ಜಿಲ್ಲೆ

ಕಲ್ಲು ತೂರಾಟದಲ್ಲಿ  ಆರ್‌ಎಸ್‌ಎಸ್ ಕಾರ್ಯಕರ್ತರು ಇದ್ದರೆಂಬುದನ್ನು ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ

ಮೈಸೂರು: ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟದಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತರು ಭಾಗಿಯಾಗಿದ್ದಾರೆ ಎಂಬುದನ್ನು ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್‌ಎಸ್‌ಎಸ್ ಕಾರ್ಯಕರ್ತರು ಇದ್ದರೆಂಬುದನ್ನು ಸಾಬೀತು ಮಾಡಿದರೆ ನಾನು ರಾಜಕೀಯ ನಿವೃತ್ತಿಯಾಗುವೆ. ಇಲ್ಲದಿದ್ದರೆ ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ರಾಜಕೀಯ ನಿವೃತ್ತಿಯಾಗಲಿ ಎಂದು ಸವಾಲು ಹಾಕಿದರು.

ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಸತೀಶ್ ಅಲಿಯಾಸ್ ಪಾಂಡುರಂಗ ಎಂಬಾತನಿಗೂ, ಬಿಜೆಪಿಗೂ ಸಂಬಂಧವೇ ಇಲ್ಲ. ಆತ ನಮ್ಮ ಪಕ್ಷದ ಕಾರ್ಯಕರ್ತನೇ ಅಲ್ಲ ಎಂದು ತಿಳಿಸಿದರು.

ಪೋಸ್ಟ್ ಹಾಕಿದ್ದು ಸತೀಶ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಮುಸ್ಲಿಂ ಹುಡುಗರು ಎನ್ನುತ್ತಿದ್ದಾರೆ. ಸತೀಶ್‌ಗೆ ಉರ್ದು ಭಾಷೆಯೇ ಗೊತ್ತಿಲ್ಲ. ತಪ್ಪು ಮಾಡಿದ್ದರೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.

ಪಕ್ಷದ, ಆರ್‌ಎಸ್‌ಎಸ್ ಕಾರ್ಯಕ್ರಮಗಳಲ್ಲಿ ಯಾರೋ ಬಂದು ಫೋಟೋ ತೆಗೆಸಿಕೊಳ್ಳುತ್ತಾರೆ. ಅದಕ್ಕೂ ನಮಗೂ ಸಂಬಂಧವಿಲ್ಲ. ಗಲಭೆಯಲ್ಲಿ ಆರ್‌ಎಸ್‌ಎಸ್‌ನವರು ಭಾಗಿಯಾಗಿಲ್ಲ ಎಂದರು.