ಹಾಸನ : ಜಿಲ್ಲೆಯ ಅರಕಲಗೂಡು ತಾಲೂಕು ಅರಸೀಕಟ್ಟೆ ಕಾವಲು ಗ್ರಾಮದ ಸರ್ವೆ ನಂಬರ್ 116 ರಲ್ಲಿ ಕಲ್ಲುಗಣಿಗಾರಿಕೆಗೆ ನೀಡಿರುವ ಅನುಮತಿಯನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಅರಸೀಕಟ್ಟೆ ಕಾವಲು ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
1967ರಲ್ಲಿ ಗೊರೂರು ಜಲಾಶಯ ನಿರ್ಮಾಣ ಸಂದರ್ಭದಲ್ಲಿ ಭೂಮಿ ಕಳೆದುಕೊಂಡ ಸಂತ್ರಸ್ತರ ಕುಟುಂಬಗಳಿಗೆ ಅರಸೀಕಟ್ಟೆ ಕಾವಲು ಗ್ರಾಮದಲ್ಲಿ ಸರ್ಕಾರದಿಂದ ಭೂಮಿಯನ್ನು ಮಂಜೂರಾತಿ ಮಾಡಲಾಯಿತು. ಆದರೆ ಈ ಗ್ರಾಮಕ್ಕೆ ಇಂದಿಗೂ ಸಹ ಸರ್ಕಾರದಿಂದ ಬಸ್ ನಿಲ್ದಾಣ ಶಾಲೆ ಸೇರಿದಂತೆ ಅಗತ್ಯ ಮೂಲ ಸೌಕರ್ಯ ಒದಗಿಸಲಾಗಿಲ್ಲ. ಕಳೆದ 40 ವರ್ಷದಿಂದ ಇಂತಹ ಅವ್ಯವಸ್ಥೆಯಲ್ಲಿ ಜೀವನ ನಡೆಸುತ್ತಿರುವ ಸಂದರ್ಭದಲ್ಲಿ ಗ್ರಾಮದ ಪಕ್ಕದಲ್ಲಿರುವ ಕಲ್ಲು ಬಂಡೆ ಇರುವ ಪ್ರದೇಶದಲ್ಲಿ ಕ್ರಷರ್ ತೆರೆಯಲು ಅನುಮತಿ ನೀಡಿರುವುದು ಸರಿಯಲ್ಲ ಎಂದು ಆರೋಪಿಸಿದರು.
ಈಗಾಗಲೇ ಐದಾರು ಬಾರಿ ಕ್ರಷರ್‌ಗೆ ಅನುಮತಿ ನೀಡಬಾರದು ಎಂದು ಪ್ರತಿಭಟನೆ ಮಾಡಲಾಗಿದೆ. ಆದರೂ ಸಹ ಕಲ್ಲು ಗಣಿಗಾರಿಕೆಗೆ ಪ್ರಾರಂಭವಾಗಿದ್ದು ಜಿಲ್ಲಾಧಿಕಾರಿಗಳು ಕೂಡಲೇ ಸ್ಥಳ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಹಾಗೂ ಈಗ ಅನುಮತಿ ನೀಡಿರುವ ಕಲ್ಲು ಗಣಿಗಾರಿಕೆ ಪ್ರದೇಶ ಪರವಾನಿಗೆಯನ್ನು ರದ್ದು ಮಾಡಬೇಕು ಅಧಿಕಾರಿಗಳು ಕೂಡಲೇ ಕಲ್ಲುಗಣಿಗಾರಿಕೆ ವಿರುದ್ಧ ಕ್ರಮ ಕೈಗೊಳ್ಳಬೇಕು ಇಲ್ಲವಾದರೆ ಬೆತ್ತಲೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಅಲ್ಲದೆ ಹೇಮಾವತಿ ಜಲಾಶಯ ಸಂತ್ರಸ್ತರಿಗೆ ಭೂಮಿ ನೀಡುವ ಸಂದರ್ಭದಲ್ಲಿ ಅಧಿಕಾರಿಗಳ ಎಡವಟ್ಟಿನಿಂದ ಸವೆ ನಂಬರ್‌ಗಳು ಅದಲು ಬದಲಾಗಿದ್ದು ಇದರಿಂದ ಗ್ರಾಮಸ್ಥರ ನಡುವೆ ಭೂಮಿ ಹಂಚಿಕೆ ವಿಚಾರವಾಗಿ ಗೊಂದಲಗಳು ಏರ್ಪಟ್ಟಿದ್ದು ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಕೂಡಲೇ ಕ್ರಮ ವಹಿಸಿ ಅರ್ಹರಿಗೆ ಸರ್ವೇ ನಂಬರನ್ನು ದೃಢೀಕರಿಸಬೇಕು ಎಂದು ಗ್ರಾಮಸ್ಥರಾದ ಕುಮಾರ್ ಆಗ್ರಹಿಸಿದರು.
ರಾಜಶೇಖರ್ ,ದೇವರಾಜು, ಉದಯ್ ಕುಮಾರ್, ಪ್ರಕಾಶ್, ಪ್ರವೀಣ್, ರಘುಪತಿ, ಸತೀಶ್ ಹಾಗೂ ಮಹಿಳೆಯರು ಇತರರು ಇದ್ದರು.