ಬಾಗಲಕೋಟೆ ನಗರದ ಅಬಕಾರಿ ಇಲಾಖೆಯ ಸಭಾಂಗಣದಲ್ಲಿ ಅಬಕಾರಿ ಇಲಾಖೆ ಉಪ ಆಯುಕ್ತ ಡಾ.ಸಂಗನಗೌಡ ಹೊಸಳ್ಳಿ ಸಭೆ. 
ಜಿಲ್ಲೆ

ಕಳ್ಳಭಟ್ಟಿ ತಡೆಗೆ ಕಠಿಣ ಕ್ರಮ

ಬಾಗಲಕೋಟೆ: ಜಿಲ್ಲೆಯ ಹಲವೆಡೆ ಅರಣ್ಯ ಪ್ರದೇಶದಲ್ಲಿ ನಡೆಯುತ್ತಿರುವ ಕಳ್ಳಭಟ್ಟಿ ಸಾರಾಯಿ ಉತ್ಪಾದನಾ ಘಟಕಗಳನ್ನು ನಾಶಪಡಿಸಲು ಅರಣ್ಯ ಇಲಾಖೆಯ ಸಹಕಾರದಿಂದ ಜಂಟಿ ಕಾರ್ಯಾಚರಣೆ ನಡೆಸಲಾಗುವುದು ಎಂದು ಅಬಕಾರಿ ಇಲಾಖೆ ಉಪ ಆಯುಕ್ತ ಡಾ.ಸಂಗನಗೌಡ ಹೊಸಳ್ಳಿ ಹೇಳಿದರು.
ನಗರದ ಅಬಕಾರಿ ಇಲಾಖೆಯ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಳ್ಳಭಟ್ಟಿ ಸರಾಯಿ ತಡೆಗೆ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ. ಈವರೆಗೆ ಒಟ್ಟು 2008 ದಾಳಿಗಳನ್ನು ಕೈಗೊಂಡಿದ್ದ 145 ಪ್ರಕರಣಗಳನ್ನು ದಾಖಲಿಸಿ 600 ಲೀಟರ್ ಕಳ್ಳಭಟ್ಟಿಯನ್ನು ವಶಪಡಿಸಿಕೊಂಡು ನಾಶ ಮಾಡಲಾಗಿದೆ ಎಂದರು.
ಜಿಲ್ಲೆಯ ಅರಣ್ಯ ಪ್ರದೇಶಗಳಲ್ಲಿ ಕಳ್ಳಭಟ್ಟಿ ಪ್ರಕರಣಗಳು ಹೆಚ್ಚಾಗಿ ಕಂಡು ಬರುವ ಹಿನ್ನಲೆಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಯ ಸಹಕಾರದೊಂದಿಗೆ ಜಂಟಿ ಕಾರ್ಯಾಚರಣೆ ಕೈಗೊಳ್ಳುವ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಬಾಗಲಕೋಟೆ,ಜಮುಖಂಡಿ,ಬೀಳಗಿ,ಮುಧೋಳದ ಅರಣ್ಯ ವ್ಯಾಪ್ತಿಯ ತಾಂಡಾಗಳು ಕಾರ್ಯ ಚಟುವಟಿಕೆಗಳ ಮೇಲೆ ಅರಣ್ಯ ಸಿಬ್ಬಂದಿಗಳು ನಿಗಾವಹಿಸಿ ಕಳ್ಳಭಟ್ಟಿ ಮಾಹಿತಿ ಇದಲ್ಲಿ ಸಾಕ್ಷ್ಯಗಳ ಆಧರಿಸಿ ಆರೋಪಿಗಳನ್ನು ತಕ್ಷಣಕ್ಕೆ ಬಂಧಿಸಬೇಕು ಎಂದು ಸೂಚನೆ ನೀಡಿದರು.
ಬಾಗಲಕೋಟೆಯ ಅಚನೂರು, ಸೀತಿಮನಿ, ರಾಂಪುರ, ಜಡರಾಮನಕುಂಟಿ ವ್ಯಾಪ್ತಿಯಲ್ಲಿ ತೀವ್ರ ನಿಗಾವಹಿಸಬೇಕು. ಜಿಲ್ಲೆಯಲ್ಲಿ ಒಟ್ಟು 78902 ಹೆಕ್ಟೇರ್ ಪ್ರದೇಶದಲ್ಲಿ ಅರಣ್ಯ ಪ್ರದೇಶವಿದ್ದು, 6 ವಿಭಾಗಗಳಲ್ಲಿ ಅರಣ್ಯ ಗಾರ್ಡ ಹಾಗೂ ವಾಚ್ ಮನ್ ಗಳು ಗಸ್ತು ತಿರುಗುತ್ತಿರುವಾಗ ಕಳ್ಳಭಟ್ಟಿ ಕಂಡು ಬಂದಲ್ಲಿ ನಾಶ ಪಡಿಸಬೇಕು ಎಂದರು.

ಉಪ ಸಂರಕ್ಷಣಾಧಿಕಾರಿ ಚಂದ್ರಶೇಖರ ಪಾಟೀಲ ಸೇರಿದಂತೆ ಇತರರು ಇದ್ದರು.