ತುರುವೇಕೆರೆ ; ಕೋಳಘಟ್ಟ ಗ್ರಾಮದ ಬಳಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆ ಮತ್ತು ಜಲ್ಲಿ ಕ್ರಷರ್ ನಿಲ್ಲಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ಕೋಳಘಟ್ಟ ಗ್ರಾಮಸ್ಥರು ಸೋಮವಾರ ತಾಲೂಕು ಕಚೇರಿ ಮುಂಭಾಗ ಅಹೋರಾತ್ರಿ ಧರಣಿ ಆರಂಭಿಸಿದರು.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಾಗಿ ಕಲ್ಲು ಗಣಿಗಾರಿಕೆಗೆ ಅವಕಾಶ ನೀಡಲಾಗಿದೆ ಎನ್ನುವುದಾದರೆ ರಾಷ್ಟ್ರೀಯ ಹೆದ್ದಾರಿಯವರು ಕಲ್ಲುಗಣಿಕಾರಿಕೆ ಮಾಡಿಕೊಂಡು ಬಳಸಿಕೊಳ್ಳಬೇಕು. ಆದರೆ, ವಿಶ್ವನಾಥ ಎಂಟರ್‌ಪ್ರೈಸಸ್ ಎಂಬುವರಿಗೆ ಕಲ್ಲುಗಣಿಗಾರಿಕೆ ಮಾಡಲು ಸರ್ಕಾರ ಆದೇಶ ನೀಡಿದೆ. ಇವರಿಗೂ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೂ ಏನು ಸಂಬಂಧ? ಇದರ ಆದೇಶ ಇದ್ದರೆ ನೀಡಿ ಇದರ ಹಿನ್ನೆಲೆ ಏನು ಎಂದು ತಹಸೀಲ್ದಾರ್ ನಯೀಂ ಇನ್ನಿಸಾ ಅವರನ್ನು ರೈತ ಸಂಘದ ಜಿಲ್ಲಾಧ್ಯಕ್ಷ ಆನಂದ್ ಪಟೇಲ್ ಪ್ರಶ್ನಿಸಿದರು.
ತಾಲೂಕು ಆಡಳಿತ ಕುಸಿದಿದ್ದು, ರೈತರಿಗೆ ನ್ಯಾಯ ಸಿಗುತ್ತಿಲ್ಲ. ಕಲ್ಲು ಗಣಿಕಾರಿಕೆ ಮಾಡುವ ಮುನ್ನಾ ಸ್ಥಳೀಯ ರೈತರಿಗೆ ಮಾಹಿತಿ ನೀಡದೆ ರೈತರಮನವೊಲಿಸದೆ, ರೈತರ ವಿರೋಧವಿದ್ದರೂ ಕಲ್ಲು ಗಣಿಗಾರಿಕೆ ಮಾಡುತ್ತಿರುವುದು ರಾಜಕೀಯ ಮುಖಂಡರು ಹಾಗೂ ಅಧಿಕಾರಿಗಳ ಕೈವಾಡದ ಶಂಕೆ ಮೂಡಿಸಿದೆ. ಕೋಳಘಟ್ಟ ಗ್ರಾಮ ಮಾತ್ರವಲ್ಲದೆ ತಾಲೂಕಿನ ಅಳಿವು ಉಳುವಿನ ಪ್ರಶ್ನೆಯಾಗಿದೆ. ಕೂಡಲೇ ಜಿಲ್ಲಾಧಿಕಾರಿ ಸ್ಥಳಕ್ಕೆ ಆಗಮಿಸಿ ಕಲ್ಲು ಗಣಿಗಾರಿಕೆಯನ್ನು ರದ್ದು ಗೊಳಿಸಬೇಕು ಎಂದು ಆನಂದ್ ಪಟೇಲ್ ಒತ್ತಾಯಿಸಿದರು.
ಕೋಳಘಟ್ಟದಿಂದ ಪಾದಯಾತ್ರೆ : ತಾಲೂಕಿನ ಕೋಳಘಟ್ಟ ಗ್ರಾಮದಿಂದ ಹೊರಟ ನೂರಾರು ರೈತರು ಪಾದಯಾತ್ರೆ ಮೂಲಕ ಮಾವಿನಹಳ್ಳಿ, ಗಂಗನಹಳ್ಳಿ, ಲೋಕಮ್ಮನಹಳ್ಳಿ ಮಾರ್ಗವಾಗಿ ತಾಲೂಕು ಕಚೇರಿ ತಲುಪಿದರು. ಕಚೇರಿ ಮುಂಭಾಗ ಶಾಮಿಯಾನ ಹಾಕಿ ಅಹೋರಾತ್ರಿ ಧರಣಿ ಶುರು ಮಾಡಿದರು. ಪ್ರತಿಭಟನೆ ಹಿನ್ನೆಲೆಯಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ರೈತ ಸಂಘ ರಾಜ್ಯ ಉಪಾಧ್ಯಕ್ಷ ಕೆಂಕೆರೆಸತೀಶ್, ತಾಲೂಕು ಅಧ್ಯಕ್ಷ ತಾಳಕೆರೆನಾಗೇಂದ್ರ, ಜಿಲ್ಲಾ ಕಾರ್ಯದರ್ಶಿ ಹಳೇಸಂಪಿಗೆ ಕೀರ್ತಿ, ಎಪಿಎಂಸಿ ಮಾಜಿ ಅಧ್ಯಕ್ಷ ರೇಣಕಪ್ಪ, ಸಿಐಟಿಯು ಸತೀಶ್, ಬೀದಿಬದಿವ್ಯಾಪಾರಿ ಸಂಘದ ಅಧ್ಯಕ್ಷ ಮಾರುತಿ, ಮುಖಂಡರಾದ ಶಂಕರಲಿಂಗಪ್ಪ, ಮಂಜಣ್ಣ, ಈಶಣ್ಣ, ಕುಮಾರಣ್ಣ, ರಾಜೀವ್, ಯೋಗೀಶ್, ಜಯಕುಮಾರ್, ಕುಮಾರ್, ದುಂಡಾಶಿವಕುಮಾರ್ ಹಾಗೂ ಕೋಳಘಟ್ಟ, ಕೋಳಘಟ್ಟ ಕಾವಲ್, ನೆಮ್ಮದಿ ಗ್ರಾಮ, ಶಾಂತಿ ಗ್ರಾಮ ಇದ್ದರು.