ಜಿಲ್ಲೆ

ಕಲ್ಲೇಶ್ವರ ಸ್ವಾಮಿ ಕಾರ್ತಿಕೋತ್ಸವ ಅದ್ದೂರಿ

ಚಿತ್ರದುರ್ಗ: ಜಿಲ್ಲೆಯ ಹಿರೇಎಮ್ಮಿಗನೂರಿನ ಕಲ್ಲೇಶ್ವರ ಸ್ವಾಮಿ, ಆಂಜನೇಯ ಸ್ವಾಮಿಯ ಕಾರ್ತಿಕೋತ್ಸವ, ಹೂವಿನ ಅಡ್ಡಪಲ್ಲಕ್ಕಿ ಉತ್ಸವ ಭಾನುವಾರ ರಾತ್ರಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು.

ಕಾರ್ತಿಕೋತ್ಸವದ ಅಂಗವಾಗಿ ಮುಂಜಾನೆ ರುದ್ರಾಭಿಷೇಕ ಸೇರಿ ವಿಶೇಷ ಪೂಜೆಗಳು ನಡೆದವು. ಸ್ವಾಮಿಯ ಮೂರ್ತಿಗಳನ್ನು, ಅಡ್ಡ ಪಲ್ಲಕ್ಕಿಯನ್ನು ವಿವಿಧ ಪುಷ್ಪಗಳಿಂದ ವಿಶೇಷವಾಗಿ ಅಲಂಕರಿಸಿದ ನಂತರ ವಿದ್ಯುತ್ ದೀಪಾಲಂಕೃತ ಕದಳಿ ಮಂಟಪಕ್ಕೆ ಮೆರವಣಿಗೆ ಮೂಲಕ ಕರೆತರಲಾಯಿತು. ಇದೇ ವೇಳೆ ಭಕ್ತೋತ್ಸಾಹ, ಹಷೋದ್ಗಾರ ಮುಗಿಲುಮುಟ್ಟಿತು.

ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ ಜಿಲ್ಲೆ ಸೇರಿ ಹಿರೇಎಮ್ಮಿಗನೂರು ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಗ್ರಾಮಸ್ಥರು ಕಾರ್ತಿಕೋತ್ಸವದಲ್ಲಿ ಪಾಲ್ಗೊಂಡಿದ್ದರು. ದರ್ಶನ ಪಡೆದು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.

ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿ ಸಹಕರಿಸಿದ್ದರಿಂದಾಗಿ ಕಾರ್ತಿಕೋತ್ಸವ ಸಂಪನ್ನಗೊಂಡಿತು ಎಂದು ಕಲ್ಲೇಶ್ವರ ಸ್ವಾಮಿ ದೇವಸ್ಥಾನ ಟ್ರಸ್ಟ್, ಕಲ್ಲೇಶ್ವರ ಭಜನಾ ಸಂಘ ತಿಳಿಸಿದೆ.