ನಾಪೋಕ್ಲು ಗ್ರಾಮದ ಕಲ್ಲು ಮೊಟ್ಟೆಯಲ್ಲಿ ಉಪಯೋಗಕ್ಕೆ ಇಲ್ಲದ ನೀರಿನ ಟ್ಯಾಂಕ್. 
ಜಿಲ್ಲೆ

ಕಲ್ಲು ಮೊಟ್ಟೆ ಗ್ರಾಮದಲ್ಲಿ ಕುಡಿವ ನೀರಿಗೆ ತತ್ವಾರ

ನಾಪೋಕ್ಲು: ಪಟ್ಟಣಕ್ಕೆ ಹೊಂದಿಕೊಂಡಂತಿರುವ ಕಲ್ಲು ಮೊಟ್ಟೆ ಗ್ರಾಮದಲ್ಲಿ ಕುಡಿಯುವ ನೀರಿಗೆ ತತ್ವಾರ ಉಂಟಾಗಿದೆ.

ಇಲ್ಲಿನ ನಿವಾಸಿಗಳು ನೀರಿನ ಸಮಸ್ಯೆ ಎದುರಿಸುತ್ತಿದ್ದು ಗ್ರಾಮ ಪಂಚಾಯಿತಿ ಯಾವುದೇ ಕ್ರಮ ಕೈಗೊಂಡಿಲ್ಲ. ಬೇಸಿಗೆಯಲ್ಲಿ ನೀರಿಗಾಗಿ ಜನರು ಪರಿತಪಿಸುವಂತಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಸನಿಹವೇ ಕಾವೇರಿ ನದಿ ಹರಿಯುತ್ತಿದ್ದರೂ ಕಲ್ಲು ಮೊಟ್ಟೆಯ ನಿವಾಸಿಗಳಿಗೆ ಮಾತ್ರ ಕುಡಿಯುವ ನೀರಿಗೆ ತೀವ್ರ ಹಾಹಾಕಾರ ತಲೆದೋರಿದೆ. ಪ್ರತಿ ಬಾರಿ ನಾಪೋಕ್ಲು ವ್ಯಾಪ್ತಿಯಲ್ಲಿ ಬೇಸಿಗೆಯಲ್ಲಿ ಒಂದೆರಡು ಬಾರಿ ದೊಡ್ಡ ಮಳೆಯಾಗಿ ನೀರಿಗೆ ತೊಂದರೆ ಆಗುತ್ತಿರಲಿಲ್ಲ. ಈ ವರ್ಷ ಬಿಸಿಲ ಧಗೆ ಹೆಚ್ಚಿದ್ದು, ಇತ್ತೀಚೆಗಷ್ಟೇ ಮಳೆ ಸುರಿದಿದೆ. ನೀರಿಗಾಗಿ ಅವಲಂಬಿಸುತ್ತಿದ್ದ ಬಾವಿ, ಕೊಳವೆಬಾವಿಗಳು ಬತ್ತಿ ಹೋಗಿವೆ. ದಿನನಿತ್ಯದ ಬಳಕೆಯ ನೀರಿಗಾಗಿ ಕಾವೇರಿ ಹೊಳೆಯನ್ನು ಅವಲಂಬಿಸುವಂತೆ ಆಗಿದೆ ಎಂದು ಕಲ್ಲು ಮೊಟ್ಟೆಯ ನಿವಾಸಿ ಆರೋಪಿಸಿದ್ದಾರೆ.

ಈ ವ್ಯಾಪ್ತಿಯಲ್ಲಿ ಈ ವರ್ಷ ಫೆಬ್ರವರಿಯಿಂದಲೇ ನೀರಿನ ಸಮಸ್ಯೆ ತಲೆದೂರಿದೆ. ನೀರಿನ ಟ್ಯಾಂಕ್‌ಗೆ ನೀರು ಪೂರೈಕೆ ಆಗುತ್ತಿಲ್ಲ. ಜನರ ಸಮಸ್ಯೆಗಳಿಗೆ ಗ್ರಾಮ ಪಂಚಾಯಿತಿ ಸ್ಪಂದಿಸುತ್ತಿಲ್ಲ ಎಂದು ಗ್ರಾಮಸ್ಥರು ದೂರಿದರು. ಇದೀಗ ದಿನ ಬಳಕೆಯ ನೀರಿನ ಅವಶ್ಯಕತೆಗಾಗಿ ಇಲ್ಲಿನ ನಿವಾಸಿಗಳು ಕಾವೇರಿ ಹೊಳೆಯನ್ನು ಅವಲಂಬಿಸಿದ್ದಾರೆ. ಕಾವೇರಿ ನದಿಯಿಂದ ಪಿಕ್‌ಅಪ್ ಮೂಲಕ ನೀರು ತಂದು ಪೂರೈಕೆ ಮಾಡಲಾಗುತ್ತಿದೆ. ಗ್ರಾಮ ಪಂಚಾಯಿತಿ ಕಲ್ಲುಮೊಟ್ಟೆ ನಿವಾಸಿಗಳ ನೀರಿನ ಸಮಸ್ಯೆ ನಿವಾರಿಸಲು ತ್ವರಿತವಾಗಿ ಕ್ರಮ ಕೈಗೊಳ್ಳಬೇಕು ಎಂದು ಇಲ್ಲಿನ ನಿವಾಸಿಗಳು ಒತ್ತಾಯಿಸಿದ್ದಾರೆ.

ಕಲ್ಲುಮೊಟ್ಟೆ ಯಲ್ಲಿ ಮೋಟಾರ್ ರಿಪೇರಿಯಾಗಿ ನೀರು ಸರಬರಾಜಿನಲ್ಲಿ ಅಡಚಣೆ ಆಗಿತ್ತು. ಶೀಘ್ರವೇ ಪಂಪ್ ದುರಸ್ತಿಪಡಿಸಲಾಗುವುದು. ಪರ್ಯಾಯವಾಗಿ 5 ಎಚ್‌ಪಿ ಪಂಪ್ ವ್ಯವಸ್ಥೆ ಮಾಡಲಾಗಿದೆ. ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು.
ಚೋದಕ್ಕಿ ಪಿಡಿಒ ನಾಪೋಕ್ಲು ಗ್ರಾಮಪಂಚಾಯಿತಿ