ಹಾಸನ: ತಾಲೂಕಿನ ಶಾಂತಿಗ್ರಾಮ ಹೋಬಳಿ ಚಿಗಳ್ಳಿ ಗ್ರಾಮದಲ್ಲಿ ಹಲವು ವರ್ಷದಿಂದ ಕಲ್ಲು ಗಣಿಗಾರಿಕೆ ಮತ್ತು ಕ್ರಷರ್‌ನಿಂದ ಸಾಕಷ್ಟು ಸಮಸ್ಯೆಯಾಗುತ್ತಿದ್ದು, ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟವರಿಗೆ ದೂರು ನೀಡಿದ್ದರು ಕೂಡ ಯಾವುದೇ ರೀತಿ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಗ್ರಾಮಸ್ಥ ಸುನೀಲ್ ಮಾತನಾಡಿ, ರಾಮೇಗೌಡ ಅವರ ಮಾಲೀಕತ್ವದ ಶ್ರೀ ಲಕ್ಷ್ಮಿದೇವಿ ಎಂಸ್ಯಾಂಡ್ ಮತ್ತು ಸ್ಟೋನ್ ಕ್ರಷನಿರ್ಂದ ಚಿಗಳ್ಳಿ ಗ್ರಾಮದ ಸರ್ವೆ ನಂ.38 ಹಾಗು ಅಂಕನಹಳ್ಳಿ ಸರ್ವೆ ನಂ.24 ರಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿರುವುದರಿಂದ ಅಕ್ಕಪಕ್ಕದ ಜಮೀನಿನ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಪ್ರಶ್ನೆ ಮಾಡಿದರೆ ರೈತರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ಗ್ರಾಮದೊಳಗೆ ಟಿಪ್ಪರ್ಗಳ ಸಂಚಾರದಿಂದ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ಕ್ರಷನಿರ್ಂದ ಗ್ರಾಮದೊಳಗೆ ಧೂಳು ಬರುತ್ತಿರುವುದರಿಂದ ಗ್ರಾಮಸ್ಥರು ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.
ಕಲ್ಲು ಗಣಿಗಾರಿಕೆ ಮತ್ತು ಕ್ರಷರ್‌ನಿಂದ ಗ್ರಾಮಸ್ಥರು ನಿತ್ಯಯಾತನೆ ಅನುಭವಿಸುವಂತಾಗಿದೆ. ಜಿಲ್ಲಾಧಿಕಾರಿ ಈ ಬಗ್ಗೆ ಗಮನಹರಿಸಿ ಪರವಾನಗಿ ರದ್ದುಗೊಳಿಸಬೇಕು. ಹಗಲು-ರಾತ್ರಿ ಎನ್ನದೆ ನಿರಂತರವಾಗಿ ಗಣಿಗಾರಿಕೆ, ಕ್ರಷರ್ ನಡೆಯುತ್ತಿರುವುದರಿಂದ ಶಬ್ದ ಮಾಲಿನ್ಯ, ವಾಯು ಮಾಲಿನ್ಯವಾಗುತ್ತಿದೆ. ಕಲ್ಲು ಗಾಣಿಗರಿಕೆಯಿಂದ ಗ್ರಾಮದ ಮನೆ ಗೋಡೆಗಳು ಬಿರುಕು ಬಿಟ್ಟಿವೆ. ಈ ಬಗ್ಗೆ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆಲ್ಲ ಗಣಿ ಮತ್ತು ಭೂವಿಜ್ಞಾನ ಇಲಾಖೆ, ವಾಯು ಮಾಲಿನ್ಯ ಮಂಡಳಿ, ಗಣಿ ಇಲಾಖೆ, ಜಿಲ್ಲಾಡಳಿತದ ನಿರ್ಲಕ್ಷ್ಯವೇ ಕಾರಣವಾಗಿದೆ ಎಂದು ದೂರಿದರು. ಕ್ರಷರ್ ಮಾಲೀಕರ ದೌರ್ಜನ್ಯದಿಂದ ಗ್ರಾಮದ ನೆಮ್ಮದಿ ಹಾಳಾಗಿದೆ. ಕ್ರಷರ್ ಧೂಳಿನಿಂದ ಯಾವುದೇ ಬೆಳೆ ಬೆಳೆಯಲು ಆಗುತ್ತಿಲ್ಲ. ಇದನ್ನೆಲ್ಲ ಮನಗಂಡು ಜಿಲ್ಲಾಧಿಕಾರಿ ಸ್ಥಳ ಪರಿಶೀಲನೆ ನಡೆಸಿ, ಕಲ್ಲು ಗಣಿಗಾರಿಕೆ, ಕ್ರಷರ್ಗೆ ನೀಡಿರುವ ಪರವಾನಗಿಯನ್ನು ರದ್ದುಪಡಿಸಿ ಗ್ರಾಮಸ್ಥರು, ರೈತರು ನೆಮದ್ದಿಯಾಗಿ ಬದುಕಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಗ್ರಾಮಸ್ಥರಾದ ಪ್ರಮೋದ್, ರಘು, ವಿನಯ್, ಮಹೇಶ್ ಹಾಜರಿದ್ದರು.