ಚಿಕ್ಕಬಳ್ಳಾಪುರ: ಬೇಸಿಗೆ ಪ್ರಾರಂಭಕ್ಕೂ ಮೊದಲೇ ಜಿಲ್ಲೆಯ ವಿವಿಧೆಡೆ ದಾಹ ನೀಗಿಸುವ ಕಲ್ಲಂಗಡಿ, ತಂಪು ಪಾನೀಯಗಳ ಭರ್ಜರಿ ವ್ಯಾಪಾರ ನಡೆಯುತ್ತಿದೆ.ಜಿಲ್ಲೆಯಲ್ಲಿ ನಿಧಾನವಾಗಿ ಉಷ್ಣಾಂಶ ಏರಿಕೆಯಾಗುತ್ತಿದ್ದು, ಬೇಸಿಗೆ ಕಾವು ಗೋಚರವಾಗುತ್ತಿದೆ. ಇದರ ನಡುವೆ ಅನೇಕರು ಕಲ್ಲಂಗಡಿ, ತಂಪು ಪಾನೀಯ, ಎಳನೀರು, ತಾಟಿಲಿಂಗು ಸೇರಿ ಬಾಯಾರಿಕೆ ನೀಗಿಸುವ ಪದಾರ್ಥಗಳ ಸೇವನೆಗೆ ಮುಂದಾಗುತ್ತಿದ್ದಾರೆ. ಈಗಾಗಲೇ ನಗರದ ಪ್ರಮುಖ ರಸ್ತೆಗಳ ಬದಿಯಲ್ಲಿ ಕಲ್ಲಂಗಡಿ ಹಣ್ಣು ಮಾರಾಟ ಅಂಗಡಿಗಳು ತಲೆ ಎತ್ತಿವೆ. ಪ್ರತಿ ವರ್ಷದಂತೆ ಆಂಧ್ರ ಸೇರಿ ಹಲವೆಡೆಯಿಂದ ಲೋಡುಗಟ್ಟಲೇ ಹಣ್ಣು ತರಿಸಿಕೊಂಡು ವ್ಯಾಪಾರಸ್ಥರು ಪ್ರತಿನಿತ್ಯ ಸಾವಿರಾರು ರೂಪಾಯಿ ಆದಾಯ ಗಳಿಸುತ್ತಿದ್ದಾರೆ.
ಈಗಾಗಲೇ ಕಲ್ಲಂಗಡಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಅಂಗಡಿಗಳ ಮುಂಭಾಗ ಹೆಚ್ಚಿನ ಸಂಖ್ಯೆಯಲ್ಲಿ ಜನರು ನಿಂತು, ಕಲ್ಲಂಗಡಿ ಸೇವಿಸುವ ದೃಶ್ಯಗಳು ಕಂಡು ಬರುತ್ತಿವೆ. ಜತೆಗೆ ಹಲವರು ಕೆ.ಜಿ ಲೆಕ್ಕದಲ್ಲಿ ಕಲ್ಲಂಗಡಿ ಹಣ್ಣು ಖರೀದಿಸಿ ಮನೆಗಳಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಸ್ಟುಡಿಯೋ, ಖಾಸಗಿ ಕಂಪನಿ ಸೇರಿ ಅಂಗಡಿಗಳಲ್ಲಿ ಅತಿಥಿಗಳಿಗಾಗಿ ಟೀ, ಕಾಫಿ, ಹಾಲು ತರಿಸಿ ಕೊಡುವುದಕ್ಕೆ ಬ್ರೇಕ್ ಬಿದ್ದಿದೆ. ತಂಪು ಪಾನೀಯಗಳಿಗೇನೇ ಮೊದಲ ಆದ್ಯತೆ ನೀಡಲಾಗುತ್ತಿದೆ. ಮತ್ತೊಂದೆಡೆ ಕಲ್ಲಂಗಡಿ ಭರ್ಜರಿ ವ್ಯಾಪಾರದ ನಡುವೆ ಸೇಬು, ಕಿತ್ತಲೆ, ಮೋಸಂಬಿ, ಸಪೋಟ, ಖರಬೂಜ, ದಾಳಿಂಬೆ ಸೇರಿ ಬಗೆಬಗೆಯ ತಂಪು ಪಾನಿಯ ಮಾರಾಟದ ಅಂಗಡಿಗಳು ತಲೆ ಎತ್ತಿವೆ. ಮುಂಬರುವ ದಿನಗಳಲ್ಲಿ ಐಸ್ ಕ್ರೀಂ ಮತ್ತು ಐಸ್ ಕ್ಯಾಂಡಿ ಮಾರಾಟಕ್ಕೂ ಕಳೆ ಬರಲಿದೆ.
ಎಳನೀರು, ಮಜ್ಜಿಗೆಗೂ ಬೇಡಿಕೆ: ಸಾಮಾನ್ಯವಾಗಿ ಮಾರ್ಚ್‌ನಲ್ಲಿ ಬೇಸಿಗೆ ದಾಹ ಕಾಡುತ್ತಿತ್ತು. ಈ ಬಾರಿ 15 ದಿನಕ್ಕೂ ಮೊದಲೇ ಪ್ರಭಾವ ಬೀರುತ್ತದೆ. ಎಲ್ಲ ದಿನಗಳಲ್ಲೂ ಗಮನ ಸೆಳೆಯುವ ಎಳನೀರಿಗೂ ಬೇಡಿಕೆ ಹೆಚ್ಚಾಗಿದೆ. ಇದರಿಂದ ಎಳನೀರು 25 ರಿಂದ 35 ರೂಪಾಯಿಗೆ ಮಾರಾಟವಾಗುತ್ತಿದೆ. ವಿಜಯಪುರ, ದೇವನಹಳ್ಳಿ ಸೇರಿ ಹಲವೆಡೆಯಿಂದ ಒಳ್ಳೆಯ ಎಳನೀರುಗಳನ್ನು ತಂದು ವ್ಯಾಪಾರಸ್ಥರು ಗ್ರಾಹಕರನ್ನು ಸೆಳೆಯುತ್ತಿದ್ದಾರೆ. ನಂದಿನಿ ಪಾರ್ಲರ್, ಅಂಗಡಿಗಳಲ್ಲಿ ಮಜ್ಜಿಗೆ ಪ್ಯಾಕೇಟುಗಳು ಭರ್ಜರಿ ವ್ಯಾಪಾರ ಕಂಡು ಬರುತ್ತಿದೆ.
ಈ ಬಾರಿ ಜನರು ಕಲ್ಲಂಗಡಿ ಸೇವನೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಬೇಸಿಗೆ ಪ್ರಾರಂಭಕ್ಕೆ ಮೊದಲೇ ಒಳ್ಳೆಯ ವ್ಯಾಪಾರವಾಗುತ್ತಿರುವುದು ಖುಷಿ ವಿಚಾರ. ರಾಜಶೇಖರ್, ಕಲ್ಲಂಗಡಿ ಹಣ್ಣು ಮಾರಾಟಗಾರರು ****** ಈಗ ಬಿಸಿಲಿನ ಬೇಗೆ ಅಷ್ಟಾಗಿ ಇಲ್ಲ. ಆದರೆ, ಮುಂಬರುವ ದಿನಗಳಲ್ಲಿ ಬಿಸಿಲು ಮತ್ತಷ್ಟು ಕಾಡುವುದರಲ್ಲಿ ಅನುಮಾನವಿಲ್ಲ. ಇದಕ್ಕೆ ಸಾಮಾನ್ಯವಾಗಿ ಕಲ್ಲಂಗಡಿ ಸೇರಿದಂತೆ ಬಗೆಬಗೆಯ ಹಣ್ಣಿನ ಪಾನೀಯಗಳನ್ನು ಸೇವಿಸಿ ದಾಹ ನೀಗಿಸಿಕೊಳ್ಳಲಾಗುತ್ತದೆ. ಗಿರಿಜಾ, ಗೃಹಿಣಿ, ಚಿಕ್ಕಬಳ್ಳಾಪುರ