ಮೈಸೂರು: ಕಳೆಗಿಡಗಳು ಬೆಲೆ ಕಟ್ಟಲಾಗದ ಬೆಳೆಗಳು. ಅದರಲ್ಲೂ ಪೋಷಕಾಂಶ, ಔಷಧ ಗುಣಗಳಿವೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.
ಉಳುಮೆ ಪ್ರತಿಷ್ಠಾನದ ವತಿಯಿಂದ ಧ್ವನ್ಯಾಲೋಕದಲ್ಲಿ ಭಾನುವಾರ ಆಯೋಜಿಸಿದ್ದ ಚೈತನ್ಯ ಕಳೆಗಿಡಗಳ ಪ್ರದರ್ಶನ, ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯಾಂತ್ರೀಕೃತ ಯುಗದಲ್ಲಿ ಪ್ರತಿಯೊಂದು ವಿಷಯದಲ್ಲೂ ವಾಣಿಜ್ಯ ದೃಷ್ಟಿಕೋನ ಕಾಣಸಿಗುತ್ತದೆ. ಹಣ ಗಳಿಸುವುದು ಬೆಳೆ, ಬೆಲೆಇ ಲ್ಲದ್ದು ಕಳೆಗಿಡಗಳು ಎಂಬ ತಪ್ಪುಕಲ್ಪನೆ ಬೇರೂರಿದೆ. ಕಳೆಗಿಡಗಳಿಂದ ಹಸಿರೀಕರಣ, ಭೂಮಿಯ ತೇವಾಂಶ, ಫಲವತ್ತತೆಯ ಸಂರಕ್ಷಣೆ, ಭೂಸವಕಳಿ ತಡೆ ಮತ್ತು ಹವಾಮಾನ ಸಮತೋಲನ ಕಾಯ್ದುಕೊಳ್ಳಲು ನೆರವಾಗುತ್ತದೆ ಎಂದರು.
ಕಳೆಗಿಡಗಳನ್ನು ನಿಕೃಷ್ಟವಾಗಿ ಕಾಣುತ್ತೇವೆ. ಆದರೆ, ಆಡುಭಾಷೆಯಲ್ಲಿ ಕಳೆ ಎಂದರೆ ಆಕರ್ಷಣೆ, ವಿಕಾಸ ಎಂದಾಗುತ್ತದೆ. ನೈಸರ್ಗಿಕ ಕೃಷಿ ಪದ್ಧತಿಯನ್ನು ಅನುಸರಿಸಬೇಕಿದ್ದು, ವಿವಿಧ ಕೆಳೆ ಗಿಡಗಳನ್ನು ಬೆಳೆಯಲು ಸಾಧ್ಯವಾಗುತ್ತದೆ. ಇದರಿಂದ ಕೃಷಿಗೂ ಚೈತನ್ಯ ದೊರೆಯಲಿದೆ ಎಂದರು.
ಸ್ವಾರ್ಥ ಸಾಧನೆಯ ದೊಡ್ಡ ಕಂಪನಿಗಳು ಸಂಶೋಧನೆ, ತಂತ್ರಜ್ಞಾನ ಬಳಕೆ, ಕೀಟನಾಶಕ, ರಸಗೊಬ್ಬರ ಬಳಕೆಗೆ ಉತ್ತೇಜನ ನೀಡುವ ಮೂಲಕ ಕೃಷಿಯನ್ನು ದಿಕ್ಕು ತಪ್ಪಿಸುತ್ತಿವೆ. ರೌಂಡ್ ಅಪ್ ಎಂಬ ಕೀಟನಾಶಕ ಬಳಕೆಯಿಂದ ಪರಿಸರ, ಕೃಷಿಸ್ನೇಹಿ ಕೀಟಗಳು, ಜೀವಾಣುಗಳು, ಭೂಫಲವತ್ತತೆಯೇ ಹಾಳಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ವ್ಯವಸಾಯದಲ್ಲಿ ನಿಸರ್ಗದ ಗುಣವಿದೆ. ಆದರೀಗ ಕೃಷಿ ಅನೇಕ ರೀತಿಯಲ್ಲೂ ಬದಲಾವಣೆ ಆಗಿ ರೂಪಾಂತರಗೊಂಡಿದೆ. ಅನೇಕ ಸಂಶೋಧನೆ, ಪರಿಷ್ಕರಣೆ ಮಾಡಲಾಗುತ್ತಿದೆ. ಇದರಿಂದ ಒಳ್ಳೆಯದಕ್ಕಿಂತ ಕೆಟ್ಟದ್ದು ಹೆಚ್ಚಾಗಿದೆ. ಜಾಗತಿಕ ಮಟ್ಟದಲ್ಲಿ ಭಾರತದ ಕೃಷಿ, ರೈತರ ಸಮಸ್ಯೆ ಏನೂ ಭಿನ್ನವಾಗಿಲ್ಲ ಎಂದರು.
ಕೃಷಿಕ, ಲೇಖಕ ಟಿ.ಜಿ.ಎಸ್.ಅವಿನಾಶ್ ಮಾತನಾಡಿ, ಕಳೆಗಿಡಗಳು ನಿರುಪಯುಕ್ತವಲ್ಲ. ಅವುಗಳು ಕೃಷಿಗೆ, ಪರಿಸರಕ್ಕೆ ಉಪಯುಕ್ತ ಸಸ್ಯಗಳಾಗಿವೆ. ಆದ್ದರಿಂದ ಕಳೆಗಿಡಗಳ ಮಹತ್ವದ ಕುರಿತು ಪ್ರತಿ ಗ್ರಾಮ ಮತ್ತು ರೈತರ ಮನೆಗೆ ತಿಳಿಸುವ ಕೆಲಸವಾಗಬೇಕಿದೆ ಎಂದರು.
ಕೃಷಿ ಭೂಮಿಯಲ್ಲಿರುವ ಅನೇಕ ಸೂಕ್ಷ್ಮಜೀವಿಗಳು, ಕೀಟಗಳಿಗೆ ಕಳೆಗಿಡಗಳೇ ಆಸರೆ. ಅದುವೇ ಗಾಳಿ, ಬೆಳಕು, ಆಹಾರ ಒದಗಿಸುತ್ತದೆ. ಆದರೆ, ಅತಿಯಾದ ರಸಗೊಬ್ಬರ ಬಳಕೆಯಿಂದ ಈ ಜೀವಿಗಳೆಲ್ಲ ಸಾಯುತ್ತಿವೆ. ಇದರಿಂದ ಕೀಟಗಳು, ಜೀವಾಣುಗಳ ಮೂಲಕ ಗಿಡಗಳಲ್ಲಿ ನಡೆಯುವ ಪರಾಗಸ್ಪರ್ಶ ಕ್ರಿಯೆಯೂ ತಗ್ಗಿದೆ. ಇದುವೇ ಇಳುವರಿ ಕಡಿಮೆಯಾಗಲು ಕಾರಣವಾಗಿದೆ ಎಂದು ಹೇಳಿದರು.
ಬಿಳಿಗಿರಿರಂಗನಬೆಟ್ಟದ ಪಿಯುಸಿ ವಿದ್ಯಾರ್ಥಿನಿ ರಮ್ಯಾ, ರೈತ ರಾಮೇಗೌಡ ಅವರು ಔಷಧ ಸಸ್ಯಗಳ ಪ್ರಾತ್ಯಕ್ಷಿಕೆ, ಅದರ ಮಹತ್ವ ತಿಳಿಸಿಕೊಟ್ಟರು.
ಕೃಷಿಕ ಹಾಗೂ ಲೇಖಕ ಎ.ಪಿ.ಚಂದ್ರಶೇಖರ್, ಪರಿಸರ ಅಧ್ಯಯನ ಕೇಂದ್ರದ ಸಂಶೋಧಕ ಮುರಳೀಧರ ಗುಂಗರುಮಳೆ, ಯಗಚಿಹಳ್ಳಿಯ ಸಾವಯವ ಕೃಷಿಕ ರಾಮಕೃಷ್ಣಪ್ಪ, ಸಾಮಾಜಿಕ ಕಾರ್ಯಕರ್ತೆ ಎನ್.ಇಂದಿರಮ್ಮ ಇನ್ನಿತರರಿದ್ದರು.