ದಾವಣಗೆರೆ: ಗಾಂಧೀಜಿ- ಶಾಸ್ತ್ರೀಜಿ ಜಯಂತಿ ನಡುವೆಯೇ ನಗರದ ಪರಿಸರ ಪ್ರೇಮಿಗಳು ನಗರದ ವೀರಮದಕರಿನಾಯಕ ವೃತ್ತ ಬಳಿ ಇರುವ ಕಲ್ಯಾಣಿ ಸ್ವಚ್ಛಗೊಳಿಸುವ ಮೂಲಕ ಪ್ರತಿಭಟನೆ ನಡೆಸಿದರು.
ಸ್ಮಾರ್ಟ್‌ಸಿಟಿ ಲಿಮಿಟೆಡ್‌ನಿಂದ 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಕಲ್ಯಾಣಿಯನ್ನು ಸಾರ್ವಜನಿಕ ಪ್ರದರ್ಶನಕ್ಕೆ ಅವಕಾಶ ನೀಡದಿರುವುದು ಹಾಗೂ ಕಾಮಗಾರಿ ಕಳಪೆ ಆರೋಪದ ಹಿನ್ನೆಲೆಯಲ್ಲಿ ಗುತ್ತಿಗೆದಾರರು, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಪರಿಸರ ಸಂರಕ್ಷಣಾ ವೇದಿಕೆ ಅಧ್ಯಕ್ಷ ಗಿರೀಶ್ ಎಸ್.ದೇವರಮನೆ ಮಾತನಾಡಿ ಭಾರತವನ್ನು ಸ್ವಚ್ಛ ವಾಗಿಡಬೇಕೆಂಬುದು ಗಾಂಧೀಜಿ ಕನಸಾಗಿತ್ತು. ಕಸಮುಕ್ತವಲ್ಲದೆ ಭ್ರಷ್ಟಾಚಾರಮುಕ್ತ ದೇಶ ಮಾಡುವ ಆಸೆ ಅವರದಾಗಿತ್ತು. ಕಲ್ಯಾಣಿ ನಿರ್ಮಾಣದಲ್ಲೂ ಕಳಪೆ ಕಾಮಗಾರಿ ನಿರ್ವಹಿಸಲಾಗಿದೆ ಎಂದು ದೂರಿದರು.
ಗುತ್ತಿಗೆದಾರರಿಗೆ ಹಣ ಪಾವತಿಸಿ ವರ್ಷ ಕಳೆದಿದೆ. ತರಾತುರಿಯಲ್ಲಿ ಉದ್ಘಾಟನೆಯಾಗಿದ್ದ ಕಲ್ಯಾಣಿಯನ್ನು ಸಚಿವರು ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕರುನಾಡ ಕನ್ನಡ ಸೇನೆ ಅಧ್ಯಕ್ಷ ಕೆ.ಟಿ. ಗೋಪಾಲ ಗೌಡ, ಸಾಮಾಜಿಕ ಕಾರ್ಯಕರ್ತ ಪ್ರಸನ್ನ ಬೆಳಕೇರಿ, ಪರಿಸರ ಪ್ರೇಮಿಗಳಾದ ರಾಘವೇಂದ್ರ ಶೆಟ್ರು ನಾಗರಾಜ್ ಸುರ್ವೆ, ಪವನ್ ರೇವಣಕರ್, ಮಂಜುನಾಥ್, ರಾಜೇಂದ್ರ ಬಂಗೇರ ಉಮಾದೇವಿ ಇತರರಿದ್ದರು.
--