ಕೂಡ್ಲಿಗಿ: ರೈತರಿಗೆ ಯಾವುದೇ ಕಾರಣಕ್ಕೂ ಕಳಪೆ ಬಿತ್ತನೆಬೀಜ ವಿತರಣೆ ಮಾಡಬಾರದು. ಗುಣಮಟ್ಟದ ಬಿತ್ತನೆ ಬೀಜ ಮಾರಾಟಕ್ಕೆ ಆದ್ಯತೆ ನೀಡಬೇಕೆಂದು ಅಧಿಕಾರಿಗಳಿಗೆ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಸೂಚಿಸಿದರು.
ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಸರ್ಕಾರದ ಸಹಾಯಧನ ಯೋಜನೆಯಡಿ ರೈತರಿಗೆ ಮುಂಗಾರು ಹಂಗಾಮಿಗೆ ಬಿತ್ತನೆ ಬೀಜ ಹಾಗೂ ಕೃಷಿ ಪರಿಕರಗಳನ್ನು ವಿತರಣೆ ಮಾಡಿ ಬುಧವಾರ ಮಾತನಾಡಿದರು. ತಾಲೂಕಿನಲ್ಲಿ ಮುಂಗಾರು ಪೂರ್ವ ಉತ್ತಮ ಮಳೆಯಾಗಿದ್ದು, ಬಿತ್ತನೆಗೆ ಸಕಾಲವಾಗಿದೆ. ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಹಾಗೂ ಕೃಷಿ ಪರಿಕರಗಳನ್ನು ಕೃಷಿ ಇಲಾಖೆಯ ಮೂಲಕ ಸರ್ಕಾರ ನೀಡುತ್ತಿದೆ. ರೈತರಿಗೆ ನೀಡುವ ಬಿತ್ತನೆ ಬೀಜಗಳು ಯಾವುದೇ ಕಾರಣಕ್ಕೂ ಕಳಪೆಯಾಗಿರಬಾರದು. ರೈತರು ಸಹ ತಜ್ಞರು ಶಿಫಾರಸ್ಸು ಮಾಡಿದ ಬೀಜಗಳನ್ನೇ ಬಿತ್ತನೆ ಮಾಡಬೇಕು ಎಂದು ಸಲಹೆ ನೀಡಿದರು.
ಕೃಷಿ ಇಲಾಖೆ ಸೌಲಭ್ಯಗಳನ್ನು ಬಳಸಿಕೊಂಡು, ಕೃಷಿ ಅಧಿಕಾರಿಗಳ ಸಲಹೆ ಪಾಲಿಸುವ ಮೂಲಕ ಉತ್ತಮ ಬೆಳೆ ಬೆಳೆಯಬೇಕು. ರೈತರು ಬಿತ್ತನೆಯಲ್ಲಿ ತೊಡಗಿದ್ದು, ಅಧಿಕಾರಿಗಳು ರಸಗೊಬ್ಬರ ಹಾಗೂ ಬಿತ್ತನೆಬೀಜಗಳ ದಾಸ್ತಾನು ಸಮರ್ಪಕವಾಗಿ ಮಾಡಿ ಪೂರೈಸಬೇಕು. ಕಾಳಸಂತೆಯಲ್ಲಿ ಬಿತ್ತನೆಬೀಜ ಹಾಗೂ ರಸಗೊಬ್ಬರವನ್ನು ಅಧಿಕ ಧರದಲ್ಲಿ ಮಾರಾಟ ಮಾಡುವುದನ್ನು ತಪ್ಪಿಸಬೇಕೆಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ತಾಕೀತು ಮಾಡಿದರು.
ಕೃಷಿಕ ಸಮಾಜದ ಅಧ್ಯಕ್ಷ ಸಿದ್ಧನಗೌಡ ಶಾಂತನಹಳ್ಳಿ, ಉಪಾಧ್ಯಕ್ಷ ಜಯಣ್ಣ, ಎರಿಸ್ವಾಮಿ, ಬ್ಯಾಳಿ ವಿಜಯಕುಮಾರ್ ಗೌಡ, ಕೃಷಿ ಇಲಾಖೆ ಸಿಬ್ಬಂದಿ ಇದ್ದರು.