ಜಿಲ್ಲೆ

ಕಳೆಗುಂದಿದ ಪಟಾಕಿ ವಹಿವಾಟು

ಮೈಸೂರು: ದೀಪಾವಳಿ ಹಬ್ಬದ ಪ್ರಮುಖ ಆಕರ್ಷಣೆಯಾದ ಪಟಾಕಿ ವಹಿವಾಟು ಈ ಸಲ ಕಳೆಗುಂದಿದೆ.

ಸಾಮಾನ್ಯವಾಗಿ ದೀಪಾವಳಿಗೆ ಒಂದು ವಾರ ಇರುವಂತೆಯೇ ಪಟಾಕಿ ಮಾರಾಟ ಬಿರುಸಾಗಿರುತ್ತದೆ. ಆದರೆ, ಈ ಸಲ ಪಟಾಕಿ ಸದ್ದು ಅಡಗಿದ್ದು, ಗ್ರಾಹಕರಿಲ್ಲದೆ ಪಟಾಕಿ ಮಳಿಗೆಗಳು ಬಿಕೋ ಎನ್ನುತ್ತಿವೆ. ಇದರಿಂದಾಗಿ ತಲೆಮೇಲೆ ಕೈಹೊತ್ತು ಕುಳಿತಿರುವ ವ್ಯಾಪಾರಸ್ಥರು ಕಂಗಾಲಾಗಿದ್ದಾರೆ.


‘ಪಟಾಕಿ ಬಳಸಬೇಡಿ’ ಎಂಬ ಪರಿಸರ ಜಾಗೃತಿ, ಮಳೆ ಕಾರಣ ಸೇರಿದಂತೆ ವಿವಿಧ ಕಾರಣಕ್ಕೆ ಈ ಸಲ ಪಟಾಕಿ ವ್ಯಾಪಾರ ಕುಸಿದಿದೆ. ನಗರದ ಜೆ.ಕೆ.ಮೈದಾನ, ಚಾಮುಂಡಿಪುರಂ, ವಿದ್ಯಾರಣ್ಯಪುರಂ, ಕುವೆಂಪುನಗರದ ಅಕ್ಷಯ ಭಂಡಾರದ ಬಳಿ, ಬೋಗಾದಿ ರಿಂಗ್‌ರಸ್ತೆ ಸೇರಿದಂತೆ ನಗರದ ಹಲವು ಕಡೆ ಪಟಾಕಿ ಮಳಿಗೆ ತೆರೆದಿದ್ದು, ವ್ಯಾಪಾರ ಸಾಮಾನ್ಯವಾಗಿದೆ. ನಿರೀಕ್ಷಿತ ಮಟ್ಟದಲ್ಲಿ ಗ್ರಾಹಕರು ಸಹ ಬರುತ್ತಿಲ್ಲ.


ಉತ್ಪಾದನೆ ಇಳಿಕೆ:
ಕಚ್ಚಾ ವಸ್ತುಗಳ ಬೆಲೆ ಗಗನಕ್ಕೇರಿದ ಪರಿಣಾಮ ಹಾಗೂ ಕರೊನಾ ಆತಂಕದಿಂದ ಪಟಾಕಿಗಳ ಉತ್ಪನ್ನದಲ್ಲಿ ಭಾರಿ ಪ್ರಮಾಣದ ಇಳಿಮುಖವಾಗಿದೆ. ತಮಿಳುನಾಡಿನ ಶಿವಕಾಶಿಯಿಂದಲೇ ರಾಜ್ಯ ಸೇರಿದಂತೆ ದೇಶದ ವಿವಿಧ ಭಾಗಕ್ಕೆ ಪಟಾಕಿ ಪೂರೈಕೆ ಆಗುತ್ತದೆ. ಈ ಸಲ ಉತ್ಪಾದನೆಯಲ್ಲಿ ಶೇ. 40ರಷ್ಟು ಕಡಿಮೆಯಾಗಿದೆ. ಜತೆಗೆ, ಸಹಜವಾಗಿ ಕಳೆದ ವರ್ಷ ಇದ್ದ ದರಕ್ಕಿಂತ ಈ ಸಲ ಶೇ.30ರಷ್ಟು ಹೆಚ್ಚಳವಾಗಿದೆ. ಪಟಾಕಿ ಬೆಲೆ ಗ್ರಾಹಕರ ಕೈ ಸುಡುತ್ತಿದೆ.


ಬೇಡಿಕೆಗೆ ಅನುಗುಣವಾಗಿ ಪಟಾಕಿ ತರಲು ವ್ಯಾಪಾರಿಗಳಿಗೆ, ಡೀಲರ್‌ಗಳಿಗೆ ಸಾಧ್ಯವಾಗಿಲ್ಲ. ಮೈಸೂರಲ್ಲಿ 4-5 ಜನ ಸಗಟು ವ್ಯಾಪಾರಸ್ಥರಿದಾರೆ. ಹಲವು ವರ್ಷದಿಂದ ಪಟಾಕಿ ಮಾರಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ, ಈ ಸಲ ಶೇ.60ರಷ್ಟು ಮಾತ್ರ ಪಟಾಕಿ ತರಲು ಸಾಧ್ಯವಾಗಿದೆ ಎಂದು ಸಗಟು ವ್ಯಾಪಾರಿಯೊಬ್ಬರು ತಿಳಿಸಿದರು.
ಈ ಸಲ ಹೊಸ ಬಗೆಯ ಪಟಾಕಿಗಳು ಮಾರುಕಟ್ಟೆಗೆ ಬಂದಿವೆ. ಹಸಿರು ಪಟಾಕಿ ಸಿಡಿಸುವುದರಿಂದ ಪರಿಸರದ ಮೇಲೆ ದುಷ್ಪರಿಣಾಮ ಬೀರುವುದಿಲ್ಲ. ಕೆಲವರು ಅಪಪ್ರಚಾರಕ್ಕೆ ಕಿವಿಗೊಡದೆ ಪಟಾಕಿ ಖರೀದಿಸುತ್ತಿದ್ದಾರೆ ಎಂದು ಪಟಾಕಿ ವ್ಯಾಪಾರಿ ಸಂತೋಷ್ ತಿಳಿಸಿದರು.


ನೈಟ್ರೇಟ್, ಪೋಟಾಶ್ ಹಾಗೂ ಪಟಾಕಿ ತಯಾರಿಸಲು ಬಳಸುವ ವೇಸ್ಟ್ ಪೇಪರ್ ಬೆಲೆಯೂ ಹೆಚ್ಚಾಗಿದೆ. ಇದರಿಂದ ಪಟಾಕಿ ಬೆಲೆಯೂ ಹೆಚ್ಚಾಗಿತ್ತು. ಬೆಲೆ ಕಡಿಮೆಯಾಗಬಹುದೆಂಬ ಲೆಕ್ಕಾಚಾರದಿಂದ ಡೀಲರ್ಸ್‌ಗಳು ಬೇಡಿಕೆ ಸಲ್ಲಿಸದೆ ಸುಮ್ಮನಿದ್ದರು. ಕಳೆದ 5 ತಿಂಗಳ ಹಿಂದಿನಿಂದ ಡೀಲರ್‌ಗಳು ಬೇಡಿಕೆ ಸಲ್ಲಿಸಲು ಮುಂದಾದರು. ಹೀಗಾಗಿ, ಎಲ್ಲ ವ್ಯಾಪಾರಿಗಳು, ಡೀಲರ್ಸ್‌, ಸೂಪರ್ ಡೀಲರ್ಸ್‌ ಸಲ್ಲಿಸಿದ ಬೇಡಿಕೆಗೆ ಅನುಗುಣವಾಗಿ ಪಟಾಕಿ ಉತ್ಪಾದಿಸಲು ಆಗಿಲ್ಲ. ನಾವು 5 ಲೋಡ್ ಪಟಾಕಿ ತಂದಿದ್ದೇವೆ ಎಂದು ಕ್ರಾಕರ್ಸ್‌ ವರ್ಲ್ಡ್‌ನ ಹರೀಶ್ ತಿಳಿಸಿದರು

ನಿಶಬ್ದ ವಲಯಗಳಲ್ಲಿಯೂ ಅಬ್ಬರ
ನಿಶಬ್ದ ವಲಯದಲ್ಲಿ ಪಟಾಕಿ ಸದ್ದು ಅಬ್ಬರಿಸುತ್ತಿದೆ. ದೀಪಾವಳಿ ಹಬ್ಬದ ಆಚರಣೆ ಹಿನ್ನೆಲೆಯಲ್ಲಿ ಮೈಸೂರು ನಗರದ ಕಮಿಷನರೇಟ್ ವ್ಯಾಪ್ತಿಯಲ್ಲಿ ಬರುವ ಸ್ಥಳಗಳನ್ನು ನಿಶಬ್ದ ವಲಯಗಳನ್ನಾಗಿ ಘೋಷಿಸಲಾಗಿದೆ.
ಮೈಸೂರಿನ ನಗರ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಹಿರಿಯ ನಾಗರಿಕರು, ಅಸಹಾಯಕರು, ಅಸ್ವಸ್ಥರು ಹಾಗೂ ಪ್ರಾಣಿ ಪಕ್ಷಿಗಳ ಆರೋಗ್ಯ ಮತ್ತು ರಕ್ಷಣೆಯ ಹಿತದೃಷ್ಟಿಯಿಂದ ಈ ಆದೇಶ ಹೊರಡಿಸಲಾಗಿದೆ.

ಮೈಸೂರು ನಗರದ ಕಮಿಷನರೇಟ್ ವ್ಯಾಪ್ತಿಯಲ್ಲಿರುವ ಚಾಮರಾಜೇಂದ್ರ ಮೃಗಾಲಯ, ಕುಕ್ಕರಹಳ್ಳಿ ಕೆರೆ ಪ್ರದೇಶ, ಕಾರಂಜಿಕೆರೆ ಪ್ರದೇಶ, ಲಿಂಗಾಂಬುಧಿಕೆರೆ ಪ್ರದೇಶ, ಸಾರ್ವಜನಿಕ ಉದ್ಯಾನಗಳು, ಆಸ್ಪತ್ರೆ ಹಾಗೂ ನಸಿರ್ಂಗ್ ಹೋಮ್‌ಗಳು, ಶೈಕ್ಷಣಿಕ ಸಂಸ್ಥೆಗಳು, ನ್ಯಾಯಾಲಯ, ಧಾರ್ಮಿಕ ಸ್ಥಳಗಳಲ್ಲಿ 100 ಮೀಟರ್ ಸುತ್ತಳತೆ ಪ್ರದೇಶವನ್ನು 26ರ ವರೆಗೆ ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12ರವರೆಗೆ ನಿಶಬ್ದ ವಲಯ ಎಂದು ನಿಗದಿಪಡಿಸಲಾಗಿದೆ. ಆದ್ಯಾಗಿಯೂ ಈ ಪ್ರದೇಶದಲ್ಲಿ ಪಟಾಕಿ ಸುಡುವ ಮೂಲಕ ಆದೇಶವನ್ನು ಉಲ್ಲಂಘಿಸಲಾಗಿದೆ. ಬುಧವಾರ ಪಟಾಕಿ ಸದ್ದು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.