ಜಿಲ್ಲೆ

ಕಳಪೆ ತೊಗರಿ ಬೀಜ ವಿತರಣೆಗೆ ಖಂಡನೆ

ತೆಲಸಂಗ: ಕಳಪೆ ತೊಗರಿ ಬಿತ್ತನೆ ಬೀಜ ವಿತರಿಸಿದ ಕೃಷಿ ಅಧಿಕಾರಿ ಹಾಗೂ ಕಂಪನಿಗಳ ವಿರುದ್ಧ ಕ್ರಮ ಕೈಗೊಂಡು, ಹಾನಿಗೊಳಗಾದ ರೈತರಿಗೆ ಸೂಕ್ತ ಪರಿಹಾರ ವಿತರಿಸಬೇಕು ಎಂದು ಹಾನಿಯಾದ ಬೆಳೆ ಪ್ರದರ್ಶಿಸಿ ಗ್ರಾಮದ ಜೇವರ್ಗಿ-ಸಂಕೇಶ್ವರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ರೈತರು ಪ್ರತಿಭಟನೆ ನಡೆಸಿದರು.

ಕೃಷಿ ಇಲಾಖೆಯಿಂದ ವಿತರಿಸಿದ ಜಿಆರ್‌ಜಿ 152 ಹಾಗೂ ಜಿಆರ್‌ಜಿ 811 ಕಳಪೆ ತೊಗರಿ ಬೀಜದಿಂದ ತೊಗರಿ ಸಸಿ ಕಾಯಿ ಬಿಡುತ್ತಿಲ್ಲ. ಇದರಿಂದ ರೈತರು ಆತಂಕಕ್ಕೀಡಾಗಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಾಗುವ ಅನಾಹುತಕ್ಕೆ ಅಧಿಕಾರಿಗಳು ಹಾಗೂ ಸರ್ಕಾರವೇ ನೇರ ಹೊಣೆ ಎಂದರು.

ಕೃಷಿ ಇಲಾಖೆ ಬಿತ್ತನೆ ಬೀಜ ತೆಗೆದುಕೊಳ್ಳುವ ಸಂದರ್ಭದಲ್ಲಿ ತೊಗರಿ ಗುಣಮಟ್ಟ ಪರೀಕ್ಷಿಸಬೇಕಿತ್ತು. ಬೀಜ ಬಿತ್ತನೆಗೆ ಅನುಸರಿಸಬೇಕಾದ ಕ್ರಮಗಳೇನು? ಎಂಬುವುದರ ಬಗ್ಗೆ ಇಲಾಖೆ ಅಧಿಕಾರಿಗಳು ಮಾಹಿತಿ ಪಡೆದುಕೊಂಡು ಬಳಿಕ ರೈತರಿಗೆ ಮಾಹಿತಿ ನೀಡಬೇಕು. ಇದನ್ನು ಸರಿಯಾಗಿ ಮಾಡದ ಅಧಿಕಾರಿಗಳು ಏನೇನೋ ಹೇಳಿ ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ. ಇದರ ವಿರುದ್ಧ ತನಿಖೆ ಆಗಬೇಕು ಎಂದು ಆಕ್ರೋಶ ಹೊರಹಾಕಿದರು.

ಡಿವೈಎಸ್‌ಪಿ ಪ್ರಶಾಂತ ಮುನ್ನೋಳ್ಳಿ, ಸಿಪಿಐ ಸಂತೋಷ ಹಳ್ಳೂರ, ಪಿಎಸ್‌ಐ ಚಂದ್ರು ಸಾಗನೂರ, ಸಹಾಯಕ ತಾಲೂಕು ಕೃಷಿ ನಿರ್ದೇಶಕ ನಿಂಗಣ್ಣ ಬಿರಾದಾರ, ಉಪತಹಸೀಲ್ದಾರ್ ಮಧು ಬಿರಾದಾರ, ಎಂ.ಎಸ್.ಯತ್ನಟ್ಟಿ ಪ್ರತಿಭಟನಾಕಾರರ ಮನವೊಲಿಸಲು ಮುಂದಾದರೂ 2 ಗಂಟೆ ಬಳಿಕ ಪ್ರತಿಭಟನೆ ಹಿಂಪಡೆದರು. ರೈತ ಸಂಘದ ಜಿಲ್ಲಾ ಗೌರವ ಅಧ್ಯಕ್ಷ ಪ್ರಕಾಶ ಪೂಜಾರಿ, ತಾಲೂಕಾಧ್ಯಕ್ಷ ಎಂ.ಸಿ.ತಾಂಬೂಳಿ, ಗ್ರಾಪಂ ಅಧ್ಯಕ್ಷ ಸುಭಾಷ ಖೊಬ್ರಿ ರೈತ ಸ0ಘಟನೆ ಸದಸ್ಯರು ಇದ್ದರು.