ಜಿಲ್ಲೆ

ಕಳವು ಆರೋಪಿಗಳ ಬಂಧನ, 23.5 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಜಪ್ತಿ, ವಿಶೇಷ ತಂಡಕ್ಕೆ ನಗದು ಬಹುಮಾನ

ನೆಲಮಂಗಲ: ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಾಡಹಗಲೇ ನಡೆದಿದ್ದ ಮನೆಗಳವು ಪ್ರಕರಣ ಬೇಧಿಸಿರುವ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು 23.5 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿದ್ದಾರೆ. ಮಂಡ್ಯ ಜಿಲ್ಲೆ ಸೋಮನಹಳ್ಳಿ ನಿವಾಸಿ ವಿಶ್ವನಾಥ (45) ತಾಲೂಕಿನ ಧನೋಜಿಪಾಳ್ಯ ನಿವಾಸಿ ಪಿ.ಹನುಮಂತರಾಜು (35) ಬಂಧಿತರು.

ಧನೋಜಿ ಪಾಳ್ಯದ ಸಂಬಂಧಿಕರ ಮನೆಯಲ್ಲಿ ಚಿನ್ನಾಭರಣ ಕಳವು ಮಾಡಿದ್ದ ಪಿ.ಹನುಮಂತರಾಜು ಬೆಂಗಳೂರು ಜಾಲಹಳ್ಳಿ ಕ್ರಾಸ್‌ನ ಚಿನ್ನದ ಅಂಗಡಿಯಲ್ಲಿ ಗಿರವಿ ಇಟ್ಟಿದ್ದ ಎನ್ನಲಾಗಿದೆ. ಆರೋಪಿ ಮಾಹಿತಿ ಹಿನ್ನಲೆ 4.5 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.

ದಾಧಾಪೀರ್ ಲೇಔಟ್ ನಿವಾಸಿ ಬಿ.ಸಮೀರ್ ಎಂಬುವವರ ಮನೆಯಲ್ಲಿ ಆರೋಪಿ ವಿಶ್ವನಾಥ್ 19 ಲಕ್ಷ ರೂ.ಮೌಲ್ಯದ ಚಿನ್ನಾಭರಣ ದೋಚಿದ್ದ. ಪ್ರಕರಣ ಬೆನ್ನಟ್ಟಿದ್ದ ಪೊಲೀಸರು ಅರೋಪಿಗಳನ್ನು ಬಂಧಿಸಿ ಚಿನ್ನಾಭರಣ ಜಪ್ತಿ ಮಾಡಿದ್ದಾರೆ ಎಂದು ಶುಕ್ರವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಗ್ರಾಮಾಂತರ ಜಿಲ್ಲಾ ಅಪರ ಪೊಲೀಸ್ ವರಿಷ್ಠಾಧಿಕಾರಿ ಸಜೀತ್ ತಿಳಿಸಿದರು.

ಡಿವೈಎಸ್‌ಪಿ ಮೋಹನ್‌ಕುಮಾರ್, ವೃತ್ತ ನಿರೀಕ್ಷಕ ಶಿವಣ್ಣ, ಎಸ್‌ಐ ಅಂಜನ್‌ಕುಮಾರ್, ಕೃಷ್ಣಕುಮಾರ್ ನಗರ ಠಾಣೆ ಎಸ್‌ಐ ಡಿ.ಆರ್.ಮಂಜುನಾಥ ಇದ್ದರು.

ವಿಶೇಷ ತಂಡಕ್ಕೆ ನಗದು ಬಹುಮಾನ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ.ಡಿ.ಚೆನ್ನಣ್ಣನವರ್, ಡಿವೈಎಸ್‌ಪಿ ಮೋಹನ್‌ಕುಮಾರ್ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಶಿವಣ್ಣ, ಎಸ್‌ಐ ಡಿ.ಮಂಜುನಾಥ್ ಹಿರಿಯ ಪೇದೆ ಬಸವರಾಜು, ಸಿಬ್ಬಂದಿ ಹರೀಶ್, ಮುರುಳಿ ಮಹಿಳಾ ಪೇದೆ ಸವಿತಾ, ಶ್ರೀನಿವಾಸ್ ಮಂಜುನಾಥ್, ನರೇಶ್‌ಕುಮಾರ್, ಕೇಶವಾನಂದ, ಸಿದ್ದರಾಮಯ್ಯ ಹಿರೇಮಠ್ ಸಿಬ್ಬಂದಿಗಳನ್ನೊಳಗೊಂಡ ವಿಶೇಷ ತಂಡಕ್ಕೆ ನಗದು ಬಹುಮಾನ ನೀಡಲಾಯಿತು.