ಜಿಲ್ಲೆ

ಕಲ್ಲಂಗಡಿಗೂ ಕರೊನಾ ಕರಿಛಾಯೆ

ಮುಂಡರಗಿ: ಕರೊನಾ ವೈರಸ್​ನಿಂದಾಗಿ ಇಡೀ ದೇಶವೇ ಸ್ತಬ್ಧವಾಗಿದ್ದು, ರೈತರು ತಮ್ಮ ಬೆಳೆ ಮಾರಾಟ ಮಾಡಲು ಪರದಾಡುವಂತಾಗಿದೆ. ಬೇಸಿಗೆಯಲ್ಲಿ ಬಹುಬೇಡಿಕೆ ಇರುತ್ತಿದ್ದ ಕಲ್ಲಂಗಡಿ ಬೆಳೆದಿದ್ದ ರೈತರೊಬ್ಬರು ಅವುಗಳನ್ನು ಮಾರಾಟ ಮಾಡಲಾಗದೆ ತಾವೇ ನಾಶ ಮಾಡುತ್ತಿದ್ದಾರೆ.

ತಾಲೂಕಿನ ಹೆಸರೂರ ಗ್ರಾಮದಲ್ಲಿ ರೈತ ವಿಶ್ವನಾಥ ಗಡ್ಡದ ಅವರು ತಮ್ಮ 3 ಎಕರೆ ಜಮೀನಿನಲ್ಲಿ ಕಲ್ಲಂಗಡಿ ಬೆಳೆದಿದ್ದರು. ಬೀಜ, ಗೊಬ್ಬರ, ಔಷಧ, ಕೂಲಿ ಸೇರಿ 75 ಸಾವಿರ ರೂ. ಖರ್ಚು ಮಾಡಿದ್ದರು. ಕರೊನಾ ಎಫೆಕ್ಟ್​ನಿಂದಾಗಿ ಕಷ್ಟಪಟ್ಟು ಬೆಳೆದಿದ್ದ ಕಲ್ಲಂಗಡಿಯನ್ನು ಮಾರಲಾಗದೆ ಬೇಸರಗೊಂಡು ಕಲ್ಲಂಗಡಿ ಬೆಳೆದಿದ್ದ ಮೂರು ಎಕರೆ ಪ್ರದೇಶವನ್ನು ಭಾನುವಾರ ಟ್ರ್ಯಾಕ್ಟರ್ ಮೂಲಕ ರಂಟೆ ಹೊಡೆಯುವ ಮೂಲಕ ಸಂಪೂರ್ಣ ನಾಶ ಮಾಡಿದ್ದಾರೆ.

ಅಲ್ಪಾವಧಿ ಬೆಳೆ 70 ದಿನದೊಳಗೆ ರೈತನ ಕೈಸೇರುವ ಕಲ್ಲಂಗಡಿ ಫಸಲು ಕೈ ಹಿಡಿದೀತು ಎಂಬ ಆಸೆಯಿಂದ ಕಷ್ಟಪಟ್ಟು ಬೆಳೆದಿದ್ದರು. ಫಸಲು ಕೈಸೇರಬೇಕಾದ ಅವಧಿ ಪೂರ್ಣಗೊಂಡು 10 ದಿನ ಕಳೆದಿದೆ. ಕಲ್ಲಂಗಡಿ ಹಣ್ಣುಗಳು ಜಮೀನಿನಲ್ಲಿ ಕೊಳೆಯಲಾರಂಭಿಸಿವೆ. ಹೆಸರೂರು ಭಾಗದಲ್ಲಿ ಸುಮಾರು 30 ಎಕರೆ ಪ್ರದೇಶದಲ್ಲಿ ಕಲ್ಲಂಗಡಿ ಬೆಳೆಯಲಾಗಿದೆ. ಶಿವರಾತ್ರಿ ಸಂದರ್ಭದಲ್ಲಿ ಕಲ್ಲಂಗಡಿ ಬೆಳೆದಿದ್ದ ಕೆಲವು ರೈತರು ತಮ್ಮ ಬೆಳೆಯಲ್ಲಿ ಶೇ. 20ರಷ್ಟು ಮಾತ್ರ ಮಾರಾಟ ಮಾಡಿದ್ದರು. ಆದರೆ ಈಗ ಕರೊನಾ ಎಫೆಕ್ಟ್​ನಿಂದಾಗಿ ಕಲ್ಲಂಗಡಿ ಬೆಳೆದ ರೈತರು ತಲೆಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ.

ಬೇಸಿಗೆ ಸಮಯದಲ್ಲಿ ಕಲ್ಲಂಗಡಿಗೆ ಉತ್ತಮ ಬೆಲೆ ಸಿಗುತ್ತದೆ ಎನ್ನುವ ವಿಶ್ವಾಸದಿಂದ ಕಲ್ಲಂಗಡಿ ಬೆಳೆದೆವು. 3 ಎಕರೆಯಲ್ಲಿ 2.5 ಲಕ್ಷ ರೂ. ಲಾಭದ ನಿರೀಕ್ಷೆ ಹೊಂದಿದ್ದೇವು. ಆದರೆ, ಕರೊನಾ ಹೆಮ್ಮಾರಿಯಿಂದಾಗಿ ದೇಶವೇ ಲಾಕ್​ಡೌನ್ ಆಗಿದೆ. ಹೀಗಾಗಿ ಕಲ್ಲಂಗಡಿ ಖರೀದಿಸುವವರೇ ಇಲ್ಲದಾಗಿದೆ. ವ್ಯಾಪಾರಸ್ಥರ್ಯಾರು ಖರೀದಿಗೆ ಮಂದೆ ಬರುತ್ತಿಲ್ಲ. ಹೀಗಾಗಿ ಮಾಡಿದ ಖರ್ಚು ಸಹ ಬರದಂತ ದುಸ್ಥಿತಿ ನಿರ್ವಣವಾಗಿದೆ. ಇದರಿಂದಾಗಿ ರಂಟೆ ಹೊಡೆದು ಕಲ್ಲಂಗಡಿ ಬೆಳೆ ನಾಶ ಮಾಡಲಾಗುತ್ತಿದೆ.| ವಿಶ್ವನಾಥ ಗಡ್ಡದ ಕಲ್ಲಂಗಡಿ ಬೆಳೆದ ರೈತ ಹೆಸರೂರು