ಕಳಸ: ತಾಲೂಕಿನಾದ್ಯಂತ ಕಳೆದ ಕೆಲ ದಿನಗಳಿಂದ ಸುರಿಯುತ್ತಿದ್ದ ಮಳೆಯ ಪ್ರಮಾಣ ತೀವ್ರವಾಗಿದ್ದು ಭಾನುವಾರ ಭದ್ರಾ ನದಿಯು ತುಂಬಿ ಹರಿಯುತ್ತಿದೆ.
ಕುದುರೆಮುಖ, ಜಾಂಬ್ಲೆ, ನೆಲ್ಲಿಬೀಡು ಪ್ರದೇಶದಲ್ಲಿ ಹೆಚ್ಚು ಮಳೆಯಾಗುತ್ತಿದ್ದು ನದಿ, ಹಳ್ಳ, ತೊರೆಗಳು ಮೈದುಂಬಿ ಹರಿಯುತ್ತಿದೆ. ಭದ್ರಾ ನದಿ ತುಂಬಿ ಹರಿಯುತ್ತಿರುವ ಪರಿಣಾಮ ಕಳಸ ಸಮೀಪದ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿ ಕಳಸ-ಹೊರನಾಡು ಸಂಪರ್ಕ ಕಡಿತಗೊಂಡಿದೆ.
ಶನಿವಾರ ರಾತ್ರಿ ಸುರಿದ ಭಾರಿ ಮಳೆಯಿಂದ ರಾತ್ರಿಯೇ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿದೆ. ಇದರಿಂದ ಹೊರನಾಡು, ಬಲಿಗೆ, ಚಿಕ್ಕನಕುಡಿಗೆ, ಮಾವಿನಹೊಲ, ಮಣ್ಣಿನಪಾಲ್ ಕಡೆ ಹೋಗುವ ಗ್ರಾಮಸ್ಥರಿಗೆ ತೊಂದರೆಯಾಯಿತು. ಹೊರನಾಡಿಗೆ ಬಂದ ಪ್ರವಾಸಿಗರು ಒಂದೆರಡು ಗಂಟೆ ಸೇತುವೆ ಸಮೀಪ ಕಾಯುವಂತಾಯಿತು. ಲಘು ವಾಹನ ಪ್ರಯಾಣಿಕರು ಹೊರನಾಡಿಗೆ ಹೋಗುವ ಬದಲಿ ಮಾರ್ಗ ಹಳುವಳ್ಳಿ ರಸ್ತೆಯಲ್ಲಿ ತೆರಳಿದರು. ದೊಡ್ಡ ವಾಹನದಲ್ಲಿ ಬಂದ ಭಕ್ತರಿಗೆ ಹೊರನಾಡಿಗೆ ಹೋಗಲು ಸಾಧ್ಯವಾಗಲಿಲ್ಲ. ಸರ್ಕಾರಿ ಬಸ್‌ಗಳು ಕಳಸದಲ್ಲಿಯೇ ನಿಲುಗಡೆಗೊಂಡವು.
ಭದ್ರಾ ನದಿಯ ನೀರಿನ ಮಟ್ಟ ಹೆಚ್ಚಾಗುತ್ತಿದ್ದಂತೆ ಕಳಸ-ಕುದುರೆಮುಖ ಮುಖ್ಯರಸ್ತೆಯ ನೆಲ್ಲಿಬೀಡು ಎಂಬಲ್ಲಿ ಸೇತುವೆ ಮುಳುಗಡೆಯಾಗಿ ಕಳಸ-ಕುದುರೆಮುಖ ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಇದರಿಂದ ಕರಾವಳಿ ಪ್ರದೇಶಕ್ಕೆ ತೆರಳುವ ಪ್ರಯಾಣಿಕರು ತೊಂದರೆ ಅನುಭವಿಸಿದರು. ಭದ್ರಾ ನದಿಯ ನೀರು ಕಳಕೋಡು ರಸ್ತೆಯಲ್ಲಿ ಹರಿದ ಪರಿಣಾಮ ಕೆಲಕಾಲ ಕಳಕೋಡು ರಸ್ತೆ ಸಂಪರ್ಕ ಕಡಿತಗೊಂಡಿತು. ಸಂಸೆಯ ಸೋಮಾವತಿ ನದಿಯು ಅಪಾಯ ಮಟ್ಟ ಮೀರಿ ಹರಿಯುತ್ತಿರುವುದರಿಂದ ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡವು.