ಜಿಲ್ಲೆ

ಕಳಪೆ ಆಹಾರ ಪೂರೈಸುವವರ ವಿರುದ್ಧ ಪ್ರಕರಣ ದಾಖಲಿಸಲು ಸೂಚನೆ

ಮೈಸೂರು: ಆಹಾರಗಳ ಗುಣಮಟ್ಟ ಪರೀಕ್ಷಿಸಿ, ಕಳಪೆ, ಕಲಬೆರಕೆ ಆಗದಂತೆ ಎಚ್ಚರಿಕೆ ವಹಿಸಬೇಕು. ಕಳಪೆ ಆಹಾರ ಪೂರೈಸುವವರ ವಿರುದ್ಧ ಪ್ರಕರಣ ದಾಖಲಿಸಿ, ದಂಡ ವಿಧಿಸಬೇಕು ಎಂದು ಜಿಲ್ಲಾ ಅಂಕಿತ ಅಧಿಕಾರಿಗೆ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ - 2006 ಅನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಕುರಿತು ಶುಕ್ರವಾರ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹೋಟೆಲ್, ಬೇಕರಿಗಳು, ಆಹಾರ ಮಾರಾಟ ಕೇಂದ್ರಗಳಲ್ಲಿ ಕಲಬೆರಕೆ ಮಾಡಿ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವ ಪ್ರಕರಣಗಳು ಕಂಡು ಬರುತ್ತವೆ. ಇವುಗಳನ್ನು ಪತ್ತೆ ಹಚ್ಚಿ ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.
ಜನರ ಆರೋಗ್ಯ ಕಾಪಾಡಬೇಕು. ಕೆಟ್ಟ ಕೊಲೆಸ್ಟ್ರಾಲ್ ಇರುವ ಎಣ್ಣೆಯನ್ನು ಬಳಸುತ್ತಾರೆ. ಇದರಿಂದ ಜನರ ಆರೋಗ್ಯ ಹಾಳಾಗುತ್ತದೆ. ಹೃದಯ ಸಂಬಂಧಿ ಕಾಯಿಲೆಗಳು ಕಂಡುಬರುತ್ತವೆ. ಆಹಾರ ಉತ್ಪಾದನೆಯಲ್ಲಿ ಸ್ವಚ್ಛತೆಯನ್ನು ಕಾಪಾಡುವುದಿಲ್ಲ. ಆರೋಗ್ಯಕ್ಕೆ ತೊಂದರೆ ಉಂಟು ಮಾಡುವ ಬಣ್ಣಗಳನ್ನು ಬೇಕರಿ ಉತ್ಪನ್ನಗಳು, ಸಿಹಿ ತಿಂಡಿಗಳು, ರಸ್ತೆಬದಿ ಮಾರುವ ಜಂಕ್ ಫುಡ್‌ಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಇದನ್ನು ಪರಿಶೀಲಿಸಿ ಇಂಥವರ ಮೇಲೆ ಪ್ರಕರಣಗಳನ್ನು ದಾಖಲಿಸಿ ತಡೆಗಟ್ಟಬೇಕು ಎಂದು ತಿಳಿಸಿದರು.
ಆಹಾರ ಉತ್ಪನ್ನಗಳನ್ನು ತಯಾರಿಸುವ ಸಿಬ್ಬಂದಿ ಸ್ವಚ್ಛತೆ ಕಾಪಾಡಬೇಕು. ಮಾಂಸ ಹಾಗೂ ಚಿಕನ್ ಅಂಗಡಿಯಲ್ಲಿ ಸ್ವಚ್ಛತೆ ಕಾಪಾಡಿಕೊಂಡು, ತ್ಯಾಜ್ಯಗಳನ್ನು ಸರಿಯಾಗಿ ನಿರ್ವಹಣೆ ಮಾಡಬೇಕು. ತರಕಾರಿ ಹಾಗೂ ಹಣ್ಣುಗಳನ್ನು ಹೆಚ್ಚು ಕಾಲ ಕೆಡದಂತೆ ಕಾಪಾಡಲು ವ್ಯಾಕ್ಸ್ ಬಳಸುವ ಕುರಿತು ದೂರುಗಳು ಬಂದಿವೆ. ವ್ಯಾಕ್ಸ್ ಬಳಕೆಯಿಂದ ಆರೋಗ್ಯ ಹಾಳಾಗುತ್ತದೆ. ಆದ್ದರಿಂದ ಇಂತಹ ವ್ಯಾಪಾರ ಕೇಂದ್ರಗಳ ಮೇಲೆ ದಾಳಿ ನಡೆಸಬೇಕು ಎಂದು ಸೂಚಿಸಿದರು.
ಜಿಲ್ಲಾ ಅಂಕಿತ ಅಧಿಕಾರಿ ಡಾ.ಪ್ರಸಾದ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಕೆ. ಹರೀಶ್ ಇತರರು ಇದ್ದರು.