ಕಳಸ: ಕಳಸ ಕಲಶೇಶ್ವರ ದೇವಾಲಯದಲ್ಲಿ ಶಿವರಾತ್ರಿ ಪ್ರಯುಕ್ತ ವಿಶೇಷ ಪೂಜಾ ವಿಧಿವಿಧಾನಗಳು ನೆರವೇರಿದವು.
ಶಿವರಾತ್ರಿಯ ಮುಂಜಾನೆ ಭಕ್ತಾದಿಗಳು ಪಂಚ ತೀರ್ಥಗಳಾದ ವಶಿಷ್ಠತೀರ್ಥ, ರುದ್ರತೀರ್ಥ, ಅಂಬಾತೀರ್ಥ, ಕೋಟಿತೀರ್ಥ, ನಾಗತೀರ್ಥಗಳಲ್ಲಿ ತೀರ್ಥ ಸ್ನಾನ ಮಾಡಿ ಭಕ್ತರು ದೇವಸ್ಥಾನಕ್ಕೆ ತೆರಳಿದರು.
ದೇವಾಲಯದಲ್ಲಿ ದಿನವಿಡೀ ಪೂಜೆ, ಉಪವಾಸ, ರುದ್ರಪಠಣ, ಶಿವಸ್ತುತಿಯೊಂದಿಗೆ ಜಾಗರಣೆ ನಡೆಯಿತು. ಹಗಲು-ರಾತ್ರಿ ದೇವಸ್ಥಾನ ತೆರೆದಿದ್ದು, ಅಭಿಷೇಕ ಸೇವೆ, ಶತರುದ್ರಾಭಿಷೇಕ, ಏಕವಾರುರುದ್ರಾಭಿಷೇಕ, ರಂಗಪೂಜೆಗಳು ನೆರವೇರಿದವು.
ತಾಲೂಕಿನ ನೂರಾರು ಭಕ್ತರು ದೇವಸ್ಥಾನದಲ್ಲಿ ತೀರ್ಥಸ್ನಾನ ಮಾಡಿ ಬಿಲ್ವಪತ್ರೆ ಅರ್ಪಿಸಿ, ಕಷ್ಟ ಕಾಲಕ್ಕೆ ಹೇಳಿದ ಹರಕೆ ತೀರಿಸಿಕೊಂಡರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ ಮಹಿಳಾ ತಂಡದವರಿಂದ ಭಜನೆ ಮತ್ತು ಕಲಾ ಸಿಂಚನ ಮಹಿಳಾ ತಂಡದಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು.
ಇಲ್ಲಿಯ ಕುದುರೆಮುಖದ ವೇದವೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಶಿವರಾತ್ರಿ ಆಚರಿಸಲಾಯಿತು. ದೇವರಿಗೆ ಶಾಲ್ಯನ್ನ ಅಲಂಕಾರ ಸೇವೆ, ಹೂವಿನ ಪೂಜೆ, ಮಹಾನ್ಯಾಸಪೂರ್ವಕ ಏಕಾದಶ ರುದ್ರಾಭಿಷೇಕ, ಏಕವಾರರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ರುದ್ರತ್ರಿಷತಿ ಪೂಜೆಗಳು ನೆರವೇರಿದವು. ಕುದುರೆಮುಖ, ಜಾಂಬ್ಲೆ, ನೆಲ್ಲಿಬೀಡು, ಸಂಸೆ ಮುಂತಾದ ಭಾಗಗಳಿಂದ ನೂರಾರು ಭಕ್ತರು ಆಗಮಿಸಿ ಪೂಜೆ ಸಲ್ಲಿಸಿದರು.
ಸಂಸೆ ಶ್ರೀ ಎಡಮುರೇಶ್ವರಸ್ವಾಮಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ವಿಶೇಷ ಧಾರ್ಮಿಕ ಕಾರ್ಯಕ್ರಗಳು ನಡೆದವು. ಶ್ರೀ ಎಡಮುರೇಶ್ವರಸ್ವಾಮಿಗೆ ಬೆಳಗ್ಗೆ ಪುಣ್ಯಾಹವಾಚನ, ಕಲಾಸಾನ್ನಿಧ್ಯ ಹೋಮ, ಕಲಶಾಭಿಷೇಕ, ಮಹಾಪೂಜೆ, ಮಂಗಳಾರತಿ ನಡೆಯಿತು. ರಾತ್ರಿ ಶ್ರೀಸ್ವಾಮಿಗೆ ರುದ್ರಾಭಿಷೇಕ, ರಂಗಪೂಜೆ, ದೀಪಾರಾಧನೆ ನಡೆಯಿತು.