ಹಾಸನ: ಜಲಸಂಪನ್ಮೂಲ ಇಲಾಖೆಯಲ್ಲಿ 2013 ರಿಂದ 2024 ರವರಗೆ ನಡೆದಿರುವ ಅಭಿವೃದ್ಧಿ ಕಾಮಗಾರಿಗಳಲ್ಲಿ ಸಾವಿರಾರು ಕೋಟಿ ರೂಪಾಯಿ ಕಾಮಗಾರಿ ಕಳಪೆಯಾಗಿದ್ದು, ಇದರ ಬಗ್ಗೆ ತನಿಖೆ ನಡೆಸಲು ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ ರಚನೆ ಮಾಡಬೇಕು ಎಂದು ಬಿಜೆಪಿ ಮುಖಂಡ ಜಿ. ದೇವರಾಜೇಗೌಡ ಆಗ್ರಹಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಹಿಂದಿನ ಸರ್ಕಾರದ ಕೆಲ ಸಚಿವರು ಸರ್ಕಾರದ ಬೊಕ್ಕಸವನ್ನು ಲೂಟಿ ಮಾಡಿದ್ದಾರೆ ಎಂದು ತಮ್ಮ ಸಚಿವ ಸಂಪುಟದ ಸಹದ್ಯೋಗಿಗಳೊಂದಿಗೆ ಕೆಲವು ಮಹತ್ತರವಾದ ತೀರ್ಮಾನಗಳನ್ನು ಕೈಗೊಂಡಿದ್ದೀರಾ. ಈ ನಿಮ್ಮ ನೆಡೆಯನ್ನು ತುಂಬು ಹೃದಯದಿಂದ ಸ್ವಾಗತಿಸುತ್ತೇವೆ. ತಮಗೆ ನಮ್ಮ ನಾಡಿನ ಜನತೆಯ ಮೇಲೆ ಇರುವ ಕಾಳಜಿ ಹೃದಯಸ್ಪರ್ಶಿ ಕಾರ್ಯ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾರ್ಮಿಕವಾಗಿ ನುಡಿದರು.
ಅದೇ ರೀತಿಯಲ್ಲಿ 2013 ರಿಂದ 2024 ರವರಗೆ ಜಲಸಂಪನ್ಮೂಲ ಇಲಾಖೆಯಲ್ಲಿನ ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಯಲ್ಲಿ ಬರುವ ಹೇಮಾವತಿ ಎಡದಂಡ ಹಾಗೂ ಬಲದಂಡೆ ನಾಲೆ ಆಧುನೀಕರಣ ಕಾಮಗಾರಿಯ ಸುಮಾರು 2300 ಕೋಟಿ ರೂ. ಮತ್ತು ಹಾಸನ ಜಿಲ್ಲೆಯಲ್ಲಿ ಇತರೆ ಅಭಿವೃದ್ಧಿ ಕಾಮಗಾರಿಯಲ್ಲಿ ಸುಮಾರು 5600 ಕೋಟಿ ರೂ. ಹಾಗೂ ಇದೇ ಇಲಾಖೆಯಲ್ಲಿನ ವಿಶ್ವೇಶ್ವರಯ್ಯ ಜಲ ನಿಗಮದಲ್ಲಿನ ಎತ್ತಿನಹೊಳೆ ಯೋಜನೆಯ ಕಾಮಗಾರಿಗಳ ಸಾಚಾತನದ ಬಗ್ಗೆ ನಿರ್ಭಯವಾಗಿ ತನಿಖೆಗೆ ಆದೇಶಿಸಿ ಎಂದು ಆಗ್ರಹಿಸಿದರು.
ಕಳಂಕರಹಿತ ಮುಖ್ಯಮಂತ್ರಿಗಳಾದ ತಾವು ಮತ್ತು ತಮ್ಮ ಮಂತ್ರಿ ಮಂಡಲ ಉತ್ತಮ ತೀರ್ಮಾನ ತೆಗೆದುಕೊಂಡು ಒಬ್ಬ ಪ್ರಾಮಾಣಿಕ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿಯನ್ನು ರಚನೆ ಮಾಡಿ ಅವರಿಂದ ವರದಿ ಪಡೆದು ನಂತರ ತಮ್ಮ ಅಧೀನದಲ್ಲಿರುವ ಎಸ್‌ಐಟಿ ತನಿಖಾ ತಂಡ ರಚನೆ ಮಾಡಿ. ಈ ಕಾಮಗಾರಿಗಳಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಹಣ ಲಪಟಾಯಿಸಿರುವವರ ವಿರುದ್ಧ ಶಿಸ್ತು ಕ್ರಮ ಕೈಗೊಂಡು ಈ ನಾಡಿನ ಬೊಕ್ಕಸಕ್ಕೆ ಆಗಿರುವ ನಷ್ಟವನ್ನು ಭರಿಸಬೇಕಾಗಿ ತಮ್ಮಲ್ಲಿ ಮನವಿ ಮಾಡುತ್ತೇವೆ ಎಂದು ವ್ಯಂಗ್ಯವಾಡಿದರು.