ತುಮಕೂರು : ಕುಣಿಗಲ್ ತಾಲೂಕು ಪಿ.ಹೊನ್ನಮಾಚನಹಳ್ಳಿ ಸ.ನಂ 82ರಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿ ಸ್ಥಳೀಯರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ರೈತ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ಆನಂದಪಟೇಲ್ ಮಾತನಾಡಿ, ಕ್ರಷರ್ ನಡೆಯುತ್ತಿರುವ ಪಿ.ಹೊನ್ನಮಾಚನಹಳ್ಳಿ ಸುತ್ತಮುತ್ತಲ ಬೀಸೆಗೌಡನದೊಡ್ಡಿ, ರಾಜಪ್ಪನದೊಡ್ಡಿ, ಮಠದದೊಡ್ಡಿ, ಕಾಮಿದೊಡ್ಡಿ, ಕೆಬ್ಬಳ್ಳಿ, ಉಜ್ಜಯಿನಿ, ಹಿತ್ತಲಪುರ, ನಿಡಶಾಲೆಯಲ್ಲಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.
ಕ್ರಷರ್‌ನಿಂದ ಬರುವ ಧೂಳು, ಈ ಭಾಗದ ಪ್ರಮುಖ ಬೆಳೆಯಾಗಿರುವ ರೇಷ್ಮೆ ಹುಳುಗಳಿಗೆ ಆಹಾರವಾದ ಹಿಪ್ಪುನೇರಳೆ ಗಿಡದ ಮೇಲೆ ಬಿದ್ದ ಕಲ್ಲಿನ ಕಣ ತಿಂದು ರೇಷ್ಮೆ ಬೆಳೆ ಕೈಹತ್ತದಂತಾಗಿ ರೈತರು ಕಂಗಾಲಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕ್ರಷರ್ ಸುತ್ತಮುತ್ತಲ ಹಳ್ಳಿಗಳಿಗೆ ಇರುವುದು ಒಂದೇ ಕೆರೆಗೆ ಹೊಂದಿಕೊಂಡಂತೆಯೇ ಗಣಿಗಾರಿಕೆ ನಡೆಯುತ್ತಿರುವುದರಿಂದ ಧೂಳು ಕೆರೆಗೆ ತುಂಬಿ, ಇದರ ನೀರು ಕುಡಿದ ಸೀಮೆ ಹಸುಗಳು ಸಾವನ್ನಪ್ಪಿವೆ ಎಂದರು.
ಪೊಲೀಸ್ ಠಾಣೆಗೆ ದೂರು ನೀಡಿದರೆ, ದೂರದಾರರ ವಿರುದ್ಧವೇ ಇಲ್ಲ, ಸಲ್ಲದ ಕೇಸ್ ಹಾಕುವ ಬೆದರಿಕೆ ವೊಡ್ಡಿ, ಕ್ರಷರ್ ತಂಟೆಗೆ ಹೋಗದಂತೆ ಪೊಲೀಸರು ಎಚ್ಚರಿಕೆ ನೀಡುತ್ತಿದ್ದಾರೆ. ಇದರ ವಿರುದ್ಧ ಹತ್ತಾರು ಗ್ರಾಮಗಳ ಮಹಿಳೆಯರು ಕಳೆದ 8 ದಿನಗಳಿಂದ ಪಿ.ಹೊನ್ನಮಾಚನಹಳ್ಳಿಯ ಕ್ರಷರ ಬಳಿ ಪ್ರತಿಭಟನೆ ನಡೆಸುತ್ತಿದ್ದರೂ ಯಾವ ಅಧಿಕಾರಿಯೂ ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದರು. ಬೀಸೆಗೌಡನದೊಡ್ಡಿ ಗ್ರಾಮದ ಗೀತಮ್ಮ ಮಾತನಾಡಿ, ಕಳೆದ ಎರಡು ವರ್ಷಗಳಿಂದ ಕ್ರಷರ್‌ನಿಂದಾಗುತ್ತಿರುವ ತೊಂದರೆಗಳ ಬಗ್ಗೆ ಅಧಿಕಾರಿಗಳಿಗೆ ಮನವಿ ನೀಡಿ ಸಾಕಾಗಿದೆ ಎಂದು ಗೋಳು ತೋಡಿಕೊಂಡರು. ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಅವರಿಗೆ ಮನವಿ ಸಲ್ಲಿಸಲಾಯಿತು.
ಶಾಸಕ ಡಾ.ಎಚ್.ಡಿ.ರಂಗನಾಥ್ ಹಾಗೂ ಇತರರ ಹೆಸರಿನಲ್ಲಿ ಕಲ್ಲುಗಣಿಗಾರಿಕೆ ನಡೆಯುತ್ತಿದೆ. ಕೊಳವೆ ಬಾವಿ ಕೊರೆಯುವ ಯಂತ್ರದಿಂದ 25 ಅಡಿ ಅಳದ ಗುಂಡಿ ತೋಡಿ, ಸ್ಫೋಟಿಸುವುದರಿಂದ ಮನೆಗಳ ಗೋಡೆಗಳು ಬಿರುಕು ಬಿಟ್ಟಿವೆ. ಅಲ್ಲದೆ ನೀರಿನ ಸೆಲೆಗಳು ಚದುರಿ ಕೊಳವೆಬಾವಿ ಬತ್ತುತ್ತಿವೆ. ಆನಂದಪಟೇಲ್ ಜಿಲ್ಲಾಧ್ಯಕ್ಷ, ರೈತ ಸಂಘ ಮತ್ತು ಹಸಿರುಸೇನೆ