ಜಿಲ್ಲೆ

ಕಳ್ಳತನಕ್ಕೂ ಮುನ್ನ ಅಕ್ಕಪಕ್ಕದ ಮನೆಗಳ ಬಾಗಿಲುಗಳಿಗೆ ಲಾಕ್: ಚಿನ್ನಾಭರಣ ದೋಚಿದ ಖದೀಮರು

ಮೈಸೂರು: ಕಳ್ಳತನಕ್ಕೂ ಮುನ್ನ ಸುತ್ತಲಿನ ಮನೆಗಳಿಗೆ ಹೊರಗಿನಿಂದಲೇ ಲಾಕ್ ಮಾಡಿ ಕೃತ್ಯ ಎಸಗಿರುವ ಖದೀಮರು, 5 ಲಕ್ಷ ರೂ. ಮೊತ್ತದ ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದಾರೆ.

ಹೂಟಗಳ್ಳಿಯ ಕನ್ನೇಗೌಡ ಬ್ಲಾಕ್ ನಿವಾಸಿ, ಅಡುಗೆ ಭಟ್ಟರಾಗಿರುವ ತಿಮ್ಮಶೆಟ್ಟಿ ಅವರ ನಿವಾಸದಲ್ಲಿ ಕಳ್ಳತನವಾಗಿರುವುದು.

ಮದುವೆ ಮನೆ ಕೆಲಸದ ಹಿನ್ನೆಲೆಯಲ್ಲಿ ರಾತ್ರಿ ಮನೆ ಬೀಗ ಹಾಕಿಕೊಂಡು ಹೋಗಿದ್ದರು. ಅವರ ಪತ್ನಿ ಸಹ ತವರು ಮನೆಗೆ ತೆರಳಿದ್ದರು. ಭಾನುವಾರ ಬೆಳಗ್ಗೆ 4 ಗಂಟೆಯ ಹೊತ್ತಿಗೆ ಇವರ ಮನೆಗೆ ಕಳ್ಳರು ಆಗಮಿಸಿದ್ದಾರೆ.

ತಿಮ್ಮಶೆಟ್ಟಿ ಅವರ ಮನೆ ಬಾಗಿಲು ಒಡೆಯುವ ಮುನ್ನ ಕಟ್ಟಡದ ನೆಲ ಅಂತಸ್ತು ಮತ್ತು ಮೊದಲ ಅಂತಸ್ತಿನಲ್ಲಿದ್ದ ಮನೆಯ ಮುಂಬಾಗಿಲ ಚಿಲಕ ಹಾಕಿದ್ದಾರೆ. ಜತೆಗೆ ಎದುರು ಮನೆಯ ಬಾಗಿಲುಗಳನ್ನೂ ಲಾಕ್ ಮಾಡಿದ್ದಾರೆ.

ತದನಂತರ ತಿಮ್ಮಶೆಟ್ಟಿ ಅವರ ಮನೆ ಬಾಗಿಲು ಒಡೆಯುವ ಮುನ್ನ ಯಾರಿಗೂ ಕಾಣಬಾರದು ಎಂದು ಪರದೆಯನ್ನೂ ಕಟ್ಟಿ ಮರೆ ಮಾಚಿದ್ದಾರೆ. ಬಳಿಕ ಮನೆ ಬಾಗಿಲನ್ನು ಕಬ್ಬಿಣದ ಆಯುಧದಿಂದ ಒಡೆಯುತ್ತಿದ್ದ ಸಂದರ್ಭದಲ್ಲಿ ನೆರೆಯ ಮನೆ ಮಾಲೀಕರಿಗೆ ಎಚ್ಚರವಾಗಿದೆ.

ಅವರು ತಕ್ಷಣ ತಿಮ್ಮಶೆಟ್ಟಿ ಅವರಿಗೆ ಕರೆ ಮಾಡಿ ಮನೆಯೊಳಗೆ ಸದ್ದು ಬರುತ್ತಿರುವ ವಿಚಾರ ತಿಳಿಸಿದ್ದಾರೆ. ಮನೆಯಲ್ಲಿ ಯಾರೂ ಇಲ್ಲ ಎಂದು ತಿಮ್ಮಶೆಟ್ಟಿ ತಿಳಿಸಿದ್ದಾರೆ.

ಮನೆಯಲ್ಲಿ ಯಾರೋ ನುಗ್ಗಿರಬಹುದು ಎಂಬ ಅನುಮಾನದಿಂದ ನೆರೆಯ ನಿವಾಸಿಗಳಿಗೆ ಕರೆ ಮಾಡಿದ್ದಾರೆ. ನೆರೆಯ ನಿವಾಸಿಗಳು ಹೊರ ಬರಲು ಯತ್ನಿಸಿದ್ದಾರೆ. ಹೊರಗಿನಿಂದ ಮನೆ ಬಾಗಿಲು ಹಾಕಿರುವುದು ಆಗಲೇ ಅವರ ಅರಿವಿಗೆ ಬಂದಿದೆ.

ಅಷ್ಟರಲ್ಲೇ ಮನೆಯೊಳಗೆ ನುಗ್ಗಿರುವ ಕಳ್ಳರು ಲಾಕರ್‌ನಲ್ಲಿದ್ದ 70 ಗ್ರಾಂ ತೂಕದ ಚಿನ್ನಾಭರಣ ಕದ್ದಿದ್ದಾರೆ. ಮನೆ ಮಾಲೀಕ ತಿಮ್ಮಶೆಟ್ಟಿ ಅವರು ಮನೆಯ ಬಳಿ ಬರುವಷ್ಟರಲ್ಲಿ ಕಳ್ಳರು ಪರಾರಿಯಾಗಿದ್ದರು.

ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಶ್ವಾನದಳ ಮತ್ತು ಬೆರಳಚ್ಚು ತಂಡದೊಂದಿಗೆ ಪರಿಶೀಲನೆ ನಡೆಸಿದರು. ಪ್ರಕರಣ ದಾಖಲಿಸಿಕೊಂಡಿರುವ ವಿಜಯನಗರ ಠಾಣೆಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.