ಕೋಲಾರ: ಟೇಕಲ್ ಸುತ್ತಮುತ್ತಲಿನ ಬೆಟ್ಟಗಳಲ್ಲಿ ಕಲ್ಲುಗಣಿಗಾರಿಕೆ (ಕಲ್ಲುಕುಟಿಕರು)ಯಲ್ಲಿ ತೊಡಗಿರುವ ಸ್ಥಳಿಯರಿಗೆ ಸರ್ಕಾರ ರಕ್ಷಣೆ ನೀಡಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಭರವಸೆ ನೀಡಿದರು.
ತಾಲೂಕಿನ ಹುನಸೀಕೋಟೆ ಬಳಿಯ ಪಟಾಲಮ್ಮ ದೇವಾಲಯ ಆವರಣದಲ್ಲಿ ಭಾನುವಾರ ಕಲ್ಲುಕುಟಿಕರ ಸಂ ಆಯೋಜಿಸಿದ್ದ ಕಾರ್ಮಿಕರ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.
ಈ ಭಾಗದಲ್ಲಿ ಕಲ್ಲು ಗಣಿಗಾರಿಕೆಗೆಂದು ಸರ್ಕಾರ 113 ಬ್ಲಾಕ್ಗಳನ್ನು ವಿಂಗಡಿಸಿದ್ದು 1 ಸಾವಿರಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಸ್ಥಳಿಯರ ಜತೆ ಬೇರೆ ಕಡೆಯವರು, ಬಂಡವಾಳಗಾರರು, ಲಾಭ ಮಾಡಿಕೊಳ್ಳಲಿಕ್ಕಾಗಿ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಜಿಲ್ಲಾಡಳಿತ ಅರ್ಜಿ ಹೆಚ್ಚಿಗೆ ಬಂದಿರುವ ಹಿನ್ನೆಲೆಯಲ್ಲಿ ಲಾಟರಿ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಲು ಮುಂದಾಗಿತ್ತು. ಆದರೆ ನಾನು ಪತ್ರ ಬರೆದು ಕೂಡಲೇ ನೋಟಿಫಿಕೇಷನ್ ತಡೆ ಹಿಡಿಯುವಂತೆ ಸೂಚಿಸಿದ್ದು, ಅದರಂತೆ ಜಿಲ್ಲಾಧಿಕಾರಿ ತಡೆಹಿಡಿದಿದ್ದಾರೆ ಎಂದರು.
ಅರ್ಜಿ ಸಲ್ಲಿಸಿರುವ 113 ಮಂದಿ ಸ್ಥಳಿಯ ಕಲ್ಲುಕುಟುಕರಾಗಿದ್ದು, ದಾಖಲೆ ಸರಿಯಾಗಿ ಒದಗಿಸಿದರೆ ಪ್ರಸ್ತುತ ಕಲ್ಲುಗಣಿಗಾರಿಕೆ ಮಾಡುತ್ತಿರುವ ಕಡೆಯೇ ರಾಜಧನ ಕಟ್ಟಿಸಿಕೊಂಡು ಪರವಾನಗಿ ನೀಡಲಾಗುವುದು. ಅಲ್ಲಿಯತನಕ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು, ಪೊಲೀಸರು ನಿಮ್ಮ ತಂಟೆಗೆ ಬರುವುದಿಲ್ಲ. ಸ್ಥಳಿಯರಲ್ಲದವರು ಅರ್ಜಿ ಸಲ್ಲಿಸಿದ್ದರೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿ ಎಂದು ಕಲ್ಲುಗಣಿಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ಸ್ಥಳಿಯರಿಗೆ ಸೂಚಿಸಿದರು.
ಸಂಸದ ಮುನಿಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ 5 ರಿಂದ 6 ಸಾವಿರ ಮಂದಿ ಕಲ್ಲು ವ್ಯಾಪಾರ ಮಾಡಿ ಬದುಕುವವರಿದ್ದಾರೆ. 2 ರಿಂದ 3 ಲಕ್ಷ ಮಂದಿ ಅವಲಂಬಿತರಿದ್ದಾರೆ. ಆನ್ಲೈನ್ ಅರ್ಜಿ ಹಾಕಿರುವುದರಿಂದ ಸ್ಥಳಿಯರಿಗೆ ತೊಂದರೆಯಾಗಿದೆ. ಸರ್ಕಾರ 113 ಬ್ಲಾಕ್ಗಳಿಗೆ ಅರ್ಜಿ ಕರೆದರೆ 400 ಮಂದಿ ಬೇರೆ ಕಡೆಯವರು ಅರ್ಜಿ ಸಲ್ಲಿಸಿದ್ದಾರೆ. ಆದರೆ ಸ್ಥಳಿಯರಿಗೆ ಆದ್ಯತೆ ನೀಡಬೇಕಿದ್ದು, ಪ್ರಸ್ತುತ ನೀವು ಕಲ್ಲುಬಂಡೆಗಳನ್ನು ಸೀಳುತ್ತಿರುವ ಕಡೆಯೇ ನಿಮಗೆ ಪರವಾನಗಿ ನೀಡಲು ಸರ್ಕಾರ ಸಿದ್ಧವಿದೆ ಎಂದರು.
ಮಾಲೂರು ಮಾಜಿ ಶಾಸಕ ಮಂಜುನಾಥಗೌಡ ಮಾತನಾಡಿ, ಬಡವರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಸ್ಥಳಿಯರು 30 ರಿಂದ 40ವರ್ಷದಿಂದ ಕಲ್ಲು ಬಂಡೆ ಕೆಲಸ ಮಾಡಿಕೊಂಡು ಬರುತ್ತಿದ್ದು, ಬಂಡವಾಳಗಾರರು ಬಂದು ಅರ್ಜಿ ಸಲ್ಲಿಸಿ ಪರವಾನಗಿ ಹೊಂದಲು ಯತ್ನಿಸುತ್ತಿದ್ದಾರೆ. ಅಂತಹವರಿಗೆ ಗಣಿಗಾರಿಕೆಗೆ ಅವಕಾಶ ಸಿಕ್ಕರೆ ಸ್ಥಳಿಯರನ್ನು ಹೆದರಿಸುವ ಕೆಲಸ ಮಾಡುತ್ತಾರೆ ಎಂದರು.
ಜಿಲ್ಲಾಧಿಕಾರಿ ವೆಂಕಟ್ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ದೇವರಾಜ್, ಸ್ಥಳಿಯ ಮುಖಂಡ ರಮೇಶ್ಗೌಡ, ಹುಣಸೀಕೋಟೆ ಸೊಣ್ಣಪ್ಪ ಇತರರು ಇದ್ದರು.