ಮುಂಡರಗಿ: ಸಾರ್ವಜನಿಕರ ಮನಕ್ಕೆ ಮುದನೀಡಬೇಕಾದ ಪಟ್ಟಣದ ಉದ್ಯಾನಗಳೆಲ್ಲವೂ ಪಾಳು ಬಿದ್ದಿವೆ. ಲಕ್ಷಾಂತರ ರೂ. ಖರ್ಚು ಮಾಡಿ ಉದ್ಯಾನ ನಿರ್ವಿುಸಿದ ಪುರಸಭೆಯು ನಿರ್ವಹಣೆಯನ್ನು ಸಂಪೂರ್ಣವಾಗಿ ಮರೆತುಬಿಟ್ಟಿದೆ. ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ನಿಷ್ಕಾಳಜಿಗೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಹುಡ್ಕೋ ಕಾಲನಿ, ಸ್ವಾಮಿ ವಿವೇಕಾನಂದ ನಗರ, ಬೃಂದಾವನ ಸರ್ಕಲ್, ವಿದ್ಯಾನಗರ, ಜೆ.ಎಚ್.ಪಾಟೀಲ ನಗರ ಹಾಗೂ ಬ್ಯಾಲವಾಡಗಿ ಬಳಿ... ಹೀಗೆ ಪುರಸಭೆ ವ್ಯಾಪ್ತಿಯಲ್ಲಿ 6 ಉದ್ಯಾನಗಳನ್ನು ನಿರ್ವಿುಸಲಾಗಿದೆ. ಆದರೆ, ನಿರ್ವಹಣೆ ಇಲ್ಲದ ಕಾರಣ ಎಲ್ಲವೂ ಸೊರಗಿವೆ.
ಬ್ಯಾಲವಾಡಗಿ ಬಳಿಯ ಉದ್ಯಾನ ಮತ್ತು ಜೆ.ಎಚ್. ಪಾಟೀಲ ನಗರದ ಉದ್ಯಾನದಲ್ಲಿ ಮಕ್ಕಳ ಆಟಕ್ಕೆ ಉಯ್ಯಾಲೆ, ಜಾರುಬಂಡಿ, ಕುಳಿತುಕೊಳ್ಳಲು ಆಸನ ಮೊದಲಾದ ವ್ಯವಸ್ಥೆ ಮಾಡಲಾಗಿದೆ. ಆದರೆ, ವಿದ್ಯುತ್ ಸೌಲಭ್ಯ, ಅಲಂಕಾರಿಕ ಗಿಡಗಳು, ಹುಲ್ಲು ಹಾಸಿಗೆ, ಕಾರಂಜಿ ನಿರ್ವಹಣೆ ಇಲ್ಲದೆ ಹಾಳಾಗಿದೆ. ಹುಡ್ಕೋ ಕಾಲನಿ, ಸ್ವಾಮಿ ವಿವೇಕಾನಂದ ನಗರ, ವಿದ್ಯಾನಗರ, ಬೃಂದಾವನ ಸರ್ಕಲ್ ಬಳಿಯ ಪುರಸಭೆ ಉದ್ಯಾನಗಳಲ್ಲಿ ಮಕ್ಕಳ ಆಟಕ್ಕೆ, ವಾಯುವಿಹಾರಕ್ಕೆ ಯಾವುದೇ ವ್ಯವಸ್ಥೆ ಇಲ್ಲ. ಇಲ್ಲಿ ಮೊಣಕಾಲು ಎತ್ತರಕ್ಕೆ ಹುಲ್ಲು ಬೆಳೆದು ನಿಂತು ಕಸ ಆವರಿಸಿದೆ.
ವಿದ್ಯಾನಗರ, ಹುಡ್ಕೋ ಕಾಲನಿಯ ಉದ್ಯಾನದಲ್ಲಿ ನಡಿಗೆ ಪಥ ಅಲ್ಲಲ್ಲಿ ಕಿತ್ತು ಹೋಗಿದೆ. ಹುಲ್ಲು ಹಾಸಿಗೆ, ಸುಂದರ ಗಿಡಮರಗಳು, ಮಕ್ಕಳ ಆಟವಾಡುವ ಉಪಕರಣಗಳಿಲ್ಲದೇ ಯಾರೂ ಇತ್ತ ಕಡೆ ಮುಖ ಮಾಡದಂತಹ ದುಸ್ಥಿತಿ ಇದೆ. ಇರುವಂತಹ ಕೆಲ ಗಿಡಮರಗಳಿಗೆ ನೀರುಣಿಸಲಾಗುತ್ತಿಲ್ಲ. ಬಹುತೇಕ ಉದ್ಯಾನಗಳ ಗೇಟ್ಗೆ ಯಾವಾಗಲೂ ಬೀಗ ಹಾಕಿರುತ್ತದೆ.
ಲಕ್ಷಾಂತರ ರೂ.ವೆಚ್ಚ: ಪುರಸಭೆ ಅನುದಾನದಲ್ಲಿ ಹುಡ್ಕೋ ಕಾಲನಿ ಹಾಗೂ ಸ್ವಾಮಿ ವಿವೇಕಾನಂದ ನಗರದ ಉದ್ಯಾನಕ್ಕೆ ತಲಾ 4 ಲಕ್ಷ ರೂ, ವಿದ್ಯಾನಗರ ಉದ್ಯಾನಕ್ಕೆ 1.82 ಲಕ್ಷ ರೂ, ಜೆ.ಎಚ್. ಪಾಟೀಲ ನಗರದ ಉದ್ಯಾನಕ್ಕೆ 1.75 ಲಕ್ಷ ರೂ, ಬ್ಯಾಲವಾಡಗಿಯ ಉದ್ಯಾನಕ್ಕೆ 30 ಲಕ್ಷ ರೂ.ವೆಚ್ಚ ಮಾಡಲಾಗಿದೆ. ಇದಲ್ಲದೆ, ಪುರಸಭೆಯು ಉದ್ಯಾನದ ಅಭಿವೃದ್ಧಿಗೆ ಆಗಾಗ ಲಕ್ಷಾಂತರ ರೂ. ಖರ್ಚು ಮಾಡುತ್ತಿದೆ.
ಸೊಳ್ಳೆಗಳ ತಾಣ: ಬೃಂದಾವನ ಸರ್ಕಲ್ ಬಳಿಯ ಪುರಸಭೆ ಉದ್ಯಾನದಲ್ಲಿ ಮಕ್ಕಳ ಆಟಕ್ಕೆ ಒಂದೇ ಒಂದು ಜಾರುಬಂಡಿ ಇದೆ. ಇದು ಕೂಡ ತುಕ್ಕು ಹಿಡಿದು ಕಿತ್ತುಹೋಗಿದೆ. ಎಲ್ಲೆಂದರಲ್ಲಿ ಕಸದ ರಾಶಿ ಮತ್ತು ಒಂದೆಡೆ ನೀರು ನಿಂತು ಮಲಿನತೆ ಹೆಚ್ಚಾಗಿದ್ದು ಸೊಳ್ಳೆಗಳ ತಾಣವಾಗಿದೆ.
ಜಾಲಿವನ: ವಿದ್ಯಾನಗರದ ಉದ್ಯಾನದ ಸುತ್ತಲೂ ಕಸ ಬಿದ್ದು ಜಾಲಿ ಕಂಟಿಗಳು ಹೆಮ್ಮರವಾಗಿ ಬೆಳೆದಿವೆ. ಉದ್ಯಾನವೋ ಅಥವಾ ಜಾಲಿವನವೋ ಎಂಬ ಪ್ರಶ್ನೆ ಮೂಡುವಂತಿದೆ.
ಲೇಔಟ್ಗಳಲ್ಲಿ ಉದ್ಯಾನವಿಲ್ಲ: 1995ರಿಂದ 2017ರ ವರೆಗೆ ಪುರಸಭೆ ವ್ಯಾಪ್ತಿಯ ಬಿನ್ಶೇತ್ಕಿ ನಿವೇಶನಗಳ ಪೈಕಿ 130 ಲೇಔಟ್ಗಳಾಗಿವೆ. ಪ್ರತಿ ಲೇಔಟ್ನಲ್ಲಿ 2ರಿಂದ 10 ಗುಂಟೆವರೆಗೂ ಉದ್ಯಾನಕ್ಕಾಗಿ ಜಾಗ ಮೀಸಲಿರಿಸಲಾಗಿದೆ. ಆದರೆ, ಬಹುತೇಕ ಲೇಔಟ್ಗಳಲ್ಲಿ ಉದ್ಯಾನಗಳನ್ನು ಅಭಿವೃದ್ಧಿ ಪಡಿಸುವ ಕಾರ್ಯ ನಡೆದಿಲ್ಲ. ಉದ್ಯಾನಕ್ಕೆ ಮೀಸಲಿಟ್ಟ ಕೆಲ ಜಾಗಗಳನ್ನು ಬೇರೊಂದಕ್ಕೆ ಬಳಸಲಾಗಿದೆ.
ಪುರಸಭೆ ವ್ಯಾಪ್ತಿಯಲ್ಲಿ ಲಕ್ಷಾಂತರ ರೂ. ಖರ್ಚು ಮಾಡಿ 6 ಉದ್ಯಾನಗಳನ್ನು ನಿರ್ವಿುಸಿದರೂ ನಿರ್ವಹಣೆ ಮಾಡದೇ ಪಾಳುಬೀಳುವಂತಾಗಿವೆ. ಕೆಲ ಲೇಔಟ್ಗಳಲ್ಲಿ ಉದ್ಯಾನಕ್ಕೆ ಮೀಸಲಿಟ್ಟ ಜಾಗಗಳನ್ನು ಬೇರೊಂದಕ್ಕೆ ಬಳಸಲಾಗಿದೆ. ಉದ್ಯಾನಗಳನ್ನುಅಭಿವೃದ್ಧಿ ಪಡಿಸಬೇಕು. ಅವುಗಳ ಸೂಕ್ತ ನಿರ್ವಹಣೆ ಮಾಡಬೇಕು. | ಅಡಿವೆಪ್ಪ ಚಲವಾದಿ, ಸಾಮಾಜಿಕ ಕಾರ್ಯಕರ್ತ
ಉದ್ಯಾನಗಳನ್ನು ಸ್ವಚ್ಛಗೊಳಿಸುವುದರ ಜತೆಗೆ ಬೆಳೆದು ನಿಂತಿರುವ ಜಾಲಿಗಿಡಗಳನ್ನು ತೆರವು ಮಾಡುತ್ತೇವೆ. ಲೇಔಟ್ಗಳಲ್ಲಿ ಉದ್ಯಾನಕ್ಕೆ ಮೀಸಲಿಟ್ಟ ಜಾಗ ಕುರಿತು ಪರಿಶೀಲಿಸಿ ಉದ್ಯಾನ ನಿರ್ವಣಕ್ಕೆ ಆದ್ಯತೆ ನೀಡಲಾಗುತ್ತದೆ. ಬರುವ ಬಜೆಟ್ನಲ್ಲಿ ಉದ್ಯಾನ ಅಭಿವೃದ್ಧಿಗೆ ಅನುದಾನ ಮೀಸಲಿಟ್ಟು ಅಭಿವೃದ್ಧಿ ಪಡಿಸುವುದರೊಂದಿಗೆ ನಿರ್ವಹಣೆ ಮಾಡುತ್ತೇವೆ. | ಎಸ್.ಎಚ್. ನಾಯ್ಕರ, ಮುಖ್ಯಾಧಿಕಾರಿ