ಜಿಲ್ಲೆ

ಕಳಸಾ-ಬಂಡೂರಿ ಕಾಮಗಾರಿ ಸ್ವರೂಪ ಬದಲಾವಣೆ, ರಾಜ್ಯ ಸರ್ಕಾರದ ಕ್ರಮಕ್ಕೆ ಕೋನರಡ್ಡಿ ಆಕ್ಷೇಪ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

ಕಳಸಾ- ಬಂಡೂರಿ, ಮಹದಾಯಿ ಯೋಜನೆಯ ಕಾಮಗಾರಿ ಸ್ವರೂಪ ಬದಲಾವಣೆ ಮಾಡಿ ಶೀಘ್ರ ಕೆಲಸ ಆರಂಭಿಸುವುದಾಗಿ ಹೇಳಿರುವ ರಾಜ್ಯ ಸರ್ಕಾರದ ಕ್ರಮವನ್ನು ನವಲಗುಂದ ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ ಆಕ್ಷೇಪಿಸಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯಾಯಾಧಿಕರಣದ ಆದೇಶದಂತೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದ ನಂತರ ರಾಜ್ಯ ಸರ್ಕಾರ ಇಂತಹ ಕ್ರಮಕ್ಕೆ ಮುಂದಾಗಿದೆ. ಖಾನಾಪುರ ತಾಲೂಕಿನ ಕಣಕುಂಬಿಯಲ್ಲಿ 28 ಮೀಟರ್ ಎತ್ತರದ ಅಣೆಕಟ್ಟಿನ ಬದಲಾಗಿ 11 ಮೀಟರ್​ಗೆ ಇಳಿಸಿ ಕಾಮಗಾರಿ ಆರಂಭಿಸುವುದಾಗಿ ಜಲಸಂಪನ್ಮೂಲ ಸಚಿವರು ಹೇಳಿಕೆ ನೀಡಿದ್ದಾರೆ. ಇದರ ಸಾಧಕ, ಬಾಧಕಗಳ ಬಗ್ಗೆ ರ್ಚಚಿಸಲು ಅ. 23ರಂದು ನಗರದಲ್ಲಿ ಕಾರ್ಯಾಗಾರ ಏರ್ಪಡಿಸಲಾಗುವುದು ಎಂದರು.

ಓಪನ್ ಕಾಲುವೆ ಮೂಲಕ ಮಳೆಗಾಲದಲ್ಲಿ ತಾನಾಗಿಯೇ ಮಲಪ್ರಭಾ ನದಿಗೆ ನೀರು ಬರುತ್ತಿದೆ. ಒಂದು ವೇಳೆ ಪಂಪ್ ಮಾಡಿ ನೀರು ತರಲು ಸರ್ಕಾರ ಮುಂದಾದರೆ ಸ್ವಾಭಾವಿಕವಾಗಿ ಹರಿದು ಬರುವ ನೀರು ನಿಲ್ಲುತ್ತದೆ. ಹಾಗಾಗಿ ತಜ್ಞರ ಜತೆ ಚರ್ಚೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ತಾಂತ್ರಿಕ ಸಾಧ್ಯತೆಗಳ ಬಗ್ಗೆ ಗಮನ ಹರಿಸಬೇಕು. ಸ್ವರೂಪ ಬದಲಾವಣೆ ಬಗ್ಗೆ ಸ್ಪಷ್ಟೀಕರಣ ನೀಡಬೇಕು ಎಂದು ಆಗ್ರಹಿಸಿದರು.

ಮುಂಬರುವ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ತರಾತುರಿಯಲ್ಲಿ ಯೋಜನೆ ಅನುಷ್ಠಾನ ಮಾಡಲು ರಾಜ್ಯದ ಬಿಜೆಪಿ ಸರ್ಕಾರ ಹೊರಟಂತಿದೆ. ಹಾಗಾಗಿ, ಹಿರಿಯ ನ್ಯಾಯವಾದಿ ಮೋಹನ ಕಾತರಕಿ, ತಜ್ಞರನ್ನು ಒಳಗೊಂಡು ಕಾರ್ಯಾಗಾರ ನಡೆಸಿ ಸರ್ಕಾರಕ್ಕೆ ಅನುಕೂಲವಾಗುವ ಮಾಹಿತಿ ನೀಡಲಾಗುವುದು ಎಂದರು.

ಮಲತಾಯಿ ಧೋರಣೆ: ಅತಿವೃಷ್ಟಿಯಿಂದ ಉಂಟಾದ ಬೆಳೆ ಪರಿಹಾರವಾಗಿ ಧಾರವಾಡ ಜಿಲ್ಲೆಯಲ್ಲಿ ಕೇವಲ 25 ಸಾವಿರ ರೂ. ನೀಡಲಾಗುತ್ತಿದೆ. ಹಾವೇರಿ, ಗದಗ ಜಿಲ್ಲೆಯಲ್ಲಿ 50 ಸಾವಿರ ರೂ. ನೀಡಲಾಗುತ್ತಿದೆ. ಧಾರವಾಡ ಜಿಲ್ಲೆಯ ರೈತರೊಂದಿಗೆ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ ಎಂದು ಮಾಜಿ ಶಾಸಕ ಕೋನರಡ್ಡಿ ದೂರಿದರು. ಕೂಡಲೇ ಈ ತಾರತಮ್ಯ ಸರಿಪಡಿಸಬೇಕು. ಜಿಲ್ಲೆಯ ರೈತರಿಗೂ ಹೆಚ್ಚಿನ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ನಿವೃತ್ತ ಇಂಜಿನಿಯರ್ ಬಿ.ಎಚ್. ಪಾಟೀಲ, ಮಹದಾಯಿ ಹೋರಾಟಗಾರ ಶಿವಣ್ಣ ಹುಬ್ಬಳ್ಳಿ ಗೋಷ್ಠಿಯಲ್ಲಿದ್ದರು.

=======