ಜಿಲ್ಲೆ

ಪೊಲೀಸರ ಭರ್ಜರಿ ಭೇಟೆ: ಕಳ್ಳನ ಬಂಧನ, 17 ಲಕ್ಷ ರೂ. ಮಾಲು ವಶ

ಹಾಸನ: ತಾಲೂಕು ಶಾಂತಿಗ್ರಾಮ ವೃತ್ತದ ಪೊಲೀಸರು ಭರ್ಜರಿ ಭೇಟೆ ಆಡಿದ್ದಾರೆ. ಕೊಡಗು ಜಿಲ್ಲೆ ಮಡಿಕೇರಿ ನಗರದ ನಿವಾಸಿ ಎಂ.ಎನ್. ಮಹಮ್ಮದ್ ಇಮ್ರಾನ್ ಎಂಬ ಕಳವು ಆರೋಪಿಯನ್ನು ಬಂಧಿಸಿ ಆತನಿಂದ 17 ಲಕ್ಷ ರೂ. ಮೌಲ್ಯದ ಚಿನ್ನ ಹಾಗೂ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.


ತಾಲೂಕು ದುದ್ದ ಪಟ್ಟಣದಲ್ಲಿ ಕಳೆದ ಏಪ್ರಿಲ್ 15 ರಂದು ಡಿ.ಎಸ್. ಲಕ್ಷ್ಮೀಶ ಎಂಬುವರಿಗೆ ಸೇರಿದ ಕೊಳವೆಬಾವಿ ಕೊರೆಯುವ ರಿಗ್ ಮತ್ತು ಲಾರಿಗಳಲ್ಲಿದ್ದ ಸುಮಾರು 2 ಲಕ್ಷ ರೂ. ಬೆಲೆ ಬಾಳುವ 14 ಬಿಟ್‌ಗಳು ಕಳುವಾಗಿದ್ದವು. ಈ ಸಂಬಂಧ ಶಾಂತಿಗ್ರಾಮ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರು. ಈ ಪ್ರಕರಣವನ್ನು ಶೀಘ್ರವಾಗಿ ಪತ್ತೆಹಚ್ಚಲು ಎಸ್‌ಪಿ ಹರಿರಾಮ್ ಶಂಕರ್ ಅವರು ಎಎಸ್‌ಪಿ ತಮ್ಮಯ್ಯ ಮಾರ್ಗದಶನದಲ್ಲಿ ಡಿವೈಎಸ್‌ಪಿ ಉದಯಭಾಸ್ಕರ್ ನೇತೃತ್ವದ ತಂಡ ರಚಿಸಿದ್ದರು.


ಈ ತಂಡವು ನಗರದ ಡೇರಿ ವೃತ್ತದಲ್ಲಿ ಆ.25 ರಂದು ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಿದಾಗ ಕೊಳವೆ ಬಾವಿ ಕೊರೆಯುವ ರಿಗ್‌ನ ಬಿಟ್ ಕಳ್ಳತನದ ಜೊತೆಗೆ ಇತರ ಕಳವು ಪ್ರಕರಣಗಳು ಬೆಳಕಿಗೆ ಬಂದಿವೆ. ಬಂಧಿತ ಆರೋಪಿ ಮಹಮ್ಮದ್ ಇಮ್ರಾನ್‌ನಿಂದ ಒಟ್ಟು 17 ಲಕ್ಷ ರೂ. ಬೆಲೆಯ 265 ಗ್ರಾಂ ಚಿನ್ನಾಭರಣಗಳು, ಕ್ಯಾಮರಾ, ಲಾಪ್‌ಟಾಪ್, ಹಾಗೂ 14 ಕೊಳವೆಬಾವಿ ರಿಗ್ ಬಿಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.


ಆರೋಪಿ ಇಮ್ರನ್ ಬಸ್‌ಗಳಲ್ಲಿ ಪ್ರಯಾಣಿಕರು ಇರಿಸುತ್ತಿದ್ದ ಬ್ಯಾಗ್‌ಗಳನ್ನೇ ಟಾರ್ಗೆಟ್ ಮಾಡಿ ಕಳವು ಮಾಡುತ್ತಿದ್ದ. ಈತನ ವಿರುದ್ಧ ಮೈಸೂರು ದೇವರಾಜ ಪೊಲೀಸ್ ಠಾಣೆ ಸೇರಿದಂತೆ ಆರು ಠಾಣೆಗಳಲ್ಲಿ ವಿವಿಧ ಪ್ರಕರಣಗಳು ದಾಖಲಾಗಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.