ಹಾವೇರಿ: ವಿಧಾನ ಪರಿಷತ್ಗೆ ನಡೆಯುತ್ತಿರುವ ಪಶ್ಚಿಮ ಪದವೀಧರ ಕ್ಷೇತ್ರ ಚುನಾವಣೆಯಲ್ಲಿ ನಕಲಿ ಮತದಾನ ಮಾಡಿಸಲು ಸಂಚು ರೂಪಿಸಲಾಗಿತ್ತೇ ಎನ್ನುವ ಸಂಶಯ ಜಿಲ್ಲೆಯ ಪದವೀಧರರಲ್ಲಿ ಮೂಡಿದೆ.
ಮಂಗಳವಾರ ನಗರದ ಎಂಜಿ ರಸ್ತೆಯಲ್ಲಿರುವ ಹಾವೇರಿ ಒನ್ ಸಿಎಸ್ಸಿಯಲ್ಲಿ ನಕಲಿ ಚುನಾವಣೆ ಗುರುತಿನ ಚೀಟಿ ಮುದ್ರಿಸಿ ಕೊಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಇದರ ಹಿಂದೆ ಯಾವ ಉದ್ದೇಶವಿತ್ತು ಎಂಬ ಅನುಮಾನಗಳು ತಲೆದೋರಿದ್ದು, ಇದಕ್ಕೆ ಹಲವಾರು ರೆಕ್ಕೆಪುಕ್ಕಗಳು ಕೂಡ ಮೂಡತೊಡಗಿವೆ.
ಪಶ್ಚಿಮ ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯ ಸ್ಥಾನದ ಚುನಾವಣೆಗೆ ದಿನಾಂಕ ಘೊಷಣೆಯಾಗಿದೆ. ಅ. 8ರವರೆಗೆ ಮತದಾರರ ಪಟ್ಟಿಯಲ್ಲಿ ನೋಂದಣಿಗೆ ಅವಕಾಶವಿದೆ. ಹೀಗಾಗಿ, ನಕಲಿ ಚುನಾವಣೆ ಗುರುತಿನ ಚೀಟಿಯ ಮುದ್ರಣ ಕಾರ್ಯವು ಇದೇ ಉದ್ದೇಶಕ್ಕೆ ನಡೆದಿರಬಹುದು ಎಂಬ ಗುಮಾನಿ ಆರಂಭಗೊಂಡಿದೆ. ಅಭ್ಯರ್ಥಿಯೊಬ್ಬರು ಪಶ್ಚಿಮ ಪದವೀಧರ ಚುನಾವಣೆಗೆ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಕೊಟ್ಟ ನಕಲಿ ಚುನಾವಣೆ ಗುರುತಿನ ಚೀಟಿಯಿಂದ ಪ್ರಕರಣ ಬೆಳಕಿಗೆ ಬಂದಿದೆ.
ಹಾವೇರಿ ವಿಧಾನಸಭೆ ಕ್ಷೇತ್ರದ ಪದವೀಧರರೊಬ್ಬರು ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳಲು ತಮ್ಮ ಪದವಿ ಪ್ರಮಾಣಪತ್ರಗಳ ಜೊತೆಗೆ ಚುನಾವಣೆ ಗುರುತಿನ ಚೀಟಿಯನ್ನು ವಿಳಾಸದ ದಾಖಲೆಯಾಗಿ ಲಗತ್ತಿಸಿದ್ದರು. ಈ ಗುರುತಿನ ಚೀಟಿಯನ್ನು ಅಧಿಕಾರಿಗಳು ಪರಿಶೀಲಿಸಿದಾಗ ಅದರಲ್ಲಿದ್ದ ಹಾವೇರಿ ವಿಧಾನಸಭೆ ಕ್ಷೇತ್ರದ ಚುನಾವಣಾಧಿಕಾರಿಯ ಸಹಿ ನಕಲಿಯಾಗಿರುವುದು ಖಚಿತವಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ತಹಸೀಲ್ದಾರ್ ಹಾಗೂ ಉಪವಿಭಾಗಾಧಿಕಾರಿಯವರು ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿ ಗಮನಕ್ಕೆ ತಂದರು. ಆಗ ಅಪರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಮಫ್ತಿಯ ತಂಡವೊಂದನ್ನು ರಚಿಸಿ ಸಾರ್ವಜನಿಕರ ಹೆಸರಿನಲ್ಲಿ ಚುನಾವಣೆ ಗುರುತಿನ ಚೀಟಿ ಮಾಡಿಸಲು ಸಿಎಸ್ಸಿ ಸೆಂಟರ್ಗೆ ಹೋಗಿದ್ದಾರೆ. ಅಲ್ಲಿ ಜೀವನಸಿಂಗ್ ರಜಪೂತ ತನ್ನ ಮೊಬೈಲ್ಫೋನ್ನಲ್ಲಿ ಆ ವ್ಯಕ್ತಿಯ ಫೋಟೋ ತೆಗೆದು ಕ್ಷಣಾರ್ಧದಲ್ಲಿಯೇ ಚುನಾವಣಾ ಗುರುತಿನ ಚೀಟಿಯನ್ನು ಮುದ್ರಿಸಿ ಕೊಟ್ಟಿದ್ದಾನೆ. ಈ ವೇಳೆ ಅಧಿಕಾರಿಗಳು ಆತನನ್ನು ರೆಡ್ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಯಾವ ಉದ್ದೇಶಕ್ಕೆ ನಕಲಿ ಚೀಟಿ: ಚುನಾವಣಾ ಗುರುತಿನ ಚೀಟಿಯನ್ನು ಸಾರ್ವಜನಿಕರು ನಕಲಿಯಾಗಿ ಮಾಡಿಸಿಕೊಂಡರೆ ಅದರ ಪ್ರಯೋಜನ ಅಷ್ಟೇನೂ ಇರುವುದಿಲ್ಲ. ಚುನಾವಣೆಯಲ್ಲಿ ಮತದಾನ ಮಾಡಲು ಹೋದರೂ ಮತಗಟ್ಟೆ ಅಧಿಕಾರಿಗಳ ಬಳಿಯಿರುವ ಮತದಾರರ ಪಟ್ಟಿಯಲ್ಲಿ ಹೆಸರಿದ್ದರೆ ಮಾತ್ರ ಅವಕಾಶ ಕಲ್ಪಿಸಲಾಗುತ್ತದೆ. ಇನ್ನು ಬ್ಯಾಂಕ್ಗಳಲ್ಲಿ ನಕಲಿ ಹೆಸರಿನಲ್ಲಿ ಖಾತೆ ತೆರೆಯಲು ಸಾಧ್ಯವಿಲ್ಲ. ಅಲ್ಲಿ ಆಧಾರ್ ಕಾರ್ಡ್ ಕೇಳುತ್ತಾರೆ. ಹೀಗಿರುವಾಗ ಈ ನಕಲಿ ಚುನಾವಣೆ ಗುರುತಿನ ಚೀಟಿ ಮಾಡಿರುವ ಉದ್ದೇಶವೇನು ಎಂಬುದು ಹಲವು ಕುತೂಹಲಗಳಿಗೆ ಕಾರಣವಾಗಿದೆ.
ನಕಲಿ ಮತಕ್ಕೆ ತಯಾರಿಯೆ? : ಪಶ್ಚಿಮ ಪದವೀಧರ ಮತಕ್ಷೇತ್ರದ ಚುನಾವಣೆಗೆ ಮತದಾನದ ಹಕ್ಕು ಪಡೆಯಲು ಪದವಿ ಪಾಸಾದ ಪ್ರಮಾಣಪತ್ರದ ಜೊತೆಗೆ ಇದೇ ಕ್ಷೇತ್ರದ ವ್ಯಕ್ತಿ ಎನ್ನುವುದಕ್ಕೆ ವಿಳಾಸ ದಾಖಲೆ ಬೇಕು. ಅದಕ್ಕಾಗಿ ಈ ನಕಲಿ ಚುನಾವಣೆ ಗುರುತಿನ ಚೀಟಿ ಮುದ್ರಣ ನಡೆಸಲಾಗುತ್ತಿತ್ತು ಎಂಬ ಸಂಶಯ ಎದ್ದಿದೆ. ಈ ಕುರಿತು ಅಧಿಕಾರಿಗಳು ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಈವರೆಗೆ ನೋಂದಣಿಯಾಗಿರುವ ಮತದಾರರ ಪಟ್ಟಿಯಲ್ಲಿ ಪಶ್ಚಿಮ ಪದವೀಧರ ಕ್ಷೇತ್ರ ವ್ಯಾಪ್ತಿ ಬಿಟ್ಟು ಅನ್ಯ ಕ್ಷೇತ್ರದ ಪದವೀಧರರು ನೋಂದಣಿಯಾಗಿದ್ದಾರೆಯೇ ಎಂಬುದನ್ನು ಪರಿಶೀಲಿಸುವ ಕಾರ್ಯ ಕೈಗೊಂಡಿದ್ದಾರೆ. ಆದರೆ ಈ ಅಧಿಕಾರಿಗಳು ಯಾವುದೇ ವಿಚಾರವನ್ನು ಬಹಿರಂಗವಾಗಿ ಹೇಳುತ್ತಿಲ್ಲ.
ಸಿಎಸ್ಸಿ ಸೆಂಟರ್ ಮೇಲೆ ನಿಗಾ: ಮಂಗಳವಾರ ಹಾವೇರಿಯ ಸಿಎಸ್ಸಿ ಸೆಂಟರ್ನಲ್ಲಿ ನಕಲಿ ಚುನಾವಣೆ ಗುರುತಿನ ಚೀಟಿ ಮುದ್ರಣ ಪ್ರಕರಣ ಬಯಲಿಗೆ ಬರುತ್ತಿದ್ದಂತೆ ಜಿಲ್ಲೆಯಲ್ಲಿರುವ ಎಲ್ಲ ಸಿಎಸ್ಸಿಗಳಲ್ಲಿನ ಕಾರ್ಯಚಟುವಟಿಕೆಗಳ ಮೇಲೆ ನಿಗಾ ವಹಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಮೌಖಿಕ ಸೂಚನೆ ನೀಡಿದ್ದಾರೆ. ಕೆಲವೊಂದು ಕೇಂದ್ರಗಳಿಗೆ ತಹಸೀಲ್ದಾರ್ಗಳೇ ಖುದ್ದು ಹೋಗಿ ಪರಿಶೀಲನೆ ಕಾರ್ಯ ಆರಂಭಿಸಿದ್ದಾರೆ.