ಕಾರವಾರ: ಇಸ್ರೇಲ್ ಮಾದರಿ ಅನುಸರಿಸುವ ಮೂಲಕ ಬಂಪರ್ ಕಲ್ಲಂಗಡಿ ಬೆಳೆದಿದ್ದ ಕಾರವಾರದ ರೈತರಿಗೆ ಬೆಲೆ ಕೈಕೊಟ್ಟಿದೆ. ಕರೊನಾ ಮಹಾ ಮಾರಿ, ಲಾಕ್ಡೌನ್ ಕಾರಣದಿಂದ ಕಲ್ಲಂಗಡಿ ಬೆಲೆಯಲ್ಲಿ ಭಾರಿ ಇಳಿಕೆಯಾಗಿದ್ದು, ರೈತರು ಕಂಗಾಲಾಗಿದ್ದಾರೆ. ಕಾರವಾರ ತಾಲೂಕಿನ ಮುಡಗೇರಿ, ಭೈರಾ, ಉಳಗಾ ಸೇರಿ ವಿವಿಧೆಡೆ ಈಬಾರಿ 150 ಎಕರೆಯಷ್ಟು ಕಲ್ಲಂಗಡಿ ಬೆಳೆಯಲಾಗಿತ್ತು. ಅದರಲ್ಲಿ ಸಾಕಷ್ಟು ರೈತರು ಇಸ್ರೇಲ್ ಮಾದರಿಯ ಪ್ಲಾಸ್ಟಿಕ್ ಮುಚ್ಚಿಗೆ (ಮಲ್ಚಿಂಗ್)ಹಾಗೂ ಹನಿ ನೀರಾವರಿ ವ್ಯವಸ್ಥೆ ಮಾಡಿ, ಉತ್ತಮ ಇಳುವರಿ ಪಡೆದಿದ್ದರು. ಕಳೆದ ಬಾರಿ ಉತ್ತಮ ದರ್ಜೆಯ ಪ್ರತಿ ಕೆಜಿ ಹಣ್ಣಿಗೆ 12 ರೂ. ಬೆಲೆ ಸಿಕ್ಕಿತ್ತು. ಈ ಬಾರಿ ಕೇವಲ 3 ರಿಂದ 4 ರೂ. ಬೆಲೆ ಸಿಗುತ್ತಿದೆ. ಬೆಳೆಯನ್ನು ಹೆಚ್ಚು ದಿನ ಇಡಲೂ ಸಾಧ್ಯವಿಲ್ಲದ ಕಾರಣ ಸಿಕ್ಕ ಬೆಲೆಗೆ ರೈತರು ಮಾರಾಟ ಮಾಡುತ್ತಿದ್ದಾರೆ. ಕಾರವಾರದಲ್ಲಿ ಕಳೆದ ಐದು ದಿನದಿಂದ ಕಲ್ಲಂಗಡಿ 67 ಲಾರಿಗಳಲ್ಲಿ 600 ಟನ್ ಹುಬ್ಬಳ್ಳಿ, ಮಂಗಳೂರು, ಕೇರಳ ಹಾಗೂ ಗೋವಾಕ್ಕೆ ರಫ್ತಾಗಿದೆ. ಇನ್ನೂ 1 ಸಾವಿರ ಟನ್ಗಳಷ್ಟು ಕಲ್ಲಂಗಡಿ ಇನ್ನೂ ಮಾರಾಟಕ್ಕೆ ಬಾಕಿ ಇದೆ.
ಈ ಬೆಳೆಯನ್ನು ಸಂಗ್ರಹಿಸಿ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಇದರಿಂದ ಬಂದ ಬೆಲೆಗೆ ಮಾರಾಟ ಮಾಡುತ್ತಿದ್ದೇವೆ. ಹೆಚ್ಚಿನ ಲಾಭದ ನಿರೀಕ್ಷೆ ಇತ್ತು. ಕರೊನಾ ಕಾರಣ ಬೆಲೆ ಕುಸಿದು ತೊಂದರೆ ಉಂಟಾಯಿತು. | ಅನಿಲ ದೇಸಾಯಿ ಕಲ್ಲಂಗಡಿ ಬೆಳೆಗಾರ
ಎಲ್ಲೆಡೆ ಲಾಕ್ಡೌನ್ ಇರುವುದರಿಂದ ಕಲ್ಲಂಗಡಿ ಬೆಲೆ ಇಳಿದಿದೆ. ಆದರೆ, ಬೆಳೆ ಮಾರಾಟವಾಗುತ್ತಿದೆ. ಕಾರವಾರದಲ್ಲಿ ಬೆಳೆದ ಸಂಪೂರ್ಣ ಬೆಳೆ ಮಾರಾಟವಾಗುವ ನಿರೀಕ್ಷೆ ಇದೆ. | ಅಕ್ಷಯ ಉಪಾಧ್ಯ ಕಾರವಾರ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ