ಮೈಸೂರು: ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಳಪೆ ಗುಣಮಟ್ಟ ಆಹಾರ ಪದಾರ್ಥ ಮತ್ತು ಅವಧಿ ಮೀರಿದ ಆಹಾರ ಪದಾರ್ಥ ಬಳಕೆ ಕಾರಣಕ್ಕೆ ಆಹಾರ ಉದ್ಯಮಿದಾರರು, ತಯಾರಕರಿಗೆ 1.35 ಲಕ್ಷ ರೂ. ದಂಡ ವಿಧಿಸಲಾಗಿದೆ.
ಕಳಪೆ ಗುಣಮಟ್ಟದ ಟೊಮ್ಯಾಟೊ ಸಾಸ್ ತಯಾರಿಸಿದ ಹೆಬ್ಬಾಳ ಕೈಗಾರಿಕೆ ಪ್ರದೇಶದಲ್ಲಿರುವ ಕಮಲ್ ಹಣ್ಣು, ಸಂಸ್ಕರಣೆ, ಪಾನೀಯ ಕಂಪನಿಗೆ 50 ಸಾವಿರ ರೂ. ಮತ್ತು ಇದನ್ನು ಮಾರಾಟ ಮಾಡಿದ ಸಂತೇಪೇಟೆಯ ಅಂಬಿಕಾ ಟ್ರೇಡರ್ಸ್‌ಗೆ 10 ಸಾವಿರ ರೂ. ದಂಡ ವಿಧಿಸಲಾಗಿದೆ.
ಅವಧಿ ಮೀರಿದ ಸ್ಯಾಂಡ್‌ವಿಚ್, ಬ್ರೇಡ್, ಬನ್, ಮಿಲ್ಕಿ ಪನ್ನೀರ್ ಅನ್ನು ಅಡುಗೆಗೆ ಬಳಕೆ ಮಾಡಿದ ಕಾರಣಕ್ಕೆ ಟಿ.ಕೆ. ಬಡಾವಣೆಯ ಜೆ.ಪಿ. ಸ್ಪೇಷಲಿಸ್ಟ್ ಫುಡ್ ಹೋಟೆಲ್‌ಗೆ 25 ಸಾವಿರ ರೂ. ದಂಡ ಹಾಕಲಾಗಿದೆ. ಜತೆಗೆ ಅವಧಿ ಮೀರಿದ ಪಾನೀಯಗಳು, ಸೋಡಾಗಳನ್ನು ಮಾರಾಟ ಮಾಡಿದ್ದಕ್ಕಾಗಿ ಅಕ್ಬರ್ ರಸ್ತೆಯ ವಿಶಾಲ್ ಬಾರ್ ಮತ್ತು ರೆಸ್ಟೋರೆಂಟ್‌ಗೆ 50 ಸಾವಿರ ರೂ. ದಂಡ ವಿಧಿಸಲಾಗಿದೆ.
ಈ ಕುರಿತು ಆಹಾರ ಸುರಕ್ಷತಾಧಿಕಾರಿಗಳಾದ ದ್ರಾಕ್ಷಾಯಣಿ ಎಸ್.ಬಡಿಗೇರಿ, ಸಿ.ರಾಜೇಶ್ ಅವರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದರು.
ಇದನ್ನು ವಿಚಾರಣೆ ಮಾಡಿದ ನ್ಯಾಯ ನಿರ್ಣಯ ಅಧಿಕಾರಿಯೂ ಆಗಿರುವ ಅಪರ ಜಿಲ್ಲಾಧಿಕಾರಿ ಡಾ.ಶಿವರಾಜು ಅವರು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ಕೆ-2006 ಮತ್ತು ನಿಯಮ ನಿಬಂಧನೆಗಳ 2011ರ ರೀತ್ಯಾ ಪ್ರಕರಣಗಳನ್ನು ಪರಿಶೀಲಿಸಿದರು. ಬಳಿಕ ಆಹಾರ ಉದ್ಯಮಿದಾರರ ನಿರ್ಲಕ್ಷೃತೆಗೆ ಕಾನೂನಿನ ಪ್ರಕಾರ ದಂಡ ವಿಧಿಸಿ ಆದೇಶ ಹೊರಡಿಸಲಾಗಿದೆ ಎಂದು ಅಂಕಿತ ಅಧಿಕಾರಿ ಡಾ.ಎಸ್.ಎಲ್.ರವೀಂದ್ರ ತಿಳಿಸಿದ್ದಾರೆ.