ವಾಪುರ ಸವೋದಯ ವೃತ್ತದಲ್ಲಿ ಶುಕ್ರವಾರ ಸಂಜೆ ನಡೆದಿದೆ. ಕುಸುಗಲ್ ರೋಡ್ ಶಾಖಾಂಬರಿ ಲೇಔಟ್ ನಿವಾಸಿ ಬಾಬು ಅಮೃತ ಸಗಾವೆ ಎಸ್ಬಿಐ ಬ್ಯಾಂಕ್ನಿಂದ 3 ಲಕ್ಷ ರೂ. ಪಡೆದು ಬ್ಯಾಗ್ನಲ್ಲಿ ಇಟ್ಟುಕೊಂಡು ಬುಲೆಟ್ ಬೈಕ್ನಲ್ಲಿ ಬಂದಿದ್ದರು. ಸವೋದಯ ವೃತ್ತದ ಬಳಿ ಸಂಜೆ 4 ಗಂಟೆ ಸುಮಾರು ರಸ್ತೆಬದಿ ಬೈಕ್ ನಿಲ್ಲಿಸಿದ್ದರು. ಹಣವಿದ್ದ ಬ್ಯಾಗ್ ಬೈಕ್ ಮೇಲಿಟ್ಟು, ಹಾಲು, ಬ್ರೆಡ್ ತರಲು ಹೋಗಿದ್ದರು. ಕೇವಲ 1 ನಿಮಿಷದಲ್ಲಿ ಕಳ್ಳರು ಯಾರಿಗೂ ಗೊತ್ತಾಗದಂತೆ ಹಣದ ಬ್ಯಾಗ್ ಎಗರಿಸಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಕೇಶ್ವಾಪುರ ಠಾಣೆ ಪೊಲೀಸರು ತಿಳಿಸಿದ್ದಾರೆ.
ಬಿಡ್ನಾಳದಲ್ಲಿ ಪಾಸ್ಬುಕ್!: ಹಣದ ಬ್ಯಾಗ್ ಕದ್ದ ಕಳ್ಳರು ಹಣ ತೆಗೆದುಕೊಂಡು ಬ್ಯಾಗ್ನಲ್ಲಿ ಚೆಕ್ಬುಕ್, ಪಾಸ್ಬುಕ್ ಇಟ್ಟು ಬಿಡ್ನಾಳ 2ನೇ ಕ್ರಾಸ್ನಲ್ಲಿ ಎಸೆದು ಹೋಗಿದ್ದರು. ಆ ಬ್ಯಾಗ್ ನೋಡಿದ್ದ ವಿನಾಯಕ ಎಂಬುವರು ಬಾಬು ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು.
ನಾಲ್ವರು ಮನೆಗಳ್ಳರ ಬಂಧನ: ಕೀಲಿ ಹಾಕಿರುವ ಮನೆಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ನಾಲ್ವರು ಖತರ್ನಾಕ್ ಮನೆಗಳ್ಳರನ್ನು ಹುಬ್ಬಳ್ಳಿಯ ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಅವರಿಂದ 14,30,000 ರೂ. ಮೌಲ್ಯದ ಚಿನ್ನಾಭರಣ, ನಗದು ವಶಪಡಿಸಿಕೊಂಡಿದ್ದಾರೆ. ಹಳೇ ಹುಬ್ಬಳ್ಳಿ ಆನಂದ ನಗರದ ಮಹಮ್ಮದಲಿ ಅಲ್ಲಾಭಕ್ಷ ನಾಲಬಂದ (45), ಬಾಣತಿಕಟ್ಟಿಯ ಮಹಮ್ಮದಗೌಸ್ ಗೌಸಮೋದಿನ ರಫೀಕಸಾಬ್ (24), ಖ್ವಾಜಾಸಾಬ್ ಮಹಮ್ಮದಗೌಸ್ ಶಿಗ್ಗಾಂವ (28) ಹಾಗೂ ಕಲ್ಮೇಶ್ವರ ನಗರದ ಅಬ್ದುಲ್ಖಾದರ ಜೈಲಾನಿ ಮುಜಾವರ (35) ಬಂಧಿತ ಆರೋಪಿಗಳು. ಅವರಿಂದ 320 ಗ್ರಾಂ ಚಿನ್ನ, 470 ಗ್ರಾಂ ಬೆಳ್ಳಿ, 1.20 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ವಿವಿಧ ಠಾಣೆ ವ್ಯಾಪ್ತಿಯ ಮನೆಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದರು.