ರೋಣ ತಾಲೂಕಿನ ಮೆಣಸಗಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ 6.57 ಲಕ್ಷ ರೂ. ವೆಚ್ಚದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ವಿುಸಲಾಗಿರುವು ಬಾಸ್ಕೆಟ್ ಬಾಲ್ ಗ್ರೌಂಡ್. 
ಜಿಲ್ಲೆ

ಕಳೆಗಟ್ಟಿದ ಸರ್ಕಾರಿ ಶಾಲೆಗಳು


ಸೋಮು ಲದ್ದಿಮಠ ರೋಣ
ಸ್ಥಳೀಯರು ಉದ್ಯೋಗ ಅರಸಿ ದೂರದ ಪ್ರದೇಶಕ್ಕೆ ಗುಳೆ ಹೋಗುವುದನ್ನು ತಪ್ಪಿಸಲು ಜಾರಿಗೊಳಿಸಲಾದ ಉದ್ಯೋಗ ಖಾತ್ರಿ ಯೋಜನೆಯು ಈಗ ಸರ್ಕಾರಿ ಶಾಲೆಗಳ ಬೆಳವಣಿಗೆಗೆ ಕೈ ಜೋಡಿಸಿದೆ. ನರೇಗಾ ಯೋಜನೆಯಡಿ ಶಾಲಾಭಿವೃದ್ಧಿಗೆ ಪೂರಕವಾಗುವಂತಹ ಹಾಗೂ ಮಹತ್ವಪೂರ್ಣ ಕಾಮಗಾರಿಗಳನ್ನು ಕೈಗೊಂಡಿದ್ದು ಶಾಲೆಗಳೀಗ ಕಳೆಗಟ್ಟಿವೆ.
ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿ ಯಜನೆಯಡಿ ತಾಲೂಕಿನ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ಕೈತೋಟ, ಅಡುಗೆ ಕೋಣೆ, ಭೋಜನಾಲಯ, ಕಾಂಪೌಂಡ್, ಶೌಚಗೃಹ, ಆಟದ ಮೈದಾನ ಸೇರಿದಂತೆ ಇತರೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.
ಕೂಲಿ ಕಾರ್ವಿುಕರಿಗೆ ಉದ್ಯೋಗ ನೀಡುವುದರ ಜತೆಗೆ ಶಾಲೆಗಳನ್ನು ಅಭಿವೃದ್ಧಿಪಡಿಸುವುದರ ಮೂಲಕ ನರೇಗಾ ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ಮುಂದಾಗಿರುವ ಅಧಿಕಾರಿಗಳ ಕಾರ್ಯಕ್ಕೆ ಸ್ಥಳೀಯರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಬಹುತೇಕ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ನರೇಗಾ ಯೋಜನೆಯಡಿ ಅತ್ಯುಪಯುಕ್ತ ಹಾಗೂ ಮನಸೂರೆಗೊಳ್ಳುವಂತಹ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಕಾರ್ವಿುಕರಿಗೆ ತಾವಿದ್ದ ಊರಲ್ಲೇ ಕೆಲಸ ಸಿಕ್ಕ ಖುಷಿ ಒಂದೆಡೆಯಾದರೆ ಈ ಮೂಲಕ ಸರ್ಕಾರಿ ಶಾಲೆಗಳು ಕ್ರಮೇಣ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವುದು ಶಿಕ್ಷಣ ಪ್ರೇಮಿಗಳ ಸಂತಸಕ್ಕೆ ಕಾರಣವಾಗಿದೆ.
ಕಾಮಗಾರಿಗಳ ವಿವರ: ನರೇಗಾ ಯೋಜನೆಯಡಿ ರೋಣ ಹಾಗೂ ಗಜೇಂದ್ರಗಡ ತಾಲೂಕಿನ 17 ಸರ್ಕಾರಿ ಶಾಲೆಗಳಲ್ಲಿ ಆಟದ ಮೈದಾನ ಅಭಿವೃದ್ಧಿಪಡಿಸಲಾಗಿದೆ. ಇದರಲ್ಲಿ 5 ಶಾಲೆಗಳಲ್ಲಿ ಆಕರ್ಷಕ ಬಾಸ್ಕೆಟ್ ಬಾಲ್ ಕೋರ್ಟ್ ನಿರ್ಮಾಣ ಮಾಡಲಾಗಿದೆ. 13 ಶಾಲೆಗಳಿಗೆ ಕಾಂಪೌಂಡ್ ನಿರ್ವಿುಸಿ ಅದರ ಗೋಡೆಗಳಿಗೆ ಚಿತ್ತಾಕರ್ಷಕ ಚಿತ್ರಗಳು ಹಾಗೂ ಸರ್ಕಾರಿ ಯೋಜನೆಗಳ ಮಾಹಿತಿಯುಳ್ಳ ಬರಹಗಳನ್ನು ಬರೆಯಲಾಗಿದೆ. ಈ ಮೂಲಕ ಶಾಲೆಗಳ ಅಂದವೂ ಹೆಚ್ಚಾಗಿದೆ. 3 ಶಾಲೆಗಳಲ್ಲಿ ಉದ್ಯಾನ ನಿರ್ವಿುಸಲಾಗಿದೆ. 18 ಶಾಲೆಗಳಲ್ಲಿ ತಲಾ 6 ಲಕ್ಷ ರೂ. ವೆಚ್ಚದಲ್ಲಿ ಬಾಲಕಿಯರಿಗಾಗಿ ಪಿಂಕ್ ಶೌಚಗೃಹ ನಿರ್ವಿುಸಲಾಗಿದೆ. 56 ಶಾಲೆಗಳಲ್ಲಿ ಶೌಚಗೃಹ ಘಟಕಗಳನ್ನು ಸ್ಥಾಪಿಸಲಾಗಿದೆ. 38 ಶಾಲೆಗಳಲ್ಲಿ ಪೌಷ್ಟಿಕ ತೋಟಗಳನ್ನು ನಿರ್ವಿುಸಲಾಗಿದ್ದು, ಈಗ ಬಹುತೇಕ ಶಾಲೆಗಳಲ್ಲಿ ಮಕ್ಕಳ ಬಿಸಿಯೂಟಕ್ಕೆ ಈ ತೋಟದಲ್ಲಿನ ತರಕಾರಿಯನ್ನೇ ಉಪಯೋಗಿಸಲಾಗುತ್ತಿದೆ.
ಮೆಣಸಗಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ 6.57 ಲಕ್ಷ ರೂ. ವೆಚ್ಚದಲ್ಲಿ ಬಾಸ್ಕೆಟ್ ಬಾಲ್ ಗ್ರೌಂಡ್ ನಿರ್ವಿುಸಲಾಗಿದ್ದು, ಇದರಿಂದ ಕಾರ್ವಿುಕರಿಗೆ 495 ಮಾನವ ದಿನಗಳ ಕೆಲಸ ದೊರೆತಿದೆ. ಹೊಳೆ ಆಲೂರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ಆಟದ ಮೈದಾನ ನಿರ್ವಿುಸಲಾಗಿದ್ದು, ಇದರಿಂದ 1092 ಮಾನವ ದಿನಗಳಿಗೆ ಕೆಲಸ ದೊರೆತಿದೆ. ರೋಣ ತಾಲೂಕಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಶಾಲೆಗಳ ಅಭಿವೃದ್ಧಿಗೆ 3 ಕೋಟಿ 60 ಲಕ್ಷ ರೂ. ಮಂಜೂರಾಗಿದ್ದು, ಇದರಲ್ಲಿ 1 ಕೋಟಿ 26 ಲಕ್ಷ ರೂ. ಕಾಮಗಾರಿ ಪೂರ್ಣಗೊಂಡಿದ್ದು. ಇದರಿಂದ 40795 ಮಾನವ ದಿನಗಳ ಕೆಲಸ ನೀಡಲಾಗಿದೆ. ಅದೇ ರೀತಿ ಗಜೇಂದ್ರಗಡ ತಾಲೂಕಿಗೆ 1 ಕೋಟಿ 73 ಲಕ್ಷ ರೂ. ಮಂಜೂರಾಗಿದ್ದು, ಇದರಲ್ಲಿ 57 ಲಕ್ಷ ರೂ. ವೆಚ್ಚದ ಕಾಮಗಾರಿ ಪೂರ್ಣಗೊಂಡು 18546 ಮಾನವ ದಿನಗಳ ಕೆಲಸ ನೀಡಲಾಗಿದೆ ಎಂದು ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಸಂತೋಷ ಪಾಟೀಲ ತಿಳಿಸಿದ್ದಾರೆ.

ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಸರ್ಕಾರ ಹಲವಾರ ಯೋಜನೆಗಳನ್ನು ಜಾರಿಗೊಳಿಸಿದ್ದು, ನರೇಗಾ ಯೋಜನೆಯಡಿ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕ್ರಮ ಕೈಗೊಂಡಿರುವುದು ಉತ್ತಮ ಕಾರ್ಯ. ನರೇಗಾ ಯೋಜನೆ ಮೂಲಕ ಸರ್ಕಾರಿ ಶಾಲೆಗಳು ಕಳೆಗಟ್ಟಿವೆ. ಗೋಡೆಬರಹಗಳು ಮನಸೂರೆಗೊಳ್ಳುತ್ತಿವೆ. ಜತೆಗೆ ಸುಸಜ್ಜಿತವಾದ ಕ್ರೀಡಾಂಗಣ ನಿರ್ವಿುಸಿರುವುದರಿಂದ ಮಕ್ಕಳ ಆಟೋಟಕ್ಕೆ ಸಹಕಾರಿಯಾಗಿದೆ. ಪೌಷ್ಟಿಕ ತೋಟಗಳು ಮಕ್ಕಳ ಬಿಸಿಯೂಟಕ್ಕೆ ತಾಜಾ ಹಾಗೂ ಉತ್ತಮ ಗುಣಮಟ್ಟದ ತರಕಾರಿ ಒದಗಿಸಲು ಸಹಕಾರಿಯಾಗಿವೆ.| ಡಾ. ಶಶಿಧರ ಹಟ್ಟಿ , ಹಿರೇಹಾಳ ಗ್ರಾಮದ ನಿವಾಸಿ-----------ಗ್ರಾಮೀಣ ಸಮುದಾಯವನ್ನು ಆರ್ಥಿಕವಾಗಿ ಸದೃಢಪಡಿಸುವಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ತುಂಬಾ ಅನುಕೂಲವಾಗಿದೆ. ಸರ್ಕಾರಿ ಶಾಲೆಗಳಿಗೆ ಮೂಲ ಸೌಕರ್ಯ ಕಲ್ಪಿಸಲು ನರೇಗಾ ಯೋಜನೆಯಡಿ ಕಾಮಗಾರಿಗಳನ್ನು ಕೈಗೊಳ್ಳಲು ಹೆಚ್ಚಿನ ಆದ್ಯತೆ ನೀಡಲಾಗಿದೆ. ಈಗಾಗಲೇ ಶಾಲೆಗಳಿಗೆ ಕಾಂಪೌಂಡ್, ಉದ್ಯಾನ, ಕ್ರೀಡಾಂಗಣ ನಿರ್ವಿುಸಲಾಗಿದೆ. ಇದೇ ರೀತಿಯ ಮತ್ತಷ್ಟು ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ.| ಸಂತೋಷ ಪಾಟೀಲ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ