ಕಳಸ ಪೊಲೀಸ್ ಠಾಣೆ ಮುಖ್ಯ ರಸ್ತೆಯಲ್ಲಿಯೇ ಕೆಎಸ್‌ಆರ್‌ಟಿಸಿ ಬಸ್‌ನ್ನು ನಿಲ್ಲಿಸಿರುವುದು. 
ಜಿಲ್ಲೆ

ಕಳಸದಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ಲಿಸಿದಲ್ಲೇ ನಿಲ್ದಾಣ!

ಕಳಸ: ಎಲ್ಲೆಂದರಲ್ಲಿ ನಿಲ್ಲಿಸುವ ಕೆಎಸ್‌ಆರ್‌ಟಿಸಿ ಬಸ್‌ಗಳಿಂದ ಪಟ್ಟಣದಲ್ಲಿ ಸಾರ್ವಜನಿಕರಿಗೆ ನಿತ್ಯ ತೊಂದರೆ ಉಂಟಾಗುತ್ತಿದ್ದು, ದಿನ ನಿತ್ಯ ಸಾರ್ವಜನಿಕರಿಗೂ ಕೆಎಸ್‌ಆರ್‌ಟಿಸಿ ಬಸ್ ಚಾಲಕರಿಗೂ ಮಾತಿನ ಚಕಮಕಿ ನಡೆಯುತ್ತಿದೆ.

ಮೂಡಿಗೆರೆ, ಬೆಂಗಳೂರು, ಹಾಸನ, ಮೈಸೂರು ಮಂತಾದೆಡೆಯಿಂದ ಹೊರನಾಡು ಮತ್ತು ಕಳಸಕ್ಕೆ ದಿನನಿತ್ಯ ಹಲವಾರು ಸರ್ಕಾರಿ ಬಸ್‌ಗಳು ಸಂಚರಿಸುತ್ತಿವೆ. ಆದರೆ ಕಳಸ-ಹೊರನಾಡಿಗೆ ಹೋಗುವ ಹೆಬ್ಬಾಳೆ ಎಂಬಲ್ಲಿ ಭದ್ರಾ ನದಿಗೆ ಹೊಸ ಸೇತುವೆ ಕಾಮಗಾರಿ ನಡೆಯುತ್ತಿರುವುದರಿಂದ ಒಂದು ತಿಂಗಳಿನಿಂದ ಭಾರಿ ವಾಹನಗಳು ಹೊರನಾಡಿಗೆ ತೆರಳುವಂತಿಲ್ಲ. ಹಾಗಾಗಿ ಸರ್ಕಾರಿ ಬಸ್‌ಗಳು ಕಳಸದಲ್ಲಿಯೇ ನಿಲ್ಲಬೇಕಾಗುತ್ತದೆ.

ಕಳಸದಲ್ಲಿ ಸರ್ಕಾರಿ ಬಸ್‌ಗಳನ್ನು ನಿಲ್ಲಿಸಲೆಂದೇ ನಿಗದಿತ ಸ್ಥಳ ಗುರುತು ಮಾಡಿಕೊಡಲಾಗಿದೆ. ಆದರೆ ಆ ಸ್ಥಳದಲ್ಲಿ ಬೆರಳೆಣಿಕೆಯಷ್ಟು ಬಸ್‌ಗಳನ್ನು ನಿಲ್ಲಿಸಿದರೆ ಇನ್ನುಳಿದ ಬಸ್‌ಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಿ ದಿನ ನಿತ್ಯ ಓಡಾಡುವ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುತ್ತಿದ್ದಾರೆ.

ಕಳಸದಲ್ಲಿ ಖಾಸಗಿ ಬಸ್‌ಗಳು ಇತರ ವಾಹನಗಳ ಮಾಲೀಕರು ಟ್ರಾಫಿಕ್ ನಿಯಮಗಳನ್ನು ಪಾಲಿಸಿದರೆ, ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಮಾತ್ರ ಅವರದ್ದೇ ನಿಯಮವಾಗಿದೆ. ಯಾವುದೇ ಟ್ರಾಫಿಕ್ ನಿಯಮಗಳನ್ನು ಪಾಲಿಸದೆ ಬಸ್‌ಗಳನ್ನು ಮನಸೋಇಚ್ಛೆ ನಿಲ್ಲಿಸುತ್ತಿದ್ದಾರೆ. ಕ್ರಾಸ್ ರಸ್ತೆಗಳಿಗೆ ಅಡ್ಡವಾಗಿ ಬಸ್‌ಗಳನ್ನು ನಿಲ್ಲಿಸಿ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುತ್ತಿದ್ದಾರೆ. ಕಳಸ ಪೊಲೀಸ್ ಠಾಣೆ ಎದುರು ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ರಸ್ತೆ ಮಧ್ಯೆ ನಿಲ್ಲಿಸುತ್ತಾರೆ. ಈ ಬಗ್ಗೆ ಸಾರ್ವಜನಿಕರು ಪ್ರಶ್ನಿಸಿದರೆ ಹೊಡೆದಾಟಕ್ಕೆ ಚಾಲಕರು ಮುಂದಾಗುತ್ತಿದ್ದಾರೆ. ಕೆಲವೆಡೆ ಫುಟ್‌ಪಾತ್ ಮೇಲೂ ಬಸ್‌ಗಳನ್ನು ನಿಲ್ಲಿಸಿ ಪುಟ್‌ಪಾತ್‌ನ ಹಾಸುಗಲ್ಲನ್ನು ಪುಡಿ ಮಾಡಿದ್ದಾರೆ.

ಕೆಎಸ್‌ಆರ್‌ಟಿಸಿ ಬಸ್‌ಗಳ ಚಾಲಕರ ವರ್ತನೆಯಿಂದ ಪ್ರತಿ ದಿನ ಸಮಸ್ಯೆಗಳು ಉಂಟಾಗುವುದಲ್ಲದೆ ಸಾರ್ವಜನಿಕರೊಂದಿಗೆ ಪ್ರತಿ ನಿತ್ಯ ಘರ್ಷಣೆಗಳು ನಡೆಯುತ್ತಿವೆ. ಕೆಲ ದಿನಗಳ ಹಿಂದೆಯಷ್ಟೇ ನಿಯಮ ಬಾಹಿರವಾಗಿ ಸರ್ಕಾರಿ ಬಸ್ ನಿಲ್ಲಿಸಿದ್ದ ಪರಿಣಾಮ ಅಪಘಾತ ಸಂಭವಿಸಿ ಕಾರೊಂದು ಸಂಪೂರ್ಣ ನಜ್ಜುಗುಜ್ಜಾಗಿತ್ತು. ಕೆಲ ವರ್ಷಗಳ ಹಿಂದೆ ವ್ಯಕ್ತಿಯೋರ್ವರ ಸಾವಿಗೂ ಕಾರಣವಾಗಿತ್ತು.

ಕೆಎಸ್‌ಆರ್‌ಟಿಸಿ ಬಸ್ ಚಾಲಕರ ಇಂಥ ವರ್ತನೆಯಿಂದ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ, ರೋಗಿಗಳಿಗೆ, ವಾಹನ ಸವಾರರಿಗೆ ನಿತ್ಯ ತೊಂದರೆ ಉಂಟಾಗುತ್ತಿದೆ. ಹಿರಿಯ ಅಧಿಕಾರಿಗಳು ಗಮನಹರಿಸಿ ಚಾಲಕರ ವಿರುದ್ಧ ಕ್ರಮಕೈಗೊಳ್ಳಬೇಕು.