ಕಳಸದಲ್ಲಿ ದತ್ತಮಾಲಾ ಅಭಿಯಾನದ ಸಂಕೀರ್ತನಾ ಯಾತ್ರೆ ನಡೆಯಿತು.  
ಜಿಲ್ಲೆ

ಕಳಸ ಕಲಶೇಶ್ವರ ದೇಗುಲದ ಭೂಮಿ ಉಳಿಸಿಕೊಳ್ಳಿ

ಎಸ್.ಎನ್.ರವೀಂದ್ರ

ಕಳಸ: ಕಳಸ ಕಲಶೇಶ್ವರ ದೇವಸ್ಥಾನದ ಭೂಮಿಯನ್ನು ಈಗಲೇ ಉಳಿಸಿಕೊಳ್ಳಿ. ಏಕೆಂದರೆ ಮುಂದೊಂದು ದಿನ ಅದೂ ಕೂಡ ವಕ್ಫ್ ಭೂಮಿ ಆಗಬಹುದು ಎಂದು ಮಂಗಳೂರು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖಾರಾನಂದ ಸ್ವಾಮೀಜಿ ಹೇಳಿದರು.

ವಿಹಿಂಪ, ಬಜರಂಗದಳ ಕಳಸ ಪ್ರಖಂಡದಿಂದ ಬುಧವಾರ ನಡೆದ ದತ್ತಮಾಲಾ ಅಭಿಯಾನದ ಸಂಕೀರ್ತನಾ ಯಾತ್ರೆಯ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳಸ ಪವಿತ್ರ ಕ್ಷೇತ್ರ. ಇಲ್ಲಿ ಧಾರ್ಮಿಕ ಕ್ಷೇತ್ರಗಳು ಸಾಕಷ್ಟು ಇವೆ. ಇವುಗಳು ಅಪವಿತ್ರ ಆಗದ ರೀತಿಯಲ್ಲಿ ನೋಡಿಕೊಳ್ಳಬೇಕಾಗಿದೆ. ಮತ ಓಲೈಕೆ ರಾಜಕಾರಣದಿಂದ ಹಿಂದುಗಳನ್ನು ವಿಭಜಿಸಲಾಗುತ್ತಿದೆ. ಹಿಂದುಗಳು ಹಿಂದು ರಾಷ್ಟ್ರದಲ್ಲಿ ಬದುಕಲು ಕಷ್ಟಪಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಈಗ ನಡೆಯುತ್ತಿರುವ ಅಧಿವೇಶನದಲ್ಲಿ ದತ್ತಪೀಠ ಇನಾಂ ಭೂಮಿ ಅಥವಾ ವಕ್ಫ್ ಭೂಮಿ ಎಂಬ ಕರಾವು ಪಾಸ್ ಮಾಡಬಹುದು. ನಾವು ಜಾಗೃತರಾಗಬೇಕು. ದತ್ತ ಪೀಠದಲ್ಲಿ ಭವ್ಯ ಮಂದಿರವಾಗುವವರಗೂ ನಾವು ವಿರಮಿಸಬಾರದು ಎಂದು ಹೇಳಿದರು.

ಕರ್ನಾಟಕ ದಕ್ಷಿಣ ಪ್ರಾಂತ ದುರ್ಗಾವಾಹಿನಿ ಸಂಯೋಜಕಿ ಸುರೇಖಾ ರಾಜ್ ಮಾತನಾಡಿ, ಹಿಂದುಗಳು ನಾನಾ ಜಾತಿಗಳಾಗಿ ಛಿದ್ರವಾಗಿ ಹೋಗಿದ್ದೇವೆ. ಜಾತಿ ಮನೆಯ ಒಳಗಡೆ ಇರಬೇಕೇ ಹೊರತು ಮನೆಯ ಹೊರಗೆ ನಾವೆಲ್ಲರೂ ಹಿಂದುಗಳಾಗಿ ಇರೋಣ. ದತ್ತಪೀಠ ಪ್ರವಾಸಿ ತಾಣ ಅಲ್ಲ. ಅದು ಹಿಂದುಗಳ ಧಾರ್ಮಿಕ ಶ್ರದ್ಧಾಕೇಂದ್ರ. ದತ್ತಪೀಠವನ್ನು ಸಂಪೂರ್ಣವಾಗಿ ಹಿಂದುಗಳಿಗೆ ಬಿಟ್ಟುಕೊಡಬೇಕು. ಲವ್ ಜಿಹಾದ್, ಗೋಹತ್ಯೆ ಮೂಲಕ ಹಿಂದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಕೆಲಸಗಳು ಆಗುತ್ತಿದೆ ಎಂದರು.

ಕಳಸ ವೆಂಕಟರಮಣ ದೇವಸ್ಥಾನದಿಂದ ಕಲಶೇಶ್ವರ ದೇವಸ್ಥಾನ, ದುರ್ಗಾ ಮಂಟಪದವರೆಗೆ ಸಂಕೀರ್ತನಾ ಯಾತ್ರೆ ನಡೆಯಿತು. ಮೆರವಣಿಗೆಯುದ್ದಕ್ಕೂ ವಿವಿಧ ಸ್ತಬ್ಧ ಚಿತ್ರಗಳು, ನಾಸಿಕ್ ಡೋಲ್, ಭಜನಾ ತಂಡಗಳು ಮೆರವಣಿಗೆಗೆ ಮೆರುಗು ನೀಡಿದವು.

ವಿಹಿಂಪ ಕಳಸ ಪ್ರಖಂಡದ ಅಧ್ಯಕ್ಷ ಬಾಲಕೃಷ್ಣ ಪ್ರಭು, ಬಜರಂಗದಳ ಜಿಲ್ಲಾ ಸಂಯೋಜಕ್ ಅಜಿತ್ ಕುಲಾಲ್, ಜಿಲ್ಲಾ ಧರ್ಮಪ್ರಸಾರ್ ಪ್ರಮುಖ್ ಜಗದೀಶ್ ಭಟ್, ಕಾರ್ಯದರ್ಶಿ ಸಂತೋಷ್ ಮೂಲ್ಯ, ಬಜರಂಗದಳ ಕಳಸ ಪ್ರಖಂಡ ಸಂಯೋಜಕ್ ಸುಜಿಲ್ ಬೋನಡ್ಕ, ಮಾತೃಶಕ್ತಿ ಸಂಯೋಜಕಿ ಮಾಲತಿ ರಾವ್, ದುರ್ಗಾವಾಹಿನಿ ಸಂಯೋಜಕಿ ಮೈನಾ ಕುಲಾಲ್ ಇದ್ದರು.