ಬಳ್ಳಾರಿ: 2022- 23ನೇ ಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ನೇಮಕವಾದ ಕಲ್ಯಾಣ ಕರ್ನಾಟಕ ಜಿಲ್ಲೆಯ ಪದವೀಧರ ಪ್ರಾಥಮಿಕ (6 ರಿಂದ 8 ನೇ ತರಗತಿ )ಶಿಕ್ಷಕರಿಗೆ ಕಳೆದ ಏಳು ತಿಂಗಳಿಂದ ವೇತನ ಭಾಗ್ಯ ದೊರೆತಿಲ್ಲ.
ಕಳೆದ ವರ್ಷ ರಾಜ್ಯ ಸರ್ಕಾರ ರಾಜ್ಯಾದ್ಯಂತ 11,734 ಶಿಕ್ಷಕರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿತ್ತು. ಬಳ್ಳಾರಿ 321, ರಾಯಚೂರು 742, ಕಲ್ಬುರ್ಗಿ 711, ಯಾದಗಿರಿ 614, ಬೀದರ್ 406, ಕೊಪ್ಪಳ 471, ವಿಜಯನಗರ 422 ಸೇರಿ ಒಟ್ಟು 3687 ಶಿಕ್ಷಕರು ಹುದ್ದೆ ಪಡೆದಿದ್ದರು. ಬಳ್ಳಾರಿ ತಾಲೂಕಿನ 18 ಶಿಕ್ಷಕರಿಗೆ ಮಾತ್ರ, ಏಳು ತಿಂಗಳಲ್ಲಿ ಕೇವಲ ಎರಡು ತಿಂಗಳ ವೇತನ ಮಾತ್ರ ಬಿಡುಗಡೆಯಾಗಿದೆ. ಇನ್ನುಳಿದ ಯಾವ ಶಿಕ್ಷಕರಿಗೂ ವೇತನ ದೊರೆತಿಲ್ಲ. ವೇತನ ಜಾರಿ ವಿಳಂಬಕ್ಕೆ ಕರ್ನಾಟಕ ರಾಜ್ಯ ಭೀಮಾ ನಿಗಮ( ಕೆಜಿಐಡಿ), ಎನ್‌ಪಿಎಸ್ ಯೋಜನೆ ಹಾಗೂ ಶಿಕ್ಷಕರ ಸೇವಾ ಮಾಹಿತಿ (ಈಈಡಿಎಸ್) ಈ ಎಲ್ಲ ಸೇವೆಗಳ ಪ್ರಕ್ರಿಯೆ ಆನ್‌ಲೈನ್‌ನಲ್ಲಿ ನಡೆಯುವುದರಿಂದ ಆಯಾ ಜಿಲ್ಲೆಗಳ ಕೇಸ್ ವರ್ಕರ್‌ಗಳಿಗೆ ಇವುಗಳ ಮಾಹಿತಿ ಕೊರತೆಯಿದೆ. ಈ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡರೆ ಮಾತ್ರ ಆಯಾ ಶಿಕ್ಷಕರಿಗೆ ವೇತನ ಜಾರಿಯಾಗಲಿದೆ ಎಂಬುದು ಅಧಿಕಾರಿಗಳ ಹೇಳುವ ಉತ್ತರವಾಗಿದೆ. ತಾಲೂಕು ವ್ಯಾಪ್ತಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಎಲ್ಲ ಕೇಸ್ ವರ್ಕರ್‌ಗಳಿಗೆ ಸಭೆ ನಡೆಸಿ ಈ ಆನ್‌ಲೈನ್‌ನಲ್ಲಿ ತುಂಬಿಸುವಂತೆ ಸೂಚಿಸಬೇಕು. ಕೆಲ ಶಿಕ್ಷಣಾಧಿಕಾರಿಗಳು ಮಾತ್ರ ಸೂಕ್ತ ರೀತಿಯಲ್ಲಿ ಕಾರ್ಯ ನಿರ್ವಹಿಸಿದ್ದು ಉಳಿದವರು ಬೇಜವಾಬ್ದಾರಿ ತೋರಿದ್ದು ಕಂಡು ಬಂದಿದೆ.
ಕಳೆದ ಏಳು ತಿಂಗಳಿನಿಂದ ವೇತನವಿಲ್ಲದೆ ಶಾಲಾಗಳಿಗೆ ಹಾಜರಾಗಿ ಶಿಕ್ಷಕರು ಮಕ್ಕಳಿಗೆ ಭೋದನೆ ಮಾಡಿದ್ದಾರೆ. ಇದಲ್ಲದೆ ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಮತಗಟ್ಟೆಗಳಲ್ಲಿ ಕಾರ್ಯ ನಿರ್ವಹಿಸಿದರು. ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೊಠಡಿಗಳಿಗೆ ಮೇಲ್ವಿಚಾರಕಾರಿಗೆ ಸೂಕ್ತವಾಗಿ ಸುಗಮವಾಗಿ ಪರೀಕ್ಷೆ ನಡೆಯುವಂತೆ ಸಹಕಾರ ನೀಡಿದ್ದಾರೆ. ಯಾರೋ ಮಾಡಿದ ತಪ್ಪಿಗೆ ಯಾರೋ ಶಿಕ್ಷೆ ಅನುಭವಿಸುವಂತೆಯಾಗಿದೆ.
ಕೋಟ್.. ಕಳೆದ ಏಳು ತಿಂಗಳಿನಿಂದ ವೇತನವಿಲ್ಲದೇ ಕಾರ್ಯ ನಿರ್ವಹಿಸಲಾಗಿದೆ. ಇನ್ನೂ ಕೆಲವೇ ದಿನಗಳಲ್ಲಿ ಮಕ್ಕಳಿಗೆ ಶಾಲಾ ಕಾಲೇಜುಗಳಿಗೆ ಆರಂಭವಾಗಲಿವೆ. ಮಕ್ಕಳ ಶಾಲಾ ಕಾಲೇಜುಗಳ ಶುಲ್ಕ ಭರಿಸಲು ಸಾಲ ಮಾಡಿ ಪಾವತಿಸುವ ಸ್ಥಿತಿ ಬಂದಿದೆ.