ಹಲಗೂರು: ಇಲ್ಲಿನ ಸರ್ಕಾರಿ ಪ್ರಾಥಮಿಕ ಬಾಲಕಿಯರ ಶಾಲಾ ಆವರಣದಲ್ಲಿ ಶುಕ್ರವಾರ ರಾತ್ರಿ ಅಪರಿಚಿತರು ವ್ಯಕ್ತಿಯೊಬ್ಬನ ತಲೆ ಮೇಲೆ ದಿಂಡುಗಲ್ಲು ಎತ್ತಿಹಾಕಿ ಹತ್ಯೆ ಮಾಡಿದ್ದಾರೆ.
ಮೃತನನ್ನು ಮೈಸೂರಿನ ಕುವೆಂಪುನಗರದ ನಿವಾಸಿ ರಂಗಸ್ವಾಮಿ ಅವರ ಮಗ ರಮೇಶ್ (31) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಜಗಳ ಮಾಡಿಕೊಂಡು ಮನೆಬಿಟ್ಟು ಎಂಟು ವರ್ಷಗಳಿಂದ ಹಲಗೂರಿನಲ್ಲಿ ಸಂಬಂಧಿಕನ ಜತೆ ಗಾರೆ ಕೆಲಸ ಮಾಡುತ್ತಾ ಜೀವನ ನಡೆಸುತ್ತಿದ್ದ. ನಂತರದ ಮೂರು ವರ್ಷಗಳಿಂದ ಚಿಂದಿ ಹಾಗೂ ಪ್ಲಾಸ್ಟಿಕ್ ಬಾಟಲ್ ಸಂಗ್ರಹಿಸಿ ಜೀವನ ಸಾಗಿಸುತ್ತಿದ್ದ ಎನ್ನಲಾಗಿದೆ. ಈತನ ಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್ಪಿ ಕೃಷ್ಣಪ್ಪ, ಹಲಗೂರು ವೃತ್ತ ನಿರೀಕ್ಷಕ ಶ್ರೀಧರ್, ಕೆ.ಎಂ.ದೊಡ್ಡಿ ವೃತ್ತ ನಿರೀಕ್ಷಕ ಆನಂದ್, ಶ್ವಾನ ದಳ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹಲಗೂರು ಪೊಲೀಸ್ ಠಾಣೆಯ ಪಿಎಸ್ಸೈಲೋಕೇಶ್ ಹಾಗೂ ಬೆಳಕವಾಡಿ ಠಾಣೆಯ ಪಿಎಸ್ಸೈ ಪ್ರಕಾಶ್ ಪ್ರಾಥಮಿಕ ತನಿಖೆ ಕೈಗೊಂಡಿದ್ದಾರೆ. ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆ ಕಾರ್ಯ ಕೈಗೊಂಡಿದ್ದಾರೆ.