ಜಿಲ್ಲೆ

ಕಳಪೆ ಕಾಮಗಾರಿಗೆ ತೇಪೆ ಹಚ್ಚಿದ ಗುತ್ತಿಗೆದಾರ

ಕೆಂಭಾವಿ: ಕೆಲ ದಿನಗಳ ಹಿಂದಷ್ಟೇ ನಿರ್ವಹಿಸಿದ್ದ ಕಳಪೆ ಕಾಮಗಾರಿಗೆ ಮತ್ತೊಮ್ಮೆ ತೇಪೆ ಸವರುವ (ಡಾಂಬರ ಹಾಕಿ) ಮೂಲಕ ಅಧಿಕಾರಿಗಳು ಸೈ ಎನಿಸಿಕೊಂಡ ಘಟನೆ ಬುಧವಾರ ಜರುಗಿತು.

ಪಟ್ಟಣದ ಯುಕೆಪಿ ಕ್ಯಾಂಪ್ ಬಡಾವಣೆಯ ಮುಖ್ಯ ರಸ್ತೆಯನ್ನು ಕೆಲ ದಿನಗಳ ಹಿಂದೆ ಸುಮಾರು ೨೨ ಲಕ್ಷ ರೂ. ವೆಚ್ಚದಲ್ಲಿ ಡಾಂಬರೀಕರಣ ರಸ್ತೆ ಮಾಡಲಾಗಿತ್ತು. ಸುಮಾರು ವರ್ಷಗಳಿಂದ ಅಭಿವೃದ್ಧಿಯೇ ಕಾಣದ ಈ ಬಡಾವಣೆಗೆ ನೀರಾವರಿ ಇಲಾಖೆ ಮನಸ್ಸು ಮಾಡಿ ರಸ್ತೆ ಸೇರಿ ಇನ್ನಿತರೆ ಮೂಲಭೂತ ಸೌಲಭ್ಯಗಳಿಗೆ ವಿಶೇಷ ಅನುದಾನ ಬಿಡುಗಡೆಗೊಳಿಸಿದೆ.

ನೀರಾವರಿ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿ ಈ ಇಲಾಖೆಯಲ್ಲಿ ಹಲವು ಪರಿಣಿತ ತಜ್ಞರಿಗೆ ಆಶ್ರಯ ನೀಡಿದ ಮನೆಗಳು ಇದೇ ಕ್ಯಾಂಪ್‌ನಲ್ಲಿದೆ. ಇದೀಗ ಇದರ ದುರಸ್ತಿಗೆ ಕ್ರಮ ಕೈಗೊಂಡಿರುವ ಇಲಾಖೆ ಮುಖ್ಯವಾಗಿ ಹದಗೆಟ್ಟಿರುವ ರಸ್ತೆಯನ್ನು ಅಭಿವೃದ್ಧಿ ಪಡಿಸುವತ್ತ ನಿಗಾ ವಹಿಸಿದೆ.

ನಿತ್ಯ ಜನರು ಸಂಚಾರ ಮಾಡುವ ಮುಖ್ಯ ರಸ್ತೆಯನ್ನು ಕಳೆದ ತಿಂಗಳಷ್ಟೇ ಇಲಾಖೆ ಗುತ್ತಿಗೆದಾರರ ಮೂಲಕ ಕಾಮಗಾರಿ ನಿರ್ವಹಿಸಿದ್ದರು. ಆದರೆ ಕಾಮಗಾರಿ ಮಾತ್ರ ತೀವ್ರ ಕಳಪೆಯಿಂದ ಕೂಡಿ ಕೇವಲ ಕೈಗಳಿಂದ ಚಿಮ್ಮಿದರೆ ರಸ್ತೆ ಮೇಲೆ ಹಾಕಿದ್ದ ಡಾಂಬರ ಸಂಪೂರ್ಣ ಕಿತ್ತು ಬರುವ ಮೂಲಕ ಕಳಪೆ ಕಾಮಗಾರಿಗೆ ಹಿಡಿದ ಕೈಗನ್ನಡಿಯಾಗಿತ್ತು.

ಈ ಕಳಪೆ ಕಾಮಗಾರಿ ಬಗ್ಗೆ ಸ್ಥಳೀಯ ಕರವೇ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ ಪಟ್ಟಣಕ್ಕೆ ಭೇಟಿ ನೀಡಿದ್ದ ಕೆಬಿಜೆಎನ್‌ಎಲ್ ಎಂ.ಡಿ. ಕೆಪಿ ಮೋಹನ ಅವರಿಗೂ ದೂರು ಸಲ್ಲಿಸಿದ್ದರು. ದೂರಿನ ಆಧಾರದ ಮೇಲೆ ಮತ್ತೆ ರಸ್ತೆ ರಿಪೇರಿಗೆ ಇಳಿದಿರುವ ಇಲಾಖೆ ಗುತ್ತಿಗೆದಾರರ ಮೂಲಕ ರಸ್ತೆಯ ಕೆಲವು ಭಾಗಗಳಲ್ಲಿ ಮಾತ್ರ ತೇಪೆ ಹಚ್ಚುವ ಮೂಲಕ ರಸ್ತೆಯನ್ನು ಮರು ನಿರ್ಮಾಣ ಮಾಡಲಾಗಿದೆ ಎಂಬ ಸಮಾಧಾನದ ಮಾತು ಜನತೆಗೆ ನೀಡುತ್ತಿದೆ. ಈ ಕಾಮಗಾರಿ ಹಿಂದೆ ಅನೇಕ ಕಾಣದ ಕೈಗಳು ಕೆಲಸ ಮಾಡುತ್ತಿದ್ದು ಉತ್ತಮ ರಸ್ತೆ ನಿರ್ಮಿಸಿ ಜನತೆಗೆ ಅನುಕೂಲ ಕಲ್ಪಿಸಬೇಕೆಂಬುದೆ ಇಲ್ಲಿನ ನಿವಾಸಿಗಳ ಆಗ್ರಹವಾಗಿದೆ.

ಈ ರಸ್ತೆ ಕಾಮಗಾರಿಯಲ್ಲಿ ಗುತ್ತಿಗೆದಾರ ಜತೆ ಸ್ಥಳೀಯ ಅಧಿಕಾರಿಗಳು ಶಾಮೀಲಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಈ ಬಗ್ಗೆ ಸ್ಥಳೀಯರಿಂದ ಮೇಲಧಿಕಾರಿಗಳಿಗೆ ದೂರು ಸಹ ಸಲ್ಲಿಕೆಯಾಗಿದೆ. ಪರ್ಸೆಂಟೇಜ್ ಆಧಾರದ ಮೇಲೆ ಕೆಲಸ ನಿರ್ವಹಿಸಲಾಗುತ್ತಿದೆ ಎಂಬ ಮಾತು ಹಲವರಿಂದ ಕೇಳಿ ಬಂದರೆ ಕಾಮಗಾರಿಯಲ್ಲಿ ಅರ್ಧಪಾಲು ಅಧಿಕಾರಿಗಳಿಗಿದೆ ಎಂಬ ಮಾತು ಹಲವರಿಂದ ಕೇಳಿ ಬರುತ್ತಿವೆ